Wednesday, May 13, 2026
Google search engine
Homeರಾಜ್ಯ10 ದಿನದಲ್ಲಿ ಕೇಂದ್ರಕ್ಕೆ ಮೇಕೆದಾಟು ಡಿಪಿಆರ್ ಸಲ್ಲಿಕೆ: ಡಿಕೆ ಶಿವಕುಮಾರ್

10 ದಿನದಲ್ಲಿ ಕೇಂದ್ರಕ್ಕೆ ಮೇಕೆದಾಟು ಡಿಪಿಆರ್ ಸಲ್ಲಿಕೆ: ಡಿಕೆ ಶಿವಕುಮಾರ್

ಗುಂಡ್ಲುಪೇಟೆ: ಮೇಕೆದಾಟು ಯೋಜನೆಯಲ್ಲಿ ಕಾನೂನು ಹೋರಾಟದಲ್ಲಿ ನಮಗೆ ಜಯ ಸಿಕ್ಕಿದೆ. 10 ದಿನದಲ್ಲಿ ಈ ಯೋಜನೆ ಕುರಿತು ಕೇಂದ್ರ ಸರ್ಕಾರಕ್ಕೆ ಡಿಪಿಆರ್ ಸಲ್ಲಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ಧಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ 110 ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

ನೀವೆಲ್ಲರೂ ಸೇರಿ ನಮ್ಮ ನೀರು ನಮ್ಮ ಹಕ್ಕು ಎಂದು ಹೋರಾಟದ ಹೆಜ್ಜೆ ಹಾಕಿದ್ದೀರಿ. ಸುಪ್ರೀಂ ಕೋರ್ಟ್ ನಲ್ಲಿ ನಮಗೆ ಈ ವಿಚಾರವಾಗಿ ನ್ಯಾಯ ಸಿಕ್ಕಿದ್ದು, ಈ ಯೋಜನೆ ವಿಚಾರವಾಗಿ ಅಂತಿಮ ತೀರ್ಮಾನ ಕೇವಲ ಕೇಂದ್ರ ಸರ್ಕಾರ ಮಾಡಬೇಕು ಎಂದು ಹೇಳಿದೆ ಎಂದರು.

ನಾವು ಈಗಾಗಲೇ ಡಿಪಿಆರ್ ತಯಾರಿ ಮಾಡುತ್ತಿದ್ದು, ಮುಂದಿನ ಹತ್ತು ದಿನಗಳಲ್ಲಿ ಈ ಡಿಪಿಆರ್ ಕೇಂದ್ರಕ್ಕೆ ಸಲ್ಲಿಸಲಿದ್ದು, ನಂತರ ಅವರು ಅನುಮತಿ ನೀಡಬೇಕು. ಕೇಂದ್ರದ ಅನುಮತಿ ಸಿಕ್ಕ ನಂತರ ಯೋಜನೆ ಜಾರಿ ಮಾಡಲಾಗುವುದು. ಈಗಾಗಲೇ ಯೋಜನೆ ಜಾರಿಗೆ ಕಚೇರಿ ಆರಂಭಿಸಿದ್ದು, ಅಗತ್ಯ ಭೂಮಿಯನ್ನು ಗುರುತಿಸಿದ್ದೇವೆ” ಎಂದು ತಿಳಿಸಿದರು.

ನಮ್ಮ ಸರ್ಕಾರ ಆರನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿ ನೀಡಿದೆ. 1,11,111 ಜನರಿಗೆ ಭೂಮಿ ಪಟ್ಟಾ ದಾಖಲೆ ಉಚಿತವಾಗಿ ನೀಡಿ ಅವರಿಗೆ ಭೂಮಿ ಗ್ಯಾರಂಟಿ ಯೋಜನೆ ನೀಡಿದ್ದೇವೆ. ನಮ್ಮ ಏಳನೇ ಗ್ಯಾರಂಟಿ ಯೋಜನೆಯಾಗಿ ಇಡೀ ರಾಜ್ಯದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಮೂಲಕ ನೀರನ್ನು ಒದಗಿಸುವ ಕಾರ್ಯಕ್ರಮ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಕಾರಿ ಉದ್ಯೋಗ ನೀಡುವ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಆ ಕುಟುಂಬದ ಮಹಿಳೆಯರು ಹಾಗೂ ಮಕ್ಕಳ ಮುಖದಲ್ಲಿ ನಗು ನೋಡಿ ನಮ್ಮ ಬದುಕು ಸಾರ್ಥಕವೆನಿಸಿದೆ ಎಂದು ಡಿ.ಕೆ. ಶಿವಕುಮಾರ್ ಸಂತಸ ವ್ಯಕ್ತಪಡಿಸಿದರು.

