ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ನೂತನ ಮೇಯರ್ ಮತ್ತು ಉಪಮೇಯರ್ ಎರಡೂ ಸ್ಥಾನಗಳು ಕನ್ನಡಿಗರ ಪಾಲಾಗಿದೆ. ಈ ಮೂಲಕ ದೀರ್ಘಕಾಲದ ನಂತರ ಕನ್ನಡಿಗರು ಪಾಲಿಕೆ ಮೇಲೆ ಪೂರ್ಣ ಹಿಡಿತ ಸಾಧಿಸಿದ್ದಾರೆ.
ಬಿಜೆಪಿಯ ಪ್ರೀತಿ ಕಾಮಕರ ಮೇಯರ್ ಆಗಿ ಹಾಗೂ ಹನುಮಂತ ಕೊಂಗಾಲಿ ಉಪ ಮೇಯರ್ ಆಗಿ ಆಯ್ಕೆಯಾದ್ದಾರೆ. ಇಬ್ಬರೂ ಕನ್ನಡಿಗರಾಗಿದ್ದು ಮರಾಠಿ ಪ್ರಾಬಲ್ಯದ ಬೆಳಗಾವಿಯಲ್ಲಿ ಕನ್ನಡಿಗರು ಅಧಿಕಾರ ಹಿಡಿದಿದ್ದಾರೆ.
ಕಳೆದ ಮೂರು ಅವಧಿಯಲ್ಲಿ ಒಂದು ಸ್ಥಾನ ಮರಾಠರಿಗೆ, ಇನ್ನೊಂದು ಸ್ಥಾನ ಕನ್ನಡಿಗರಿಗೆ ನೀಡಲಾಗಿತ್ತು. ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಮೇಯರ್ ಸ್ಥಾನ ಸಾಮಾನ್ಯಕ್ಕೆ ಮೀಸಲಾಗಿತ್ತು.
ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ 21ನೇ ವಾರ್ಡಿನ ಬಿಜೆಪಿ ಸದಸ್ಯೆ ಪ್ರೀತಿ ಕಾಮಕರ ಹಾಗೂ ಕಾಂಗ್ರೆಸ್ ಬೆಂಬಲಿತ ಸ್ವತಂತ್ರ ಸದಸ್ಯೆ 53ನೇ ವಾರ್ಡಿನ ಖುರ್ಷಿದಾ ದಾದಾಪೀರ್ ಮುಲ್ಲಾ ನಾಮಪತ್ರ ಸಲ್ಲಿಸಿದರು.
65 ಸದಸ್ಯರ ಪೈಕಿ 59 ಸದಸ್ಯರು ಹಾಜರಿದ್ದು, 6 ಮಂದಿ ಗೈರಾಗಿದ್ದರು. ಪ್ರೀತಿ ಪರವಾಗಿ 39 ಹಾಗೂ ವಿರೋಧವಾಗಿ 18 ಮತಗಳು ಬಂದವು. ಖುರ್ಷಿದಾ ಪರವಾಗಿ 29 ಹಾಗೂ ವಿರೋಧವಾಗಿ 39 ಮತಗಳು ಬಂದವು. 10 ಮತಗಳ ಅಂತರದಿಂದ ಪ್ರೀತಿ ಮೇಯರ್ ಆಗಿ ಚುನಾಯಿತರಾದರು ಎಂದು ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ. ಘೋಷಿಸಿದರು.
ಉಪಮೇಯರ್ ಸ್ಥಾನಕ್ಕೆ 46ನೇ ವಾರ್ಡಿನ ಬಿಜೆಪಿ ಸದಸ್ಯ ಹಣಮಂತ ಕೊಂಗಾಲಿ ಹಾಗೂ 12ನೇ ವಾರ್ಡಿನ ಕಾಂಗ್ರೆಸ್ ಸದಸ್ಯ ಮೋದಿನಸಾಬ್ ಮತವಾಲೆ ಉಮೇದುವಾರಿಕೆ ಸಲ್ಲಿಸಿದರು. ಕೊಂಗಾಲಿ ಪರವಾಗಿ 39, ವಿರೋಧವಾಗಿ 20 ಜನ ಕೈ ಎತ್ತಿದರು. ಮೋದಿನಸಾಬ್ ಪರವಾಗಿ 20 ಹಾಗೂ ವಿರೋಧವಾಗಿ 39 ಜನ ಕೈ ಎತ್ತಿದರು. ಹಣಮಂತ 19 ಮತಗಳ ಅಂತರದಿಂದ ಉಪಮೇಯರ್ ಆಗಿ ಆಯ್ಕೆಯಾದರು. ಮೇಯರ್ ಸ್ಥಾನದ ಮತದಾನ ಸಂದರ್ಭದಲ್ಲಿ ಇಬ್ಬರು ತಟಸ್ಥವಾಗಿ ಉಳಿದರು. ಉಪಮೇಯರ್ಗೆ ಎಲ್ಲರೂ ಮತ ಚಲಾಯಿಸಿದರು.
ಅಧಿಕೃತವಾಗಿ ಮೇಯರ್, ಉಪಮೇಯರ್ ಘೋಷಣೆ ಆಗುತ್ತಿದ್ದಂತೆ, ಬಿಜೆಪಿಯ ಎಲ್ಲ ಸದಸ್ಯರು ಟೇಬಲ್ ಕುಟ್ಟಿ ಬೆಂಬಲಿಸಿದರು. ಶಾಸಕ ಅಭಯ ಪಾಟೀಲ, ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ, ಮಾಜಿ ಶಾಸಕ ಅನಿಲ ಬೆನಕೆ ಸೇರಿ ಮತ್ತಿತರು ಈ ವೇಳೆ ಹಾಜರಿದ್ದರು.
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ನೂತನ ಮೇಯರ್ ಪ್ರೀತಿ ಕಾಮಕರ, “ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನೇಕಾರ ಸಮುದಾಯಕ್ಕೆ ಮೇಯರ್ ಸ್ಥಾನ ಸಿಕ್ಕಿರುವುದಕ್ಕೆ ತುಂಬಾ ಸಂತೋಷ ಮತ್ತು ಹೆಮ್ಮೆ ಆಗುತ್ತಿದೆ. ನಾನು ಬಡ ನೇಕಾರ ಕುಟುಂಬದ ಮಗಳು. ಕೊಟ್ಟ ಮಾತಿನಂತೆ ನನ್ನನ್ನು ಮೇಯರ್ ಮಾಡಿರುವ ಶಾಸಕ ಅಭಯ್ ಪಾಟೀಲರಿಗೆ ಧನ್ಯವಾದ ಸಲ್ಲಿಸುತ್ತೇನೆ. 58 ವಾರ್ಡ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೆಳಗಾವಿ ನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಸ್ವಚ್ಛ ಬೆಳಗಾವಿ ನನ್ನ ಗುರಿ” ಎಂದರು.
ಉಪಮೇಯರ್ ಹನುಮಂತ ಕೊಂಗಾಲಿ ಮಾತನಾಡಿ, “ಬೆಳಗಾವಿ ನಗರದ ಸ್ವಚ್ಛತೆಗೆ ಹೆಚ್ಚು ಆದ್ಯತೆ ಕೊಡುತ್ತೇವೆ. 24/7 ಕುಡಿಯುವ ನೀರಿನ ಕಾಮಗಾರಿ ಬೇಗನೇ ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಜೈಪುರ, ಇಂದೋರ್ ನಗರಗಳಿಗೆ ನಾವು ಸ್ಟಡಿ ಟೂರ್ ಹೋಗಿದ್ದೆವು. ಅಲ್ಲಿನ ಯೋಜನೆಗಳನ್ನು ಬೆಳಗಾವಿಯಲ್ಲಿ ಅನುಷ್ಠಾನಕ್ಕೆ ತರಲು ಶ್ರಮಿಸಲಾಗುವುದು” ಎಂದು ಹೇಳಿದರು.



