ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ವಿವಿಧ ಪಕ್ಷಗಳ ನಾಯಕರು, ಕಾರ್ಯಕರ್ತರು ಹಾಗೂ ಮಾಹಜಿ ಅಧಿಕಾರಿಗಳು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಸಂಸತ್ ನಲ್ಲಿ ಶೇ.33ರಷ್ಟು ಮಹಿಳಾ ಮೀಸಲು ಮಸೂದೆ ಲೋಕಸಭೆಯಲ್ಲಿ ವಿಫಲಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿ, ವಿಪಕ್ಷಗಳ ವಿರುದ್ಧ ಆರೋಪಗಳನ್ನು ಮಾಡಿದ್ದರು ಅಲ್ಲದೇ ಜನರು ವಿಪಕ್ಷಗಳಿಗೆ ಪಾಠ ಕಲಿಸಬೇಕು ಎಂದು ಕರೆ ನೀಡಿದ್ದರು.
ಮೋದಿ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೆ ನೀಡಿದ ದೂರಿನಲ್ಲಿ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್, ಮಾಜಿ ಅಧಿಕಾರಿ ನಜೀಬ್ ಜಂಗ್, ಎಂ.ಜಿ. ದೇವಸಹಾಯಂ, ಶಿಕ್ಷಣ ತಜ್ಞರಾದ ಜೋಯಾ ಹಾಸನ್, ಸಂಗೀತಗಾರ ಟಿ.ಎಂ. ಕೃಷ್ಣ, ಬರಹಗಾರ ಕೆ. ಸಚ್ಚಿದಾನಂದನ್, ಸಾಮಾಜಿಕ ಹೋರಾಟಗಾರ್ತಿ ಅಂಜಲಿ ಭಾರದ್ವಾಜ್, ಹರ್ಷ್ ಮಂದರ್, ಯೋಗೇಂದ್ರ ಯಾದವ್ ಸಹಿ ಹಾಕಿದ ಪ್ರಮುಖರಾಗಿದ್ದಾರೆ.
ಚುನಾವಣೆ ಪ್ರಚಾರ ಮತ್ತು ಪಕ್ಷಪಾತದ ಪ್ರಚಾರಕ್ಕಾಗಿ ಪ್ರಧಾನಿ ಮೋದಿ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಸರ್ಕಾರದ ಮಾಧ್ಯಮವನ್ನು ಬಳಸಿಕೊಂಡಿದ್ದಾರೆ. ಉನ್ನತ ಮಟ್ಟದ ಅಧಿಕಾರದಲ್ಲಿದ್ದರು ಚುನಾವಣೆ ನ್ಯಾಯಸಮ್ಮತ ಮತ್ತು ಸ್ವತಂತ್ರವಾಗಿ ನಡೆಯದಂತೆ ಪ್ರಭಾವ ಬೀರಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಪ್ರಧಾನಿ ನರೇಂದ್ರ ಮೋದಿ, ದೂರದರ್ಶನ, ಆಲ್ ಇಂಡಿಯಾ ರೇಡಿಯೋ, ಸಂಸದ್ ಟಿವಿ ಮುಂತಾದ ಕೇಂದ್ರ ಸರ್ಕಾರಿ ಒಡೆತನದ ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.



