ನವದೆಹಲಿ: ಭಾರೀ ಚರ್ಚೆಗೆ ಕಾರಣವಾಗಿರುವ ಸಂಸತ್ ನಲ್ಲಿ ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್ ವಿಂಗಡಣೆ ಸೇರಿದಂತೆ ಮೂರು ಮಸೂದೆಗಳನ್ನು ವಿಶೇಷ ಅಧಿವೇಶನದ ಮೊದಲ ದಿನವೇ ಕೇಂದ್ರ ಸರ್ಕಾರ ಮಂಡಿಸಿದೆ.
ಗುರುವಾರ ಬೆಳಿಗ್ಗೆ ಲೋಕಸಭಾ ವಿಶೇಷ ಅಧಿವೇಶನ ಆರಂಭವಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಪ್ರತಿಪಕ್ಷಗಳ ಗದ್ಧಲದ ನಡುವೆಯೇ ಮಹಿಳಾ ಮೀಸಲಾತಿ, ಹಾಗೂ ಗಡಿ ನಿರ್ಣಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆಗಳನ್ನು ಮಂಡಿಸಿತು.
ಸಂಸತ್ ನಲ್ಲಿ ಮಹಿಳಾ ಪ್ರಾತಿನಿಧ್ಯ ಶೇ.33ಕ್ಕೆ ಹೆಚ್ಚಿಸುವ ಕುರಿತು ಸುದೀರ್ಘ ಸಮಯದಿಂದ ನೆನೆಗುದಿಗೆ ಬಿದ್ದಿರುವ ಮಹಿಳಾ ಮೀಸಲಾತಿ ಮಸೂದೆ ಹಾಗೂ ದೇಶದ ಜನಸಂಖ್ಯೆಗೆ ಅನುಗುಣವಾಗಿ ಲೋಕಸಭೆಯ ಬಲವನ್ನು ಪ್ರಸ್ತುತ ಇರುವ 543 ರಿಂದ 850 ಸ್ಥಾನಗಳಿಗೆ ಹೆಚ್ಚಿಸುವ ಪ್ರಸ್ತಾವನೆ ಇದೆ. ಇದೇ ರೀತಿ ರಾಜ್ಯ ವಿಧಾನಸಭೆಗಳ ಸ್ಥಾನಗಳನ್ನೂ ವಿಸ್ತರಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಕ್ಷೇತ್ರ ಪುನರ್ವಿಂಗಡಣೆಯ ನಂತರವಷ್ಟೇ ಇದು ಸಾಧ್ಯವಾಗಲಿದೆ.
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿದರು. ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಮಸೂದೆಯನ್ನು ವಿರೋಧಿಸಿದ್ದು, ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು.
ಕಳೆದ 14 ವರ್ಷಗಳಿಂದ ಆಡಳಿತ ನಡೆಸುತ್ತಿದ್ದೀರಿ. ಆದರೆ ಈಗ ಯಾಕೆ ತರಾತುರಿಯಲ್ಲಿ ಮೂರು ಮಸೂದೆಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದೀರಿ. ಇಷ್ಟು ದಿನ ಯಾಕೆ ಮೌನವಾಗಿದ್ದೀರಿ. ಮೂರು ಮಸೂದೆಗಳನ್ನು ಜಾರಿಗೆ ತರುವುದರ ಹಿಂದೆ ರಾಜಕೀಯ ಲಾಭದ ಷಡ್ಯಂತ್ರವಿದೆ ಎಂದು ಕೆಸಿ ವೇಣುಗೋಪಾಲ್ ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಸೂದೆ ಜಾರಿಗೆ ತಾಂತ್ರಿಕ ಅಡ್ಡಿ ಎಂಬ ನೆಪದಿಂದ ಈ ಮಸೂದೆ ಜಾರಿಗೆ ತಂದಿರಲಿಲ್ಲ. ಅದರೆ ಮಸೂದೆ ಮಂಡನೆ ಆಗದೇ ಇದ್ದರೆ ಲೋಪದೋಷಗಳ ಬಗ್ಗೆ ಚರ್ಚೆ ಆಗುವುದು ಯಾವಾಗ? ಚರ್ಚೆ ನಡೆದ ನಂತರ ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಂಡು ಜಾರಿಗೆ ತರುವ ಪ್ರಯತ್ನ ಮಾಡೋಣ ಎಂದು ಹೇಳಿದರು.
ಮಹಿಳಾ ಮೀಸಲಾತಿ
ಸಂಸತ್ ನಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ನೀಡುವ ಮಸೂದೆ ಇದಾಗಿದೆ. ಇದರಿಂದ ಲೋಕಸಭಾ ಚುನಾವಣೆ ವೇಳೆ ಒಟ್ಟಾರೆ ಸ್ಥಾನಗಳ ಪೈಕಿ ಶೇ.33 ಸ್ಥಾನಗಳನ್ನು ಮಹಿಳಾ ಮೀಸಲಾತಿ ಕ್ಷೇತ್ರಗಳಾಗಿ ಘೋಷಿಸಲಾಗುವುದು.
ಕ್ಷೇತ್ರ ಪುನರ್ ವಿಂಗಡಣೆ ಮಸೂದೆ
ಹಳೆಯ ಡಿಲಿಮಿಟೇಶನ್ ಕಾಯ್ದೆ, 2002 ಅನ್ನು ರದ್ದುಗೊಳಿಸುತ್ತದೆ ಮತ್ತು ಬದಲಾಯಿಸುತ್ತದೆ. ಈ ಮಸೂದೆಯು ಹೊಸ ಡಿಲಿಮಿಟೇಶನ್ ಆಯೋಗವನ್ನು ಸ್ಥಾಪಿಸಲು ಅವಕಾಶ ನೀಡುತ್ತದೆ. ಈ ಆಯೋಗವು ಕ್ಷೇತ್ರಗಳ ಗಡಿಗಳನ್ನು ಮರು ವ್ಯಾಖ್ಯಾನಿಸುತ್ತದೆ ಮತ್ತು ಇತ್ತೀಚಿನ ಜನಗಣತಿ ದತ್ತಾಂಶವನ್ನು ಆಧರಿಸಿ (2011) ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಸ್ಥಾನಗಳನ್ನು ಹಂಚುತ್ತದೆ.
ಕೇಂದ್ರಾಡಳಿತ ಪ್ರದೇಶಗಳ ಕಾನೂನು (ತಿದ್ದುಪಡಿ) ಮಸೂದೆ, 2026
ಈ ಮಸೂದೆಯು ರಾಜ್ಯಗಳ ಶಾಸಕಾಂಗ ಸಭೆಗಳಲ್ಲಿ ಹಾಗೂ ದೆಹಲಿ, ಜಮ್ಮು ಮತ್ತು ಕಾಶ್ಮೀರ ಮತ್ತು ಪುದುಚೇರಿಯಂತಹ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು ಜಾರಿಗೆ ತರಲು ದಾರಿ ಮಾಡಿಕೊಡುತ್ತದೆ. ಈ ಮೂರು ಮಸೂದೆಗಳನ್ನು ಪ್ರಾಥಮಿಕವಾಗಿ ಮಹಿಳಾ ಮೀಸಲಾತಿಯ ಅನುಷ್ಠಾನವನ್ನು ತ್ವರಿತಗೊಳಿಸಲು ಮತ್ತು ದೇಶದ ಚುನಾವಣಾ ರಚನೆಯಲ್ಲಿ ವ್ಯಾಪಕ ಬದಲಾವಣೆಗಳನ್ನು ಮಾಡಲು ಪರಿಚಯಿಸಲಾಗುತ್ತಿದೆ.