ನಾನು ಹಾಗೂ ಸಿದ್ದರಾಮಯ್ಯ ಅವರು ಚಾಮರಾಜನಗರಕ್ಕೆ ಬಂದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಲ್ಲಿ ನಡೆದ 33 ಮಂದಿಯ ಕೊಲೆ ಪರಿಶೀಲನೆ ಮಾಡಿದೆವು. ಅಂದು ಬಿಜೆಪಿ ಸರ್ಕಾರ ಆಸ್ಪತ್ರೆಯಲ್ಲಿ ಸತ್ತವರು ಕೇವಲ 3 ಮಂದಿ ಎಂದು ಹೇಳಿತ್ತು. ನಾನು, ಸಿದ್ದರಾಮಯ್ಯ ಹಾಗೂ ಧ್ರುವನಾರಾಯಣ್, ಕೃಷ್ಣಮೂರ್ತಿ, ಪುಟ್ಟರಂಗಶೆಟ್ಟಿ ಅವರು ಎಲ್ಲರ ಗಮನ ಸೆಳೆದು ಮೃತರ ಕುಟುಂಬಕ್ಕೆ ಭೇಟಿ ಮಾಡಿ ಅವರಿಗೆ ನ್ಯಾಯ ಒದಗಿಸುವ ಮಾತು ಕೊಟ್ಟಿದ್ದೆವು. ನಾವು ನುಡಿದಂತೆ ನಡೆದಿರುವುದು ನಮ್ಮ ಜನಪರ ಆಡಳಿತಕ್ಕೆ ಸಾಕ್ಷಿಯಾಗಿದೆ. ಈ ಕಾರ್ಯಕ್ಕೆ ಸಹಕಾರ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ವೆಂಕಟೇಶ್, ಶರಣಪ್ರಕಾಶ್ ಪಾಟೀಲ್ ಹಾಗೂ ಅಧಿಕಾರಿಗಳಿಗೆ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕೋವಿಡ್ ಸಮಯದಲ್ಲಿ ಲಕ್ಷಾಂತರ ಮಂದಿ ಸತ್ತಿದ್ದಾರೆ. ನಾವು ಎಲ್ಲರಿಗೂ ನ್ಯಾಯ ಒದಗಿಸಲು ಸಾಧ್ಯವಾಗದೇ ಇರಬಹುದು. ಆದರೆ ಈ ಜಿಲ್ಲೆಯಲ್ಲಿ ಸತ್ತವರ ಕುಟುಂಬವನ್ನು ಭೇಟಿ ಮಾಡಿ, ಪಕ್ಷದ ವತಿಯಿಂದ ಪರಿಹಾರ ನೀಡಿ, ಅವರಿಗೆ ಆತ್ಮಸ್ಥೈರ್ಯ ತುಂಬಿದೆವು ಎಂದು ಹೇಳಿದರು.

ಗುಂಡ್ಲುಪೇಟೆಗೆ 1 ಸಾವಿರ ಕೋಟಿ, 110 ಕೆರೆಗಳಿಗೆ ನೀರು

ಜಿಲ್ಲೆಯ ಈ 25 ಸಂತ್ರಸ್ತ ಕುಟುಂಬ ಸದಸ್ಯರಿಗೆ ಉದ್ಯೋಗ ಸಿಕ್ಕಿದೆ. 500 ಕೋಟಿ ವೆಚ್ಚದಲ್ಲಿ ಈ ಭಾಗದ 110 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಿಕ್ಕಿದೆ. 1 ಸಾವಿರ ಕೋಟಿಗೂ ಹೆಚ್ಚು ಅನುದಾನ ಕ್ಷೇತ್ರದ ಅಭಿವೃದ್ಧಿಗೆ ಬಂದಿದೆ. ಇವುಗಳ ಜತೆಗೆ ಪಂಚ ಗ್ಯಾರಂಟಿ ಯೋಜನೆಗಳು ನಿಮ್ಮನ್ನು ತಲುಪಿವೆ. ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಬಡ ಕುಟುಂಬದ ಮಹಿಳೆಗೆ ಮಾಸಿಕ 2 ಸಾವಿರ ರೂಪಾಯಿ ಹಣ ಬರುತ್ತಿದೆ. ಬಡವರಿಗೆ ತಿಂಗಳಿಗೆ 10 ಕೆ.ಜಿ ಅಕ್ಕಿ. 200 ಯೂನಿಟ್ ವರೆಗೂ ಉಚಿತ ವಿದ್ಯುತ್, ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ ಎಂದು ವಿವರಿಸಿದರು.

ವಾರ್ಷಿಕ 1 ಲಕ್ಷ ಕೋಟಿ ಹಣ ಜನರಿಗೆ ಸಮರ್ಪಣೆ

ನಾವು ಜಾತಿ, ಧರ್ಮ ಹಾಗೂ ಪಕ್ಷದ ಆಧಾರದ ಮೇಲೆ ಯೋಜನೆಗಳನ್ನು ನೀಡುತ್ತಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದವರು ಅಧಿಕಾರಕ್ಕೆ ಬಂದಂತೆ. ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಲು ನಮ್ಮ ಸರ್ಕಾರ ವಾರ್ಷಿಕ 20 ಸಾವಿರ ಕೋಟಿ ವೆಚ್ಚ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ, ಎಸ್ ಸಿಪಿ, ಟಿಎಸ್‌ ಪಿ ಹಾಗೂ ಪಿಂಚಣಿ ಯೋಜನೆ ಸೇರಿಸಿದರೆ ಪ್ರತಿ ವರ್ಷ 1 ಲಕ್ಷ ಕೋಟಿ ಹೆಚ್ಚು ಹಣವನ್ನು ಜನರ ಜೇಬಿಗೆ ಹಾಕುತ್ತಿದೆ ಎಂದು ಹೇಳಿದರು.

“ಗಣೇಶ್ ಪ್ರಸಾಸ್ ಅವರ ಬೇಡಿಕೆಯಂತೆ ಇಂದು ಈ ಭಾಗದ ಕೆರೆಗಳಿಗೆ ನೀರು ತುಂಬಿಸಬೇಕು ಎಂದು 475 ಕೋಟಿ ವೆಚ್ಚದಲ್ಲಿ 110 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂತಹ ಯಾವುದಾದರೂ ಒಂದು ಕಾರ್ಯಕ್ರಮ ಕೊಟ್ಟಿದ್ದರಾ? ಅವರದ್ದು ಏನಿದ್ದರೂ ಖಾಲಿ ಬುಟ್ಟಿ ಬೇವಿನ ಸೋಪ್ಪು, ನಂದೇ ಬೆಳಗೋ ಪೂಜಾರಿ ಎಂಬಂತೆ ಖಾಲಿ ಮಾತು ಅಷ್ಟೆ. ಯಡಿಯೂರಪ್ಪ ಅವರ ಕಾಲದಲ್ಲಿ 2 ಸೀರೆ ಒಂದು ಸೈಕಲ್ ಕೊಟ್ಟಿದ್ದು ಬಿಟ್ಟರೆ ಬೇರೆ ಏನಾದರೂ ಕೊಟ್ಟರಾ? ರಾಜ್ಯದಲ್ಲಿ ಯಾವುದೇ ಜನಪರ ಕಾರ್ಯಕ್ರಮ ನೀಡಿದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments