ಬೆಂಗಳೂರು: ಅಭಿವೃದ್ಧಿ ವಿಷಯದಲ್ಲಿ ಕೇಂದ್ರಕ್ಕಿಂತ ರಾಜ್ಯ ಮುಂದಿದೆ. ಸಾಲದಲ್ಲಿ ನಮಗಿಂತ ಕೇಂದ್ರ ಮುಂದಿದೆ. ಕೇಂದ್ರ ಸರ್ಕಾರದ ಅಸಹಾಕರದ ನಡುವೆ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳುವ ಜೊತೆಗೆ ರಾಜ್ಯದ ಜನರ ಭರವಸೆಗಳನ್ನು ಈಡೇರಿಸುವ ಪ್ರಯತ್ನ ಈ ಬಾರಿಯ ಬಜೆಟ್ ನಲ್ಲಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ದಾಖಲೆಯ 17ನೇ ಬಾರಿ ಬಜೆಟ್ ಮಂಡಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ 8 ವರ್ಷಗಳ ನಂತರ ಜಿಎಸ್ ಟಿ ದರ ಪರಿಷ್ಕರಣೆ ಮಾಡಿದ್ದರಿಂದ ಕರ್ನಾಟಕ ಅಲ್ಲದೇ ಹಲವು ರಾಜ್ಯಗಳು ಆರ್ಥಿಕ ಸಮಸ್ಯೆಗೆ ಸಿಲುಕಿವೆ ಎಂದರು.
ಜಿಎಸ್ ಟಿ ಸಂಗ್ರಹಣೆಯಲ್ಲಿ ಮಹಾರಾಷ್ಟ್ರ ನಂತರ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕೇಂದ್ರದ ಈ ಹೊಸ ನೀತಿಯಿಂದ ಸುಮಾರು ರಾಜ್ಯಕ್ಕೆ ಸುಮಾರು 10 ಸಾವಿರ ಕೋಟಿಯಷ್ಟು ನಷ್ಟವಾಗಿದೆ. ಮುಂದಿನ ವರ್ಷ 15000 ಕೋಟಿ ಯಷ್ಟು ನಷ್ಟವಾಗಲಿದೆ. ಕೇಂದ್ರ ಸರ್ಕಾರದ ಅಸಹಕಾರ ಮತ್ತು ಮಲತಾಯಿ ಧೋರಣೆ ತೋರುತ್ತಿದೆ. ನಮ್ಮ ಬಜೆಟ್ನಲ್ಲಿ ಹೆಚ್ಚು ವಿತ್ತೀಯ ಶಿಸ್ತಿನ ಉಲ್ಲಂಘನೆಯಾಗಿಲ್ಲ ಎಂದು ತಿಳಿಸಿದರು.
ಕೇಂದ್ರಕ್ಕಿಂತ ರಾಜ್ಯದ ಬೆಳವಣಿಗೆ ಉತ್ತಮ
ರಾಜ್ಯದ ಜಿಎಸ್ ಡಿಪಿಯು 2025-26 ರಲ್ಲಿ ಬೆಳವಣಿಗೆ 8.1 ರಷ್ಟಿದೆ. ರಾಷ್ಟ್ರದ ಜಿಡಿಪಿ ಬೆಳವಣೆಗೆ 7.4 ರಷ್ಟಿದೆ. ಕೇಂದ್ರಕ್ಕಿಂತ ನಮ್ಮ ರಾಜ್ಯದ ಬೆಳವಣಿಗೆ ಉತ್ತಮವಾಗಿದೆ. ಗ್ಯಾರಂಟಿ ಯೋಜನೆಗಳಿಗೆ 52,000 ಕೋಟಿ ಕೊಟ್ಟಿದ್ದೇವೆ. ಇಲ್ಲಿಯವರೆಗೆ ಗ್ಯಾರಂಟಿಗಳಿಗೆ 1,21,591 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಅವರು ಸಮರ್ಥಿಸಿಕೊಂಡರು.
ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ಜೊತೆಗೆ ವಿತ್ತಿಯ ಶಿಸ್ತನ್ನೂ ಪಾಲಿಸಲಾಗಿದೆ. 2023-24 ರಿಂದ ಮೂರು ವರ್ಷವೂ ಕೂಡ ಆರ್ಥಿಕ ಶಿಸ್ತು ಕಾಯ್ದೆಯ ಮಾನದಂಡಗಳ ಪಾಲನೆಯಾಗಿದೆ. ಈ ಬಾರಿ ಕೇಂದ್ರದ ಅನುದಾನದಲ್ಲಿ ರಾಜ್ಯಕ್ಕೆ 10,000 ಕೋಟಿ ಗಳ ಕೊರತೆ ಆಗಿದೆ ಎಂದರು
ಜೆಜೆಎಂ ನಡಿ ಕೇಂದ್ರದ ಪೂರ್ಣ ಪಾಲು ಬಂದಿಲ್ಲ
ಜಲಜೀವನ ಮಿಷನ್ ನ ಯೋಜನಾ ವೆಚ್ಚ. ಒಟ್ಟು 69488 ಕೋಟಿ ಆಗಿದ್ದು ಕೇಂದ್ರದ ಪಾಲು 30880 ಕೋಟಿ, ಆದರೆ ಈವರೆಗೆ ನಮಗೆ ದೊರೆತಿರುವ ಕೇಂದ್ರದ ಅನುದಾನ ಕೇವಲ 11786 ಕೋಟಿ ನೀಡಿದ್ದಾರೆ. ಈ ಯೋಜನೆಗೆ 38600 ರಾಜ್ಯ ಸರ್ಕಾರ ಈಗಾಗಲೇ ವೆಚ್ಚ ಮಾಡಿದೆ. 15500 ಕೋಟಿ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ವೆಚ್ಚ ಮಾಡಿದೆ ಎಂದು ವಿವರಿಸಿದರು.



