Thursday, June 25, 2026
Google search engine
Homeರಾಜ್ಯ1ನೇ ತರಗತಿಗೆ ಮಕ್ಕಳ ದಾಖಲಾತಿಗೆ 60 ದಿನದ ವಯೋಮಿತಿ ವಿನಾಯಿತಿ: ಸಚಿವ ಮಧು ಬಂಗಾರಪ್ಪ

1ನೇ ತರಗತಿಗೆ ಮಕ್ಕಳ ದಾಖಲಾತಿಗೆ 60 ದಿನದ ವಯೋಮಿತಿ ವಿನಾಯಿತಿ: ಸಚಿವ ಮಧು ಬಂಗಾರಪ್ಪ

ಬೆಂಗಳೂರು: ಒಂದನೇ ತರಗತಿಗೆ ಮಕ್ಕಳನ್ನು ಶಾಲೆಗೆ ಸೇರಿಸಲು ವಿಧಿಸಲಾಗಿದ್ದ 6 ವರ್ಷದ ವಯೋಮಿತಿಯಲ್ಲಿ 60 ದಿನಗಳ ವಿನಾಯಿತಿ ನೀಡಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಗುರುವಾರ ನಡೆದ ಚರ್ಚೆಯ ವೇಳೆ ಬಿಜೆಪಿ ಸದಸ್ಯ ಅರವಿಂದ್ ಬೆಲ್ಲದ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಒಂದನೇ ತರಗತಿಗೆ 6 ವರ್ಷ ತುಂಬಬೇಕೆಂಬ ಕಡ್ಡಾಯ ನಿಯಮದಲ್ಲಿ 2026-27ನೇ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ಸರ್ಕಾರ 60 ದಿನಗಳ ವಿನಾಯಿತಿ ನೀಡಿದೆ ಎಂದರು.

ಒಂದನೇ ತರಗತಿ ದಾಖಲಾತಿಗೆ ಆರು ವರ್ಷ ತುಂಬಿರಲೇಬೇಕೆಂಬ ನಿಯಮದಲ್ಲಿ ಈ ವರ್ಷವೂ ವಿನಾಯಿತಿ ನೀಡಲಾಗಿದೆ. 60 ದಿನಗಳ ಸಡಿಲಿಕೆ ನೀಡಲು ತೀರ್ಮಾನಿಸಲಾಗಿದೆ. ಎರಡು ತಿಂಗಳ ರಿಯಾಯಿತಿ ತರುತ್ತೇವೆ. ಅದರಂತೆ 2026-27ನೇ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿ ದಾಖಲಾತಿ ಸಂಬಂಧ 60 ದಿನಗಳ ವಿನಾಯಿತಿ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ದಾಖಲಾತಿ ತಂತ್ರಾಂಶದಲ್ಲಿ ಬದಲಾವಣೆ ಮಾಡಲಾಗುತ್ತದೆ. ಒಂದನೇ ತರಗತಿ ದಾಖಲಾತಿಗೆ 6 ವರ್ಷದ ಕಡ್ಡಾಯ ನಿಯಮಕ್ಕೆ ಹೊಂದಿಕೊಳ್ಳುವಂತೆ ಇತ್ತ ಎಲ್​ಕೆಜಿ ಹಾಗೂ ಯುಕೆಜಿ ಮಟ್ಟದಲ್ಲೇ ದಾಖಲಾತಿ ವಯೋಮಿತಿ ನಿಗದಿ ಮಾಡುವ ಸಂಬಂಧ ಕಾಯ್ದೆ ತರಲಾಗುವುದು ಎಂದು ಅವರು ಹೇಳಿದರು.

ಎಲ್​ಕೆಜಿ, ಯುಕೆಜಿಗೆ ಮಕ್ಕಳ ದಾಖಲಾತಿಗೆ ಈಗ ವಯೋಮಿತಿ ನಿಗದಿ ಮಾಡುವ ಕಾನೂನು ಇಲ್ಲ. ಹೀಗಾಗಿ ದಾಖಲಾತಿಗೆ ಸಮಸ್ಯೆಯಾಗುತ್ತಿದೆ.‌ ಅಲ್ಲಿಗೆ ಹೊಸದಾದ ಕಾನೂನು ತಂದು ಖಾಯಂ ಪರಿಹಾರ ತರಲಾಗುವುದು.‌ ಒಂದನೇ ತರಗತಿಗೆ 6 ವರ್ಷ ತುಂಬಿರಬೇಕು ಎಂಬ ಕಡ್ಡಾಯ ನಿಯಮಕ್ಕೆ ಎಲ್​​ಕೆಜಿ, ಯುಕೆಜಿಗೆ ಮಕ್ಕಳ ದಾಖಲಾತಿ ವಯೋಮಿತಿ ನಿಗದಿ ಸಂಬಂಧ ಕಾಯ್ದೆಯನ್ನು ರೂಪಿಸಿ ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಅರವಿಂದ್ ಬೆಲ್ಲದ್, ಪ್ರತಿ ಬಾರಿನೂ ಈ ಸಮಸ್ಯೆ ಆಗುತ್ತದೆ. ಇದನ್ನು ಖಾಯಂ ಆಗಿ ಮಾಡಿ ಎಂದು ಮನವಿ ಮಾಡಿದರು. ಈ ಸಂಬಂಧ ಪರಿಶೀಲಿಸಲಾಗುವುದು.‌ ಹೋದ ಬಾರಿನೂ ಸಡಿಲಿಕೆ ಕೊಟ್ಟಿದ್ದೇವೆ. ಆದರೆ, ಎಲ್‌ಕೆಜಿ, ಯುಕೆಜಿಗೆ ರೆಗ್ಯುಲೇಟರಿ ನಿಯಮ‌ ಇಲ್ಲದ ಕಾರಣ ಯಾವುದೋ ಖಾಸಗಿ ಸಂಸ್ಥೆಗಳಲ್ಲಿ ಅಡ್ಮಿಟ್ ಮಾಡುತ್ತಾರೆ. ಹಾಗಾಗಿ, ಈಗ ಕಾನೂನು ತಂದು ಅದನ್ನು ರೆಗ್ಯುಲರೈಸ್ ಮಾಡುತ್ತೇವೆ. ಶೀಘ್ರದಲ್ಲೇ ಕಾನೂನು ತಂದು ಅಧಿವೇಶನದಲ್ಲಿ ಮಂಡಿಸಲಾಗುತ್ತದೆ ಎಂದರು.

ಇದುವರೆಗೆ ಒಂದನೇ ತರಗತಿಗೆ ಸೇರ್ಪಡೆಯಾಗಲು 6 ವರ್ಷ ವಯಸ್ಸು ಕಡ್ಡಾಯವಾಗಿತ್ತು. ಆದರೆ, ಪೋಷಕರ ಮನವಿಯ ಮೇರೆಗೆ ಸರ್ಕಾರ ಈ ನಿಯಮದಲ್ಲಿ ಸಡಿಲಿಕೆ ನೀಡಲು ಮುಂದಾಗಿದೆ. ಈಗ 6 ವರ್ಷ ಪೂರ್ಣಗೊಂಡ ಬಳಿಕ 60 ದಿನಗಳ (ಅಂದರೆ 6 ವರ್ಷ 2 ತಿಂಗಳುಗಳವರೆಗೆ) ವಿನಾಯಿತಿ ನೀಡಲಾಗುತ್ತದೆ. ಈ ಮೂಲಕ, ವಯೋಮಿತಿ ಕಡಿಮೆ ಇದ್ದ ಕಾರಣದಿಂದ ಪ್ರವೇಶ ಪಡೆಯಲು ಸಾಧ್ಯವಾಗದ ಮಕ್ಕಳಿಗೂ ಅವಕಾಶ ಕಲ್ಪಿಸಲಾಗಿದೆ. ಇದರ ಜೊತೆಗೆ 5 ವರ್ಷ 10 ತಿಂಗಳಿಗೆ ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸಬಹುದಾಗಿದೆ.

ಕರ್ನಾಟಕ ಶಿಕ್ಷಣ ಕಾಯ್ದೆಗೆ ತಿದ್ದುಪಡಿ: ಈ ಬದಲಾವಣೆಯನ್ನು ಜಾರಿಗೆ ತರುವ ಉದ್ದೇಶದಿಂದ ಕರ್ನಾಟಕ ಶಿಕ್ಷಣ ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಜೊತೆಗೆ, ಶಾಲಾ ದಾಖಲಾತಿ ಪ್ರಕ್ರಿಯೆಯಲ್ಲಿ ಬಳಸುವ ತಂತ್ರಾಂಶದಲ್ಲಿಯೂ ಅಗತ್ಯ ಬದಲಾವಣೆಗಳನ್ನು ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments