Friday, May 15, 2026
Google search engine
Homeರಾಜ್ಯಶೀಘ್ರದಲ್ಲೇ ವಿದ್ಯುತ್ ದರ ಏರಿಕೆ: ಸುಳಿವು ನೀಡಿದ ಸಚಿವ ಭೋಸರಾಜು

ಶೀಘ್ರದಲ್ಲೇ ವಿದ್ಯುತ್ ದರ ಏರಿಕೆ: ಸುಳಿವು ನೀಡಿದ ಸಚಿವ ಭೋಸರಾಜು

ಬೆಂಗಳೂರು: ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ದರ ಪರಿಷ್ಕರಣೆ ಕೋರಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿವೆ ಎಂದು ಸಭಾನಾಯಕ ಎನ್.ಎಸ್.ಬೋಸರಾಜು ಅವರು ಸೋಮವಾರ ಮೇಲ್ಮನೆಯಲ್ಲಿ ತಿಳಿಸಿದರು.

ಪ್ರಶೋತ್ತರ ವೇಳೆಯಲ್ಲಿ ಶಾಸಕ ಸಿ.ಎನ್. ಮಂಜೇಗೌಡ ಅವರ ಪ್ರಶ್ನೆಗೆ ಇಂಧನ ಸಚಿವ ಜಾರ್ಜ್ ಅವರ ಪರವಾಗಿ ಉತ್ತರಿಸಿದ ಸಚಿವರು, ವಿದ್ಯುತ್ ಸರಬರಾಜು ಕಂಪನಿಗಳು ಆದಾಯ ಕೊರತೆ ಒಳಗೊಂಡಂತೆ ಮುಂದಿನ ಹಣಕಾಸು ವರ್ಷ ಪ್ರಾರಂಭದ 120 ದಿನಗಳ ಮೊದಲು ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಹೇಳಿದರು.

ಕೆಇಆರ್‌ಸಿಯು 2025ರ ಮಾ.27 ರಂದು  2025-26 ನೇ ಸಾಲಿನಿಂದ 2027-28 ಸಾಲಿನವರೆಗೂ ಬಹುವಾರ್ಷಿಕ ದರ ಪರಿಷ್ಕರಣೆ ಆದೇಶ ಹೊರಡಿಸಿದೆ ಎಂದರು.

ವಿದ್ಯುತ್ ಸರಬರಾಜು ಕಂಪನಿಗಳು 2024-25ನೇ ಸಾಲಿನ ವಾರ್ಷಿಕ ನಿರ್ವಹಣಾ ಪರಿಶೀಲನಾ ಅರ್ಜಿಯನ್ನು ಕಳೆದ ನ.29 ರಂದು ಆಯೋಗಕ್ಕೆ ಸಲ್ಲಿಸಿವೆ. ಬೆಂಗಳೂರು ವಿದ್ಯುತ್ ಕಂಪನಿಯು 2802.80 ಕೋಟಿ ರೂ. ಸೇರಿದಂತೆ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳು 4,516 ಕೋಟಿ ರೂ. ಆದಾಯ ಕೊರತೆಯನ್ನು ಎದುರಿಸುತ್ತಿರುವುದಾಗಿ ಕೆಇಆರ್ ಸಿಗೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.

ಬೆಸ್ಕಾಂ ನಷ್ಟ ಕಡಿತದಿಂದ 110.05 ಕೋಟಿ ರೂ. ಉಳಿತಾಯವಾಗಿದೆ. ಗೃಹಬಳಕೆ ಯೋಜನೆಯಿಂದ 1.65 ಕೋಟಿ ರೂ. ಬಳಕೆ ಸ್ಥಾವರಗಳ ಬಿಲ್ ಅನ್ನು ಸರ್ಕಾರ ಪಾವತಿಸಿದ್ದು, 2023ರ ಆಗಸ್ಟ್‌ನಿಂದ ಪ್ರಸ್ತುತ ಮಾರ್ಚ್‌ವರೆಗೆ 25,076 ಕೋಟಿ ರೂ. ಭರಿಸಲಾಗಿದೆ. ಇದು ಜನಸಾಮಾನ್ಯರ ಹೊರೆ ಕಡಿಮೆ ಮಾಡಿದೆ ಎಂದರು.

ನೇಕಾರರ ವಿದ್ಯುತ್ ಸ್ಥಾವರಗಳಿಗೆ 10 ಹೆಚ್ ಪಿಯಿಂದ 20 ಹೆಚ್ ಪಿವರೆಗೆ ಪ್ರತಿ ಯೂನಿಟ್ ಗೆ ಸರ್ಕಾರ 3 ರೂ. 25 ಪೈಸೆಯನ್ನು ಭರಿಸುತ್ತಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿನ ಕೈಗಾರಿಕೆಗಳಿಗೆ ಪ್ರತಿ ಯೂನಿಟ್‌ಗೆ 25 ಪೈಸೆ ರಿಯಾಯಿತಿ ನೀಡಲಾಗುತ್ತಿದೆ. ಸೋಲಾರ್ ರೂಫ್ ಟಾಪ್ ಅಳವಡಿಸುವ ಗೃಹಬಳಕೆ ಸ್ಥಾವರಗಳಿಗೆ ಪ್ರತಿ ಕಿಲೋವ್ಯಾಟ್‌ಗೆ 25 ರೂ. ನಿಗದಿತ ಶುಲ್ಕದ ರಿಯಾಯಿತಿ ನೀಡಲಾಗುತ್ತಿದೆ ಎಂದರು. ಕೆಇಆರ್‌ಸಿ ಆದೇಶದಂತೆ ವಿದ್ಯುತ್ ದರ ಪರಿಷ್ಕರಣೆಯಾಗುತ್ತದೆ ಎಂದು ಅವರು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments