ಬೆಂಗಳೂರು: ಮನೆಯಲ್ಲಿ ಯಾರೂ ಇಲ್ಲ ಎಂದು ಪ್ರಿಯಕರನನ್ನು ಕರೆಸಿಕೊಂಡು ವಿದೇಶೀ ಸ್ಟೈಲ್ ನಲ್ಲಿ ಪ್ರಪೋಸ್ ಮಾಡ್ತೀನಿ ಅಂತ ಹೇಳಿದ ಪ್ರೇಯಸಿ, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪ್ರಿಯಕರನನ್ನು ಕೊಲೆಗೈದ ಭೀಕರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜನನಗರದಲ್ಲಿ ಮಂಗಳವಾರ ಈ ಭೀಕರ ಘಟನೆ ನಡೆದಿದ್ದು, ಪ್ರೇಯಸಿ ಪ್ರೇಮಾ ನಂಬಿ ಹೋದ ಪ್ರಿಯಕರ ಕಿರಣ್ ಸಜೀವಹದನಗೊಂಡಿದ್ದಾರೆ.
ಪ್ರಿಯಕರ ಸಾವಿನ ದೃಶ್ಯವನ್ನು ಪ್ರೇಯಸಿ ಮೊಬೈಲ್ ನಲ್ಲಿ ಸೆರೆ ಹಿಡಿದು ವಿಕೃತಿ ಮೆರೆದಿದ್ದಾರೆ. ಆದರೆ ಪೊಲೀಸರು ಬಂದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕತೆ ಕಟ್ಟಿ ಪೊಲೀಸರನ್ನು ಯಾಮಾರಿಸಲು ಪ್ರಯತ್ನಿಸಿದ್ದಾಳೆ.
ಪ್ರೇಮಾ ಮತ್ತು ಕಿರಣ್ ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಪರಸ್ಪರ ಪ್ರೀತಿಸುತ್ತಿದ್ದಳು. ಅಣ್ಣ ಮತ್ತು ತಾಯಿಯ ಜೊತೆ ವಾಸವಾಗಿದ್ದ ಪ್ರೇಮಾ, ಮನೆಯಲ್ಲಿ ಯಾರೂ ಇಲ್ಲ ಬಾ ಎಂದು ಕರೆಸಿಕೊಂಡಿದ್ದಾಳೆ.
ಬೈಕ್ ನಲ್ಲಿ ಬ್ಯಾಗ್ ತಗಲಾಕಿಕೊಂಡು ಉತ್ಸಾಹದಿಂದ ಬಂದ ಕಿರಣ್ ಗೆ ಮೊದಲೇ ಸಿದ್ದಪಡಿಸಿಕೊಟ್ಟುಕೊಂಡಿದ್ದ ಹಗ್ಗದಿಂದ ಕೈಕಾಲು ಕಟ್ಟಿ ಕಣ್ಣಿಗೆ ಬಟ್ಟೆ ಕಟ್ಟಿದ್ದಾಳೆ. ಪ್ರಿಯಕರ ಕೇಳಿದಾಗ, ವಿದೇಶೀ ಸ್ಟೈಲ್ ಇದು ಎಂದು ನಂಬಿಸಿದ್ದಾಳೆ.
ಪ್ರೇಯಸಿ ಮಾತು ನಂಬಿದ ಕಿರಣ್ ಅಮಾಯಕನಂತೆ ಅವಳು ಹೇಳಿದಂತೆ ಕೇಳಿದ್ದಾನೆ. ಕಣ್ಣಿಗೆ ಬಟ್ಟೆ ಕಟ್ಟಿ ಕೈಕಾಲು ಕಟ್ಟಿದ ನಂತರ ಮೊದಲೇ ತಂದಿಟ್ಟುಕೊಂಡಿದ್ದ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ಪ್ರಿಯಕರ ಒದ್ದಾಡುತ್ತಿದ್ದರೆ ಮೊಬೈಲ್ ನಲ್ಲಿ ವೀಡಿಯೋ ಮಾಡಿ ವಿಕೃತಿ ಮೆರೆದಿದ್ದಾಳೆ.
ಆರಂಭದಲ್ಲಿ “ಕಿರಣ್ ತಾನಾಗಿಯೇ ಬೆಂಕಿ ಹಚ್ಚಿಕೊಂಡ” ಎಂದು ಪೊಲೀಸರಿಗೆ ಸುಳ್ಳು ಹೇಳಿದ್ದ ಯುವತಿಯ ಬಣ್ಣ ಸಿಸಿಟಿವಿ ದೃಶ್ಯಾವಳಿಗಳಿಂದ ಬಯಲಾಗಿದೆ. ಕಿರಣ್ ಬರುವಾಗ ಯಾವುದೇ ಪೆಟ್ರೋಲ್ ತಂದಿರಲಿಲ್ಲ, ಹೀಗಾಗಿ ಯುವತಿಯೇ ಇದನ್ನು ಮೊದಲೇ ಸಂಚು ರೂಪಿಸಿ ತಂದಿಟ್ಟಿದ್ದಳು ಎಂಬ ಅನುಮಾನ ದಟ್ಟವಾಗಿದೆ.
ಬ್ಯಾಡರಹಳ್ಳಿ ಪೊಲೀಸರು ಯುವತಿಯನ್ನು ವಶಕ್ಕೆ ಪಡೆದಿದ್ದು, ಈ ಕ್ರೌರ್ಯಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.



