ಬೆಂಗಳೂರು: ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ಸಿಎ) ಲೀಗ್ ಪಂದ್ಯಾವಳಿ ವೇಳೆ ರಣಜಿ ಅನುಭವಿ ಕ್ರಿಕೆಟ್ ಆಟಗಾರ ಹೃದಯಾಘಾತದಿಂದ ಮೃತಪಟ್ಟಿರುವಂತಹ ಘಟನೆ ಬೊಮ್ಮಸಂದ್ರದ ಎಸ್ಎಲ್ಎಸ್ ಮೈದಾನದಲ್ಲಿ ನಡೆದಿದೆ.
ಶಿವಮೊಗ್ಗ ಮೂಲದ ಎಸ್.ಎಲ್. ಅಕ್ಷಯ್ (36) ಮೃತ ಕ್ರಿಕೆಟ್ ಆಟಗಾರನಾಗಿದ್ದಾನೆ, ಬೊಮ್ಮಸಂದ್ರದ ಎಸ್ಎಲ್ಎಸ್ ಕ್ರೀಡಾಂಗಣದಲ್ಲಿ ಕೆಎಸ್ಸಿಎ ನಸೂರ್ ಸ್ಮಾರಕ ಏಕದಿನ ಪಂದ್ಯಾವಳಿ ನಡೆಯುತ್ತಿತ್ತು.
ಅಕ್ಷಯ್ ಪಂದ್ಯದ ವೇಳೆ ಎಂದಿನಂತೆ ಉತ್ಸಾಹದಿಂದಲೇ ಪಾಲ್ಗೊಂಡು 4 ಓವರ್ ಬೌಲಿಂಗ್ ಮಾಡಿದ್ದರು. ಆದರೆ, ಆ ಬಳಿಕ ತಮಗೆ ಸ್ವಲ್ಪ ಆರೋಗ್ಯ ಸಮಸ್ಯೆ ಕಾಡುತ್ತಿದೆ ಎಂದು ಹೇಳಿ ಮೈದಾನದಿಂದ ಅರ್ಧಕ್ಕೆ ಹೊರಬಂದಿದ್ದರು. ಕ್ರೀಡಾಂಗಣದ ಹೊರಗೆ ಬಂದು ನೀರು ಕುಡಿಯುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.
ತಕ್ಷಣವೇ ಅಕ್ಷಯ್ರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ. ಸದ್ಯ ಮೃತದೇಹವನ್ನು ಅವಲಹಳ್ಳಿಯ ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಘಟನೆ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.



