ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 440 ಅಂಕ ಬಂದರೂ ಕಡಿಮೆ ಆಗಿದೆ ಎಂದು ನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ನಂಜನಗೂಡು ನಗರದಲ್ಲಿರುವ ಶ್ರೀ ಗುರುಮಲ್ಲೇಶ್ವರ ಖಾಸಗಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕಿ ಪ್ರಥಮ ದರ್ಜೆಯಲ್ಲಿ ಪಾಸ್ ಆಗಿದ್ದರೂ ಕಡಿಮೆ ಅಂಕ ಬಂದಿದೆ ಎಂದು ಮನನೊಂದು ನೇಣಿಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.
ತಾಲೂಕಿನ ಕುರಹಟ್ಟಿ ಗ್ರಾಮದ ಮಂಜು ಮತ್ತು ಸವಿತಾ ದಂಪತಿಗಳ ಪುತ್ರಿ ತ್ರಿಶಾಲ ಮೃತ ಬಾಲಕಿಯಾಗಿದ್ದಾಳೆ. ನಂಜನಗೂಡು ನಗರದ ಗುರುಮಲ್ಲೇಶ್ವರ ಖಾಸಗಿ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾಭ್ಯಾಸ ಮಾಡಿ ಫಲಿತಾಂಶಕ್ಕಾಗಿ ಕಾಯುತ್ತಿದ್ದಳು.
ಗುರುವಾರ ಎಸ್ ಎಸ್ ಎಲ್ ಸಿ ಫಲಿತಾಂಶ ಬಂದ ಬಳಿಕ ಬರೋಬ್ಬರಿ 440 ಅಂಕಗಳನ್ನು ಗಳಿಸಿಕೊಂಡು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದ ಮೃತ ಬಾಲಕಿ ತ್ರಿಶಾಲ ನಾನು ಪರೀಕ್ಷೆಯನ್ನು ಡಿಸ್ಟಿಂಕ್ಷನ್ ಬರುವ ಮಟ್ಟಕ್ಕೆ ಬರೆದಿದ್ದೇನೆ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿರುವುದು ಕಡಿಮೆ ಅಂಕ ಎಂದು ಮನನೊಂದು ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ನೇಣಿಗೆ ಶರಣಾಗಿದ್ದಾಳೆ. ಬಾಲಕಿಯ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿದೆ.



