ಪಶ್ಚಿಮ ಬಂಗಾಳದ ರಾಜಕೀಯ ಚಾಣಕ್ಯ ಎಂದೇ ಖ್ಯಾತರಾಗಿದ್ದ ತೃಣಮೂಲ ಕಾಂಗ್ರೆಸ್ ನ 2ನೇ ನಾಯಕ ಮುಕುಲ್ ರಾಯ್ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.
ಮಾಜಿ ಕೇಂದ್ರ ರೈಲ್ವೆ ಸಚಿವರಾಗಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತರಾಗಿದ್ದ ಮುಕುಲ್ ರಾಯ್ ಕೋಲ್ಕತಾದ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ 1.30ರ ಸುಮಾರಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಬಹು ಅಂಗಾಂಗ ವೈಫಲ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಮುಕುಲ್ ರಾಯ್ ಕೆಲವು ವಾರಗಳ ಹಿಂದೆ ಕೋಮಾಗೆ ಜಾರಿದ್ದರು. ಅನಾರೋಗ್ಯದ ಕಾರಣ ಎರಡು ವರ್ಷಗಳಿಂದ ಅವರು ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಮರೆವು ಕಾಯಿಲೆಯ ಕಾರಣ ಅವರು ಕುಟುಂಬದ ಸದಸ್ಯರನ್ನೇ ಗುರುತು ಹಿಡಿಯದ ಸ್ಥಿತಿಗೆ ತಲುಪಿದ್ದರು. ಸೋಮವಾರ ಅಂತ್ಯಕ್ರಿಯೆ ನೆರವೇರಲಿದೆ.
ಮಮತಾ ಬ್ಯಾನರ್ಜಿ ಆಪ್ತರಾಗಿದ್ದ ಮುಕುಲ್ ರಾಯ್ 2019ರ ಲೋಕಸಭಾ ಚುನಾವಣೆಗೆ 2 ವರ್ಷ ಇರುವಾಗ 2017ರಲ್ಲಿ ದಿಢೀರನೆ ಬಿಜೆಪಿಗೆ ಸೇರಿ ಅಚ್ಚರಿ ಮೂಡಿಸಿದ್ದರು. ಬಿಜೆಪಿಯನ್ನು ಬಂಗಾಳದಲ್ಲಿ ನೆಲೆ ಕಂಡುಕೊಳ್ಳಲು ಪ್ರಮುಖ ಪಾತ್ರ ವಹಿಸಿದ್ದರು. 2019ರ ಚುನಾವಣೆಯಲ್ಲಿ ಬಿಜೆಪಿ 18 ರಿಂದ 42 ಸ್ಥಾನಗಳಲ್ಲಿ ಗೆದ್ದು ದಾಖಲೆ ಬರೆದಿತ್ತು.
2021ರಲ್ಲಿ ಕೃಷ್ಣನಗರ್ ವಿಧಾನಸಭಾ ಕ್ಷೇತ್ರದಿಂಧ ಸ್ಪರ್ಧಿಸಿ ಗೆಲುವು ಕಂಡಿದ್ದರು. ಆದರೆ ಪಕ್ಷ ಹೀನಾಯವಾಗಿ ಸೋಲುಂಡಿತು.



