ಬೆಂಗಳೂರು: ರಾಜ್ಯದ ಹಲವಡೆ ಗ್ಯಾಸ್ ಸಿಲಿಂಡರ್ ಅಭಾವ ಹಿನ್ನೆಲೆಯಲ್ಲಿ ಹೋಟೆಲ್ ಗಳಿಗೆ ಪ್ರತೀ ನಿತ್ಯ 1000 ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಪೂರೈಸಲು ತೀರ್ಮಾನಿಸಲಾಗಿದೆ ಎಂದು ಆಹಾರ ಇಲಾಖೆ ಸಚಿವ ಕೆಎಚ್ ಮುನಿಯಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾಸ್ ಸಿಲಿಂಡರ್ ಅಭಾವದ ಹಿನ್ನೆಲೆಯಲ್ಲಿ ತುರ್ತು ಅಗತ್ಯ ಸೇವೆಗಳಾದ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಏರ್ ಲೈನ್ಸ್ ಹಾಗೂ ರೈಲ್ವೆ ಕ್ಯಾಂಟೀನ್ ಗೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಶೇ.100ರಷ್ಟು ಆದ್ಯತೆಯ ಮೇಲೆ ಪೂರೈಸಲಾಗುವುದು ಎಂದರು.
ರಾಜ್ಯದಲ್ಲಿ ನಿತ್ಯ 44,000 ವಾಣಿಜ್ಯ ಸಿಲಿಂಡರ್ ಬೇಕು. ಶೇಕಡಾ 20ರಷ್ಟು ಅಂದರೆ 9 ಸಾವಿರ ಕಮರ್ಷಿಯಲ್ ಸಿಲಿಂಡರ್ ಸಿಗುತ್ತವೆ. 9 ಸಾವಿರ ಸಿಲಿಂಡರ್ ಗಳ ಪೈಕಿ 4,000 ಸಿಲಿಂಡರ್ ಆಸ್ಪತ್ರೆಗಳಿಗೆ ಹೋಗುತ್ತವೆ. ಆಟೋಗಳಿಗೆ 2500 ಸಿಲಿಂಡರ್ ಪೂರೈಕೆ ಮಾಡಲು ನಿರ್ಧರಿಸಲಾಗಿದ್ದು, ಇನ್ನು ಬೆಂಗಳೂರಿನಲ್ಲಿ ಹೋಟೆಲ್ ಗಳಿಗೆ ಪ್ರತಿನಿತ್ಯ 1000 ಸಿಲಿಂಡರ್ ಕೊಡಲು ನಿರ್ಧರಿಸಲಾಗಿದೆ ಎಂದು ಅವರು ವಿವರಿಸಿದರು.
ಬೆಂಗಳೂರಿನಲ್ಲಿ 40,000ಕ್ಕೂ ಹೆಚ್ಚು ಹೋಟೆಲಿಗಳಿವೆ. 4,500 ಹೋಟೆಲ್ ಗಳು ನೊಂದಣಿ ಯಾಗಿದ್ದು, ಒಂದು ಹೋಟೆಲ್ಗೆ ಕನಿಷ್ಠ 2ರಿಂದ 3 ಸಿಲಿಂಡರ್ ಗಳು ಬೇಕಾಗುತ್ತವೆ. ರೆಸ್ಟೋರೆಂಟ್ ನಾನ್ ವೆಜ್ ಹೋಟೆಲ್ ಗಳಿಗೆ 5 ರಿಂದ 6 ಸಿಲಿಂಡರ್ ಗಳು ಬೇಕು ಹೀಗಿರುವಾಗ ಸಾವಿರ ಸಿಲಿಂಡರ್ ಗಳು ಸಾಕಾಗುತ್ತಾ ಎನ್ನುವ ಪ್ರಶ್ನೆ ಉದ್ಭವಿಸಿದೆ.
ಗ್ರಾಹಕರು ಹೆಚ್ಚಾಗಿ ಸಿಲಿಂಡರ್ ಹಾಗಾಗಿ ಗಳನ್ನು ಬುಕ್ ಮಾಡಬಾರದು. ಗ್ಯಾಸ್ ಅಭಾವದ ಬಗ್ಗೆ ಕೇಂದ್ರಕ್ಕೆ ಸಿಎಂ ಎರಡನೇ ಪತ್ರ ಬರೆಯುತ್ತಾರೆ. ಪರಿಸ್ಥಿತಿ ಗಂಭೀರವಾಗಿದೆ. ರಾಜ್ಯದ ಜನರಿಗೆ ತೊಂದರೆಯಾಗಿದೆ. ಕೇಂದ್ರ ಈ ಬಗ್ಗೆ ಗಮನ ಹರಿಸಬೇಕು ಎಂದು ಪತ್ರ ಬರೆಯುತ್ತಾರೆ ಎಂದು ಬೆಂಗಳೂರಿನಲ್ಲಿ ಆಹಾರ ಸಚಿವ ಕೆಎಚ್ ಮುನಿಯಪ್ಪ ಹೇಳಿಕೆ ನೀಡಿದರು.



