ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಯುದ್ಧದ ಹಿನ್ನೆಲೆಯಲ್ಲಿ ದೇಶಾದ್ಯಂತ ಗ್ಯಾಸ್ ಸಿಲಿಂಡರ್ ಅಭಾವ ತಲೆದೋರಿದೆ. ಇದರಿಂದ ಹೋಟೆಲ್ ಉದ್ಯಮ ತತ್ತರಿಸಿದ್ದು, ದೇಶಾದ್ಯಂತ ಹಾಹಾಕಾರ ಉಂಟಾಗಿದೆ.
ದೇಶದಲ್ಲಿ ಗ್ಯಾಸ್ ಸಿಲಿಂಡರ್ ಅಭಾವದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 60 ರೂ. ಏರಿಕೆ ಮಾಡಿತ್ತು. ಇದರ ಬೆನ್ನಲ್ಲೇ ವಾಣಿಜ್ಯ ಬಳಕೆಯ ಎಲ್ ಪಿಜಿ ಹಾಗೂ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಜನರು ಗ್ಯಾಸ್ ಸಿಲಿಂಡರ್ ಗಾಗಿ ಪರದಾಡುವಂತಾಗಿದೆ.
ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಅಭಾವದಿಂದ ಕರ್ನಾಟಕ ಸೇರಿದಂತೆ ಮುಂಬೈ, ದೆಹಲಿ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಪ್ರಮುಖ ನಗರಗಳಲ್ಲಿ ಹೋಟೆಲ್ ಉದ್ಯಮಕ್ಕೆ ಹೊಡೆತ ಬಿದ್ದಿದೆ.
ಮುಂಬೈನಲ್ಲಿ ಶೇ.22ರಷ್ಟು ಹೋಟೆಲ್ ಉದ್ಯಮ ಬಂದ್ ಆಗಿದ್ದರೆ, ಬೆಂಗಳೂರಿನಲ್ಲಿ ಬಹುತೇಕ ಹೋಟೆಲ್ ಗಳು ಖಾದ್ಯಗಳ ಉತ್ಪಾದನೆ ಕಡಿತಗೊಳಿಸಿದೆ. ದೋಸೆ, ಚಪಾತಿ ಮುಂತಾದ ಅಡುಗೆ ಅನಿಲ ಹೆಚ್ಚು ಬೇಡುವ ಆಹಾರಕ್ಕೆ ಕೊಕ್ಕೆ ಬಿದ್ದಿದೆ.
ಬೆಂಗಳೂರಿನಲ್ಲಿ 2ರಿಂದ 2500 ರೂ. ಕೊಟ್ಟರೂ ಗ್ಯಾಸ್ ಸಿಲಿಂಡರ್ ಸಿಗುತ್ತಿಲ್ಲ. ಕೆಲವು ಹೋಟೆಲ್ ಗಳಲ್ಲಿ ಎರಡು ದಿನಗಳಿಗೆ ಆಗುವಷ್ಟು ಸಂಗ್ರಹವಿದೆ. ಆದ್ದರಿಂದ ಇತಮಿತವಾಗಿ ಬಳಕೆ ಮಾಡಲಾಗುತ್ತಿದೆ. ಪಂಚತಾರ ಹೋಟೆಲ್ ಗಳಲ್ಲಿ ಅಡುಗೆ ಅನಿಲ ಕೊರತೆಯಿಂದ ಓಲೆ ಬಳಸಲಾಗುತ್ತಿದೆ.
ಉತ್ಪಾದನೆ ಹೆಚ್ಚಳಕ್ಕೆ ಕೇಂದ್ರ ಸೂಚನೆ
ಗ್ಯಾಸ್ ಸಿಲಿಂಡರ್ ಅಭಾವ ಹೆಚ್ಚಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲ್ ಪಿಜಿ ಉತ್ಪಾದನೆ ಹೆಚ್ಚಿಸುವಂತೆ ಪೆಟ್ರೋಲಿಯಂ ಕಂಪನಿಗಳಿಗೆ ಸೂಚನೆ ನೀಡಿದೆ.
ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಜೊತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದು, ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದಾರೆ. ಇದೇ ವೇಳ ಪ್ರಧಾನಿ ಉನ್ನತಮಟ್ಟದ ಸಚಿವರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದು, ಯುದ್ಧದಿಂದ ದೇಶದ ಮೇಲಾಗುವ ಪರಿಣಾಮ ಹಾಗೂ ಅದಕ್ಕೆ ಪರಿಹಾರ ಕಂಡುಕೊಳ್ಳುವ ಕುರಿತು ಸಮಾಲೋಚನೆ ನಡೆಸಿದ್ದಾರೆ.
