ಬೀಟಮ್ಮ ಗ್ಯಾಂಗ್ ಎಂದೇ ಖ್ಯಾತಿ ಪಡೆದ 25 ಕಾಡಾನೆಗಳ ತಂಡ ಒಂದು ವರ್ಷದ ನಂತರ ಚಿಕ್ಕಮಗಳೂರಿಗೆ ಮರಳಿದ್ದು, ಕಾಡಾನೆ ದಾಳಿಗಳಿಂದ ತತ್ತರಿಸಿದ ಸ್ಥಳೀಯರಿಗೆ ಮತ್ತೆ ಆತಂಕ ಶುರುವಾಗಿದೆ.
ಬೇಲೂರು ಮಾರ್ಗವಾಗಿ ಕಾಡಾನೆಗಳ ಗ್ಯಾಂಗ್ ಮೂಡಿಗೆರೆ ತಾಲೂಕಿಗೆ ಮರು ಪ್ರವೇಶಿಸಿದೆ. ಜಿಲ್ಲೆಯ ಅಷ್ಟ ದಿಕ್ಕುಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ.
ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿ ವ್ಯಾಪ್ತಿಯಲ್ಲಿ 25 ಕಾಡಾನೆಗಳ ಟೀಮ್ ಸಂಚಾರ ನಡೆಸಿದ್ದು, ಬಾರದಹಳ್ಳಿ ಗ್ರಾಮದ ಸುತ್ತ ಮುತ್ತ ಓಡಾಟ ಮಾಡಿದೆ. ಮೂಡಿಗೆರೆ, ಚಿಕ್ಕಮಗಳೂರು ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಅಲರ್ಟ್ ಆಗಿದ್ದು, ಕಾಫಿ ತೋಟದ ಕೆಲಸಕ್ಕೆ ತೆರಳದಂತೆ ಕಾರ್ಮಿಕರಿಗೆ ಎಚ್ಚರಿಕೆ ನೀಡಲಾಗಿದೆ.
ಮೂಡಿಗೆರೆ ತಾಲೂಕಿನ ಕಸ್ಕೆಬೈಲು ಗುಡ್ಡದಲ್ಲಿ 25 ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಬಾರದಹಳ್ಳಿ, ಚಟ್ಟನಹಳ್ಳಿ, ಕಲ್ಲು ಗುಡ್ಡ, ವಾಟೆಗಂಡಿ, ಹುಲಿಹಂಡ್ಲು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತಂಕ ಮನೆ ಮಾಡಿದೆ.
ಎನ್ಆರ್ಪುರದಲ್ಲಿ ಇಷ್ಟು ದಿನಗಳ ಕಾಲ ದಾಂಧಲೆ ನಡೆಸಿದ್ದ ಕಾಡಾನೆಗಳು ಈಗ ಮೂಡಿಗೆರೆ ತಾಲೂಕಿನಲ್ಲಿ ತನ್ನ ಆರ್ಭಟ ತೋರಿಸಲು ಪ್ರಾರಂಭಿಸಿದ್ದು, ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಿಂಡು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕಾಡಾನೆಗಳ ದಾಳಿಗೆ ಕೋಟ್ಯಂತರ ಮೌಲ್ಯದ ಬೆಳೆಗಳು ನಾಶವಾಗಿದ್ದು, ಈಗಾಗಲೇ ರೈತರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಈಗ ಮತ್ತೆ ಅದೇ ತಲೆನೋವು ರೈತರಿಗೆ ಪ್ರಾರಂಭವಾಗಿದ್ದು, ಬೇಲೂರಿನ ಬಿಕ್ಕೊಡಿನ ಬೀಟಮ್ಮ 25 ಸಂಖ್ಯೆಯ ಕುಟುಂಬಸ್ಥರ ಜೊತೆ ಸೇರಿ ಚಿಕ್ಕಮಗಳೂರು ಜಿಲ್ಲೆ ಪ್ರವೇಶ ಮಾಡಿದೆ.
ಬೇಲೂರಿನಲ್ಲಿ ಬೀಟಮ್ಮ ಟೀಂನ ಎರಡು ಕಾಡಾನೆಗಳು ಚಿಕ್ಕಮಗಳೂರು ನಗರ ಪ್ರದೇಶದ ಹೊರ ಭಾಗದಲ್ಲಿ ಕಾಣಿಸಿಕೊಂಡಿದ್ದರೇ, ಇನ್ನೊಂದು ಹಿಂಡು ಮೂಡಿಗೆರೆ ತಾಲೂಕಿನಲ್ಲಿ ಕಾಣಿಸಿಕೊಂಡಿದೆ. ಸಾರ್ವಜನಿಕರು ಹಾಗೂ ವಾಹನ ಸವಾರರು ಎಚ್ಚರಿಕೆಯಿಂದ ಓಡಾಡಬೇಕಾಗಿ ಅರಣ್ಯ ಇಲಾಖೆ ಅಕ್ಕ ಪಕ್ಕದ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದೆ. ಬೇಲೂರು ಮಾರ್ಗವಾಗಿ ಜಿಲ್ಲೆಗೆ ಆಗಮಿಸಿರಬಹುದು ಎಂದು ಅರಣ್ಯ ಇಲಾಖೆ ಮಾಹಿತಿ ತಿಳಿಸಿದೆ.
ಕೂಡಲೇ ಮಲೆನಾಡು ಭಾಗವನ್ನು ಪ್ರವೇಶ ಮಾಡಿರುವ ಈ ಕಾಡಾನೆ ಹಿಂಡುಗಳನ್ನು ಬೇರೆಡೆ ಸ್ಥಳಾಂತರ ಮಾಡಬೇಕು ಎಂದು ರೈತರು ಹಾಗೂ ಸ್ಥಳೀಯ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
ಎರಡು ಕಾಡಾನೆಗಳು ನಗರದಿಂದ ಕೇವಲ ನಾಲ್ಕು ಕಿಮೀ ದೂರದಲ್ಲಿ ಓಡಾಡುತ್ತಿರುವುದು ಕಂಡು ಬಂದಿದೆ. ಕಾಫಿ ತೋಟಕ್ಕೆ ನುಗ್ಗಿದ ಜೋಡಿ ಕಾಡಾನೆಗಳು ತೋಟವನ್ನು ನಾಶ ಮಾಡಿವೆ. ಈ ಎರಡು ಕಾಡಾನೆಗಳ ಚಲನವಲನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತೋಟದ ಮಾಲೀಕರು ಆತಂಕಗೊಂಡಿದ್ದಾರೆ.
ಕಳೆದ ಒಂದು ವರ್ಷದ ಹಿಂದೆ ಇದೇ ರಸ್ತೆಯಲ್ಲಿ ಭೀಮ ಕಾಡಾನೆ ನಡೆದುಕೊಂಡು ಬಂದು ಕಾಫಿ ತೋಟದ ಗೇಟ್ ಸಂಪೂರ್ಣ ಪುಡಿ ಪುಡಿ ಮಾಡಿ, ತೋಟವನ್ನು ನಾಶ ಮಾಡಿದ್ದ.



