ಇರಾನ್ ಸುಪ್ರೀಂ ಹಾಗೂ ತಂದೆ ಅಯತೊಲ್ಲಾ ಅಲಿ ಖಮೇನಿ ಮಾತ್ರವಲ್ಲ, ಮಕ್ಕಳು ಸೇರಿದಂತೆ ದೇಶದ ಪ್ರತಿಯೊಬ್ಬರ ಸಾವಿಗೂ ಸೇಡು ತೀರಿಸಿಕೊಳ್ಳುವುದಾಗಿ ನೂತನ ಸುಪ್ರೀಂ ಮೊಜ್ತಬಾ ಖಮೇನಿ ಗುಡುಗಿದ್ಧಾರೆ.
ಇರಾನ್ ಸುಪ್ರೀಂ ಆಗಿ ನೇಮಕಗೊಂಡ ನಂತರ ಮೊದಲ ಬಾರಿ ಮುಜ್ತಬಾ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯನ್ನು ಸ್ಥಳೀಯ ಮಾಧ್ಯಮಗಳು ಓದಿದ್ದು, ಅಮೆರಿಕ ದಾಳಿ ಮುಂದುವರಿಸಿದರೆ ನಾವು ಕೂಡ ದಾಳಿ ಮುಂದುವರಿಸುತ್ತೇವೆ. ಈಗಾಗಲೇ ನಮ್ಮ ಶಕ್ತಿ ಏನೆಂದು ತೋರಿಸಿಕೊಟ್ಟಿದ್ದು, ಅಮೆರಿಕ ಹಾಗೂ ಇಸ್ರೇಲ್ ಗೆ ತಕ್ಕಪಾಠ ಕಲಿಸಿದ್ದೇವೆ ಎಂದು ಹೇಳಿದ್ದಾರೆ.
ಹರ್ಮುಜ್ ಜಲಸಂಧಿಯನ್ನು ಯಾವುದೇ ಕಾರಣಕ್ಕೂ ತೆರೆಯುವುದಿಲ್ಲ. ಯುದ್ಧ ನಿಲ್ಲದೇ ಇದ್ದರೆ ನಾವು ಇನ್ನಷ್ಟು ಆಕ್ರಮಣಕಾರಿಯಾಗಿ ಅಮೆರಿಕ ನೆಲೆಗಳ ಮೇಲೆ ದಾಳಿ ಮಾಡಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಇರಾನ್ ಮೇಲೆ ದಾಳಿ ಮಾಡಿದರೆ ಕೊಲ್ಲಿ ರಾಷ್ಟ್ರಗಳಲ್ಲಿರುವ ಅಮೆರಿಕ ನೆಲೆಗಳ ಮೇಲೆ ದಾಳಿ ಮುಂದುವರಿಸಲಿದ್ದೇವೆ. ನಮ್ಮ ಮೇಲೆ ಎಷ್ಟು ತೀವ್ರವಾಗಿ ದಾಳಿ ನಡೆಯುತ್ತದೆಯೋ ಅಷ್ಟೇ ತೀವ್ರವಾಗಿ ನಾವು ಉತ್ತರ ಕೊಡುತ್ತೇವೆ ಎಂದು ಅವರು ಹೇಳಿದರು.
ತಂದೆ ಖಮೇನಿ ಅವರ ಸಾವಿನ ನಂತರ ಶವ ನೋಡಿದಾಗ ನನಗೆ ಹೆಮ್ಮೆ ಎನಿಸಿತು. ಹುತಾತ್ಮರಾದ ಅವರ ಸಾವಿಗೆ ನಾವು ಖಂಡಿತ ಸೇಡು ತೀರಿಸಿಕೊಳ್ಳುತ್ತೇವೆ. ತಂದೆಯ ಸಾವಿಗೆ ಮಾತ್ರವಲ್ಲ, ಮುಗ್ಧ ಮಕ್ಕಳ ಸಾವು ಸೇರಿದಂತೆ ದೇಶದ ಪ್ರತಿಯೊಬ್ಬರ ಸಾವಿಗೂ ನಾವು ಸೇಡು ತೀರಿಸಿಕೊಳ್ಳದೇ ಬಿಡುವುದಿಲ್ಲ ಎಂದು ಅವರು ಹೇಳಿದರು.
ಲೆಬೆನಾನ್, ಇರಾಕ್ ಮತ್ತು ಯೆಮೆನ್ ನಲ್ಲಿರುವ ವಿವಿಧ ಸೇನಾ ಸಂಘಟನೆಗಳು ಈ ಸಂಕಷ್ಟ ಸಮಯದಲ್ಲಿ ನಮ್ಮ ಜೊತೆ ಕೈ ಜೋಡಿಸಿರುವುದಕ್ಕೆ ಅವರು ಧನ್ಯವಾದ ಅರ್ಪಿಸಿದರು.



