Thursday, June 25, 2026
Google search engine
Homeಕಾನೂನುಡಾ.ರಾಜ್ ಕುಮಾರ್ ಅಪಹರಣ: 9 ವೀರಪ್ಪನ್ ಸಹಚರರ ಖುಲಾಸೆ ಆದೇಶ ಎತ್ತಿ ಹಿಡಿದ ಮದ್ರಾಸ್ ಹೈಕೋರ್ಟ್

ಡಾ.ರಾಜ್ ಕುಮಾರ್ ಅಪಹರಣ: 9 ವೀರಪ್ಪನ್ ಸಹಚರರ ಖುಲಾಸೆ ಆದೇಶ ಎತ್ತಿ ಹಿಡಿದ ಮದ್ರಾಸ್ ಹೈಕೋರ್ಟ್

ವರನಟ ದಿ.ರಾಜ್‌ಕುಮಾರ್ ಅವರ ಅಪಹರಣ ಪ್ರಕರಣದಲ್ಲಿ ವೀರಪ್ಪನ್ ಸಹಚರರಾದ 9 ಆರೋಪಿಗಳನ್ನು ಖುಲಾಸೆಗೊಳಿಸಿದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಎತ್ತಿ ಹಿಡಿದಿದೆ.

ನ್ಯಾಯಮೂರ್ತಿಗಳಾದ ಪಿ.ವೇಲ್ಮುರುಗನ್ ಮತ್ತು ಎಂ.ಜ್ಯೋತಿರಾಮನ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಬುಧವಾರ 9 ಆರೋಪಿಗಳನ್ನು ಖುಲಾಸೆಗೊಳಿಸಿದ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿಯಿತು. ಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಚೆನ್ನೈ ಪೊಲೀಸರಿಗೆ ಹಿನ್ನಡೆ ಉಂಟಾಗಿದೆ.

ಈರೋಡ್ ಜಿಲ್ಲೆಯ ತಲವಾಡಿ ಪೊಲೀಸರು ವೀರಪ್ಪನ್ ಮತ್ತು ಸಹಚರರಾದ ಸೇತುಕುಳಿ ಗೋವಿಂದನ್, ಚಂದ್ರಗೌಡ, ಮಲ್ಲು, ರಮೇಶ್, ಗೋವಿಂದರಾಜ್, ಆಂಡ್ರಿಲ್, ಪಸುವಣ್ಣ, ಪುಟ್ಟುಸಾಮಿ, ಕಲ್ಮಂಡಿರಾಮನ್, ಮಾರನ್, ಸೆಲ್ವಂ, ಅಮೃತಲಿಂಗಂ ಮತ್ತು ನಾಗರಾಜ್ ಅವರನ್ನು ಖುಲಾಸೆಗೊಳಿಸಲಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ವೇಲ್ಮುರುಗನ್ ಮತ್ತು ಎಂ.ಜ್ಯೋತಿರಾಮನ್ ಅವರ ಪೀಠ, ಈ ಆದೇಶ ಪ್ರಕಟಿಸಿತು. 2000ರ ಜುಲೈ 30ರಂದು ಈರೋಡ್ ಜಿಲ್ಲೆಯ ತಲವಾಡಿ ಬಳಿಯ ದೊಡ್ಡ ಗಾಜನೂರು (ತೊಟ್ಟಕಾಜನೂರು) ತೋಟದ ಮನೆಯಲ್ಲಿ ತಂಗಿದ್ದ ನಟ ರಾಜ್‌ಕುಮಾರ್ ಅವರನ್ನು ವೀರಪ್ಪನ್ ಮತ್ತು ಆತನ ಸಹಚರರು ಅಪಹರಿಸಿದ್ದರು. ಈ ಪ್ರಕರಣವು ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿತ್ತು.

ರಾಜ್​​ಕುಮಾರ್​ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳು ವೀರಪ್ಪನ್‌ ಜೊತೆ ಮಧ್ಯಸ್ಥಿಕೆಗೆ ಎರಡು ತಂಡಗಳನ್ನು ಕಾಡಿಗೆ ಕಳುಹಿಸಿದ್ದವು. ಹಲವಾರು ಸುತ್ತಿನ ಮಾತುಕತೆಗಳ ಬಳಿಕ, 108 ದಿನಗಳ ನಂತರ ಒತ್ತೆಯಾಳಾಗಿದ್ದ ರಾಜ್‌ಕುಮಾರ್ ಅವರನ್ನು ಬಿಡುಗಡೆ ಮಾಡಲಾಗಿತ್ತು.

