ಕಲಬುರಗಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೋದಿ ಮೂಗು ಹಿಡಿದುಕೊಂಡು ಕಂಟ್ರೋಲ್ ಮಾಡುತ್ತಿದ್ದಾನೆ. ಸರ್ವಾಧಿಕಾರಿ ಟ್ರಂಪ್ ಗೆ ಮೋದಿ ಗುಲಾಮ ಆಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿಯ ಚಿತ್ತಾಪುರದಲ್ಲಿ ಭಾನುವಾರ ನಡೆದ 1049 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿದ ಅವರು, ಎಪ್‌ಸ್ಟೀನ್ ಫೈಲ್ ಇಟ್ಟುಕೊಂಡು ಮೋದಿಯನ್ನು ಟ್ರಂಪ್ ಮೂಗು ಹಿಡಿದು ಕೆಲಸ ಮಾಡಿಸಿಕೊಂಡು ನಮ್ಮ ದೇಶವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದರು.
ಮೋದಿ ಎಲ್ಲೆಲ್ಲಿ ಹೋಗಿದ್ದಾರೆ? ಏನೇನು ಮಾಡಿದ್ದಾರೆ? ಯಾವ ಕ್ಲಬ್, ಯಾವ ಐಲ್ಯಾಂಡ್‌ನಲ್ಲಿ ಏನೇನು ಮಜಾ ಮಾಡಿದ್ದಾರೆ ಎಲ್ಲವೂ ಟ್ರಂಪ್ ಬಳಿ ಇದೆ. ಅದೆಲ್ಲವನ್ನೂ ಹಿಡಿದುಕೊಂಡು ಟ್ರಂಪ್ ಮೋದಿ ಅವರನ್ನು ಕಂಟ್ರೋಲ್ ಮಾಡುತ್ತಿದ್ದಾನೆ. ಆ ಫೈಲ್‌ನಿಂದ ಹೆದರಿ ಮೋದಿ ಟ್ರಂಪ್‌ಗೆ ತಲೆ ಬಾಗಿದ್ದಾರೆ, ಬಾಯಿ ಬಂದ್ ಆಗಿದೆ ಎಂದು ಅವರು ಗುಡುಗಿದರು.
ಅಮೆರಿಕಗೆ ಇವತ್ತು ಸೊಕ್ಕು ಬಂದಿದೆ. ಇಡೀ ಜಗತ್ತಿಗೆ ಹೆದರಿಸುವ ಕೆಲಸವನ್ನು ಅಮೆರಿಕ ಮಾಡುತ್ತಿದೆ. ಇದರಿಂದ ವಿಶ್ವದಲ್ಲಿ ಶಾಂತಿ ನೆಲೆಸೋದಿಲ್ಲ. ಅಮೆರಿಕ ದಬ್ಬಾಳಿಕೆ ಮಾಡುವ ಕೆಲಸ ಮಾಡುತ್ತಿದೆ. ಇಂತಹ ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆ ಸೇರಿಕೊಂಡು ಮೋದಿಯವರು ನಮ್ಮ ದೇಶ ಹಾಳು ಮಾಡುತ್ತಿದ್ದಾರೆ. ಟ್ರಂಪ್ ಒಬ್ಬ ಡಿಕ್ಟೇಟರ್, ಮೋದಿ ಅವನ ಗುಲಾಮ. ಮೋದಿ ಈ ದೇಶವನ್ನ ಗುಲಾಮಗಿರಿಗೆ ಒಯ್ಯುವ ಕೆಲಸ ಮಾಡುತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಊರೂರು ತಿರುಗೋದು, ಚುನಾವಣೆ ಭಾಷಣ ಮಾಡೋದು, ಕಾಂಗ್ರೆಸ್‌ಗೆ ಬೈಯೋದೆ ಮೋದಿ ಕೆಲಸ. ಕಾಂಗ್ರೆಸ್‌ಗೆ ಬೈಯೋದು ಜನರ ಗಮನ ಬೇರೆಡೆ ಸೆಳೆಯೋದೇ ಮೋದಿ ಕೆಲಸ. ದೇಶ ಕಟ್ಟುವ ಕೆಲಸ ಕಾಂಗ್ರೆಸ್ ಮಾಡಿದ್ರೆ, ಇವತ್ತು ದೇಶ ಹಾಳು ಮಾಡುವ ಕೆಲಸ ಮೋದಿ ಮಾಡುತ್ತಿದ್ದಾರೆ. ಮೋದಿ ಯಾರ ಜೊತೆಗೂ ಸರಿಯಿಲ್ಲ. ಇಂತಹ ಜನ ನಮ್ಮ ದೇಶದಲ್ಲಿ ಹುಟ್ಟಿದ್ದಾರೆ. ಇಂಥವರಿಗೆ ಜನ ಪಾಠ ಕಲಿಸುವ ಕೆಲಸ ಮಾಡಬೇಕು ಎಂದು ಹರಿಹಾಯ್ದರು.



