ಶೌಚಾಲಯದಲ್ಲಿ ನೀರು ಇಲ್ಲ. ರಸ್ತೆಗಳಲ್ಲಿ ಸ್ವಚ್ಚತೆ ಇರಲಿಲ್ಲ ಎಂಬುದು ಸೇರಿದಂತೆ ಪಶ್ಚಿಮ ಬಂಗಾಳಕ್ಕೆ ಭೇಟಿ ಸಂದರ್ಭದಲ್ಲಿ ಶಿಷ್ಟಾಚಾರ ಉಲ್ಲಂಘನೆ ಕುರಿತು ರಾಷ್ಟ್ರಪತಿ ದ್ರೌಪದಿ ಮರ್ಮು ಮಾಡಿದ ಆರೋಪ ಇದೀಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು, ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಆರೋಪ- ಪ್ರತ್ಯಾರೋಪ ಮಾಡಿವೆ.
ರಾಷ್ಟ್ರಪತಿ ದ್ರೌಪದಿ ಮರ್ಮು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದಾಗ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಮಾಡಿದ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಷ್ಟ್ರಪತಿಗಳು ರಾಜಕೀಯ ಹೇಳಿಕೆ ನೀಡಿರುವುದು ವಿಷಾದಕರ, ರಾಷ್ಟ್ರಪತಿಗಳು ಒಂದು ರಾಜಕೀಯ ಪಕ್ಷದ ಮಾತಿನಂತೆ ನಡೆದುಕೊಳ್ಳುತ್ತಿರುವುದು ಸರಿಯಲ್ಲ. ನೀವು ಯಾವುದೇ ಪಕ್ಷಕ್ಕೆ ಸೇರಿದವರಲ್ಲ ಎಂದು ಕಿಡಿಕಾರಿದ್ದರು.
ನಾನು ಕೂಡ ಪಶ್ಚಿಮ ಬಂಗಾಳದವಳೇ. ನಾನು ಇಲ್ಲಿನ ಮಗಳೇ ನನ್ನ ತವರಿಗೇ ಬಂದರೂ ಈ ರೀತಿ ನಡೆದುಕೊಳ್ಳುತ್ತಾರೆ, ಆದಿವಾಸಿ ಮಹಿಳೆ ಎಂಬ ಕಾರಣಕ್ಕೆ ಈ ರೀತಿ ನಡೆಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ ಎಂದು ದ್ರೌಪದಿ ಮರ್ಮು ಆರೋಪಿಸಿದ್ದರು.
ರಾಷ್ಟ್ರಪತಿಗಳ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಮಮತಾ, ನೀವು ಆದಿವಾಸಿಗಳಾಗಿದ್ದರೂ ಆದಿವಾಸಿಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದಾಗ ಮೌನವಾಗಿದ್ದೀರಿ. ಅಸ್ಸಾಂನಲ್ಲಿ ಅಷ್ಟೋಂದು ಹಿಂಸಾಚಾರ ನಡೆಯುವಾಗ ಬಾಯಿ ಬಿಡಲಿಲ್ಲ. ಮಹಿಳೆಯ ಮೇಲೆ ದೌರ್ಜನ್ಯ ನಡೆದಾಗ ಪ್ರತಿಕ್ರಿಯಿಸಲಿಲ್ಲ. ಈಗ ಪಶ್ಚಿಮ ಬಂಗಾಳದ ಮಗಳು ಎಂದು ರಾಜಕೀಯ ಹೇಳಿಕೆ ನೀಡುವುದು, ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ರಾಜಕೀಯ ಹೇಳಿಕೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಮಮತಾ ಬ್ಯಾನರ್ಜಿ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರ ಎಲ್ಲಾ ಮಿತಿಗಳನ್ನು ಮೀರಿ ನಡೆದುಕೊಳ್ಳುತ್ತಿದೆ. ರಾಷ್ಟ್ರಪತಿಗೆ ಅಗೌರವ ತೋರುವುದು ಅಕ್ಷಮ್ಯ ಅಪರಾಧ ಎಂದು ಮೋದಿ ಹೇಳಿದ್ದಾರೆ.
ರಾಷ್ಟ್ರಪತಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ಆಗಿರುವ ಶಿಷ್ಟಾಚಾರ ಉಲ್ಲಂಘನೆ ಕುರಿತು ಭಾನುವಾರ 5 ಗಂಟೆಯೊಳಗೆ ಬ್ಲೂ ಬುಕ್ ವರದಿ ನೀಡುವಂತೆ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದೆ.
ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಪಶ್ಚಿಮ ಬಂಗಾಳ ಮುಖ್ಯಕಾರ್ಯದರ್ಶಿ ನಂದಿನಿ ಚಕ್ರವರ್ತಿಗೆ ಅವರಿಗೆ ಭಾನುವಾರ ಬೆಳಿಗ್ಗೆ ಪತ್ರ ಬರೆದಿದ್ದು, ಸಂಜೆಯೊಳಗೆ ವರದಿ ನೀಡುವಂತೆ ಸೂಚಿಸಿದ್ದು, 4 ಪ್ರಶ್ನೆಗಳನ್ನು ಕೇಳಿದೆ.
1 ರಾಷ್ಟ್ರಪತಿ ಭೇಟಿ ವೇಳೆ ಸಿಎಂ, ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾ ನಿರ್ದೇಶಕರು ಯಾಕೆ ಸ್ವಾಗತಿಸಲು ಆಗಮಿಸಿರಲಿಲ್ಲ?
2 ರಾಷ್ಟ್ರಪತಿಗಳು ತಂಗಿದ್ದ ಕೊಠಡಿಯ ಶೌಚಾಲಯದಲ್ಲಿ ನೀರು ಯಾಕೆ ಇರಲಿಲ್ಲ?
3 ರಾಷ್ಟ್ರಪತಿಗಳು ಸಂಚರಿಸುವ ಮಾರ್ಗದಲ್ಲಿ ರಸ್ತೆಗಳು ಯಾಕೆ ಸ್ವಚ್ಚವಾಗಿ ಇರಲಿಲ್ಲ
4 ಶಿಷ್ಟಾಚಾರ ಉಲ್ಲಂಘಿಸಿದ ಜಿಲ್ಲಾಧಿಕಾರಿ, ಸ್ಥಳೀಯ ಪೊಲೀಸ್ ಅಧಿಕಾರಿ ಸಹಿತ ಯಾರ ಮೇಲೂ ಯಾಕೆ ಕ್ರಮ ಕೈಗೊಂಡಿಲ್ಲ