ಅಪಹರಣ ಪ್ರಕರಣದಲ್ಲಿ, ಈರೋಡ್ ಜಿಲ್ಲೆಯ ತಲವಾಡಿ ಪೊಲೀಸರು ವೀರಪ್ಪನ್ ಮತ್ತು ಸಹಚರರರಾದ ಸೇತುಕುಳಿ ಗೋವಿಂದನ್, ಚಂದ್ರಗೌಡ, ಮಲ್ಲು, ರಮೇಶ್, ಗೋವಿಂದರಾಜ್, ಆಂಡ್ರಿಲ್, ಪಸುವಣ್ಣ, ಪುಟ್ಟುಸಾಮಿ, ಕಲ್ಮಂಡಿರಾಮನ್, ಮಾರನ್, ಸೆಲ್ವಂ, ಅಮೃತಲಿಂಗಂ ಮತ್ತು ನಾಗರಾಜ್ ಎಂಬವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ನಂತರ ಅವರೆಲ್ಲರೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಪ್ರಕರಣದ ವಿಚಾರಣೆಯು ಗೋಪಿಚೆಟ್ಟಿಪಾಳ್ಯಂ 3ನೇ ಸೆಷನ್ಸ್ ನ್ಯಾಯಾಲಯದಲ್ಲಿ ಮುಂದುವರೆದಿತ್ತು.

2004ರಲ್ಲಿ ಆರೋಪಪಟ್ಟಿ ಸಲ್ಲಿಕೆಗೂ ಮುನ್ನವೇ, ವೀರಪ್ಪನ್ ಮತ್ತು ಆವನ ಇಬ್ಬರು ಸಹಚರರಾದ ಸೇತುಕುಳಿ ಗೋವಿಂದನ್ ಮತ್ತು ಚಂದ್ರಗೌಡ ಅವರನ್ನು ವಿಶೇಷ ಪೊಲೀಸ್ ಪಡೆಯ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಅಲ್ಲದೇ, ಪ್ರಕರಣದಲ್ಲಿ ಭಾಗಿಯಾಗಿದ್ದ ಮಲ್ಲು ಎಂಬ ಆರೋಪಿ ತನಿಖೆಯ ಸಮಯದಲ್ಲಿ ಸಾವನ್ನಪ್ಪಿದ್ದ. ರಮೇಶ್ ಎಂಬಾತ ತಲೆಮರೆಸಿಕೊಂಡಿದ್ದ. ಉಳಿದ 9 ಜನರು ಕಳೆದ 18 ವರ್ಷಗಳಿಂದ ಗೋಪಿಚೆಟ್ಟಿಪಾಳ್ಯಂ ನ್ಯಾಯಾಲಯದಲ್ಲಿ ಹಾಜರಾಗಿ ವಿಚಾರಣೆ ಎದುರಿಸುತ್ತಿದ್ದರು.

ಪ್ರಕರಣದ ತೀರ್ಪಿನ ವಿವರ: ಸೆಪ್ಟೆಂಬರ್ 25, 2018ರಂದು ಪ್ರಕರಣದ ತೀರ್ಪು ಪ್ರಕಟವಾಗಿದ್ದು, ವೀರಪ್ಪನ್ ಸಹಚರರಾದ ಎಲ್ಲಾ 9 ಮಂದಿಯನ್ನು ಖುಲಾಸೆಗೊಳಿಸಿ ನ್ಯಾಯಾಧೀಶ ಮಣಿ ಅವರು ಆದೇಶ ಹೊರಡಿಸಿದ್ದರು. ಗೋವಿಂದರಾಜ್, ಆಂಡ್ರಿಲ್, ಪಸುವಣ್ಣ, ಪುಟ್ಟುಸಾಮಿ, ಕಲ್ಮಂಡಿರಾಮನ್, ಮಾರನ್, ಸೆಲ್ವಂ, ಅಮೃತಲಿಂಗಂ ಮತ್ತು ನಾಗರಾಜ್ ಖುಲಾಸೆಗೊಂಡಿದ್ದರು.

“ಆರೋಪಿಗಳು ಮತ್ತು ವೀರಪ್ಪನ್ ನಡುವೆ ಸಂಬಂಧವಿದೆ ಎಂಬುದನ್ನು ಸಾಬೀತುಪಡಿಸಲು ಪೊಲೀಸ್ ಇಲಾಖೆ ಅಗತ್ಯ ಪುರಾವೆಗಳನ್ನು ನೀಡಿಲ್ಲ. ರಾಜ್‌ಕುಮಾರ್ ಮತ್ತು ಅವರ ಪತ್ನಿ ಪಾರ್ವತಮ್ಮ ಅವರನ್ನು ವಿಚಾರಣೆ ನಡೆಸಿಲ್ಲ. ಅಲ್ಲದೆ, ಮಧ್ಯಸ್ಥಿಕೆದಾರರಾಗಿ ಕಾಡಿಗೆ ಹೋದವರನ್ನು ಪೊಲೀಸರು ಪ್ರಶ್ನಿಸಿಲ್ಲ. ಸೂಕ್ತ ಸಾಕ್ಷಿ ಪ್ರಸ್ತುತಪಡಿಸದ ಕಾರಣ, ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಎಲ್ಲ 9 ಜನರನ್ನು ಖುಲಾಸೆಗೊಳಿಸಲಾಗುತ್ತಿದೆ” ಎಂದು ನ್ಯಾಯಾಧೀಶರು ಆದೇಶಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments