ಕಠ್ಮಂಡು (ನೇಪಾಳ): ಪ್ರಯಾಣಿಕರಿದ್ದ ಬಸ್ ನದಿಗೆ ಉರುಳಿ ಬಿದ್ದ ಪರಿಣಾಮ 18 ಪ್ರಯಾಣಿಕರು ಮೃತಪಟ್ಟಿರುವ ಘಟನೆ ನೇಪಾಳದ ಧಾಡಿಂಗ್ ಜಿಲ್ಲೆಯ ಗಜುರಿ ಬಳಿ ಸಂಭವಿಸಿದೆ.
ಸೋಮವಾರ ಮುಂಜಾನೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ತ್ರಿಶೂಲಿ ನದಿಗೆ ಉರುಳಿ ಬಿದ್ದಿದ್ದು, 28 ಮಂದಿಯನ್ನು ರಕ್ಷಿಸಲಾಗಿದೆ.
ಬಸ್ ನಲ್ಲಿ 42 ಪ್ರಯಾಣಿಕರಿದ್ದು, ಇದರಲ್ಲಿ 12 ಪುರುಷರು ಮತ್ತು 6 ಮಹಿಳೆಯರು ಇದ್ದರು. ಪ್ರಯಾಣಿಕರು ಗಾಢ ನಿದ್ದೆಯಲ್ಲಿದ್ದಾಗ ಬಸ್ ರಸ್ತೆಯಿಂದ 300 ಅಡಿ ಆಳದ ಕಂದಕಕ್ಕೆ ಉರುಳಿದ ನದಿಗೆ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೋಖರದಿಂದ ಕಠ್ಮಂಡು ಕಡೆಗೆ ಬರುತ್ತಿದ್ದ ಬಸ್, ಪೃಥ್ವಿ ಹೆದ್ದಾರಿಯ ತ್ರಿಶೂಲಿ ನದಿಗೆ ಬೆಳಗಿನ ಜಾವ 1.30ರ ಸುಮಾರಿಗೆ ಉರುಳಿಬಿದ್ದಿದ್ದು, ತೀವ್ರವಾಗಿ ಗಾಯಗೊಂಡ ಈ ಎಲ್ಲ ಪ್ರಯಾಣಿಕರನ್ನು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯ ಕೈಗೊಳ್ಳಲು ನೇಪಾಳ ಸೇನೆ, ಸಶಸ್ತ್ರ ಪೊಲೀಸ್ ಪಡೆ ಮತ್ತು ನೇಪಾಳ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮೃತಪಟ್ಟ ಪ್ರಯಾಣಿಕರ ಪೈಕಿ ನ್ಯೂಜಿಲೆಂಡ್ ದೇಶಕ್ಕೆ ಒಬ್ಬರು ಸೇರಿದ್ದಾರೆ ಎಂದು ಹೇಳಲಾಗಿದೆ. ಗಾಯಗೊಂಡ ಇಬ್ಬರು ಮಹಿಳೆಯರು ಜಪಾನ್ ಮತ್ತು ಡಚ್ ಪ್ರಜೆಗಳಾಗಿದ್ದಾರೆ. ಅಪಘಾತಕ್ಕೆ ನಿಖರವಾದ ಕಾರಣವನ್ನು ಇನ್ನೂ ಖಚಿತಪಡಿಸಲು ಸಾಧ್ಯವಾಗದಿದ್ದರೂ, ಅಪಘಾತದ ಹಿಂದಿನ ಕಾರಣ ಅತಿ ವೇಗವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.



