Friday, June 5, 2026
Google search engine
Homeತಾಜಾ ಸುದ್ದಿ15 ಲಕ್ಷ ಕೋಟಿ ಬೃಹತ್ ಹಗರಣ: ಬೆಂಗಳೂರಿನ ರಾಜೇಶ್ ಚಿನ್ನ ರಫ್ತು ಕಂಪನಿ ವಹಿವಾಟಿಗೆ ಸೆಬಿ...

15 ಲಕ್ಷ ಕೋಟಿ ಬೃಹತ್ ಹಗರಣ: ಬೆಂಗಳೂರಿನ ರಾಜೇಶ್ ಚಿನ್ನ ರಫ್ತು ಕಂಪನಿ ವಹಿವಾಟಿಗೆ ಸೆಬಿ ನಿರ್ಬಂಧ

ಬೆಂಗಳೂರು: ದೇಶದ ಅತಿ ದೊಡ್ಡ ಚಿನ್ನ ಸಂಸ್ಕರಣೆ ಮತ್ತು ಆಭರಣ ರಫ್ತು ಕಂಪನಿಯಾದ ಬೆಂಗಳೂರು ಮೂಲದ ರಾಜೇಶ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್ ನಲ್ಲಿ 15.15 ಲಕ್ಷ ಕೋಟಿ ರೂ. ವಂಚನೆ ನಡೆದಿದೆ ಎಂದು ಸೆಬಿ ಬಂಡವಾಳ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿ (SEBI) ಆಘಾತಕಾರಿ ವರದಿ ನೀಡಿದೆ.

ನಕಲಿ ಬಿಲ್ ಹಾಗೂ ವಹಿವಾಟು ಕುರಿತು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಪಾರ ಪ್ರಮಾಣದ ವಂಚನೆ ಮಾಡಲಾಗಿದೆ ಎಂದು ಸೆಬಿ ನಡೆಸಿರುವ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಹಣಕಾಸು ವರ್ಷ 2021 ರಿಂದ 2025 ರ ನಡುವಿನ ಅವಧಿಯಲ್ಲಿ ಕಂಪನಿಯು ತನ್ನ ಅಂಗಸಂಸ್ಥೆಗಳ ಮೂಲಕ ಬಂದ ಆದಾಯದಲ್ಲಿ 99.8% ರಷ್ಟು ಹಣವನ್ನು ಕೇವಲ ಕಾಗದದ ಮೇಲಷ್ಟೇ ಸೃಷ್ಟಿಸಿ, ಲೆಕ್ಕಪತ್ರಗಳಲ್ಲಿ ಭಾರಿ ಅಕ್ರಮ ಎಸಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಸ್ವಿರ್ಜಲೆಂಡ್ ನಲ್ಲಿರುವ ವಿಶ್ವವಿಖ್ಯಾತ ಚಿನ್ನದ ರಿಫೈನರಿಯ ಹೆಸರನ್ನು ಬಳಸಿಕೊಂಡು ಸುಳ್ಳು ಆದಾಯದ ಬೆಟ್ಟವನ್ನು ಸೃಷ್ಟಿಸಿದ್ದಕ್ಕೆ ಸೆಬಿ ಈಗ ಪ್ರವರ್ತಕರಿಗೆ ನಿಷೇಧ ಹೇರಿದೆ.

ಬೆಂಗಳೂರಿನಲ್ಲಿ ಮುಖ್ಯ ಕಚೇರಿ

ಕಂಪನಿಯನ್ನು 1989ರಲ್ಲಿ ಸ್ಥಾಪಿಸಲಾಗಿದ್ದು ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಇದೆ. ಈ ಕಂಪನಿಯು ಚಿನ್ನದ ಗಣಿಗಾರಿಕೆಯಿಂದ ಹಿಡಿದು, ಸಂಸ್ಕರಣೆ, ಆಭರಣ ವಿನ್ಯಾಸ, ಸಗಟು ಮಾರಾಟ ಮತ್ತು ಚಿಲ್ಲರೆ ವ್ಯಾಪಾರದವರೆಗಿನ (Mine-to-Retail) ಸಂಪೂರ್ಣ ಪೂರೈಕೆ ಸರಪಳಿಯನ್ನು ತನ್ನದೇ ನಿಯಂತ್ರಣದಲ್ಲಿ ಹೊಂದಿರುವ ಕಂಪನಿಯಾಗಿದೆ. ಭಾರತದಲ್ಲಿ ಇದರ ಆಭರಣ ಮಳಿಗೆಗಳು ಶುಭ್ ಜ್ಯುವೆಲ್ಲರ್ಸ್ (Shubh Jewellers) ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಪ್ರವರ್ತಕರಿಗೆ ನಿಷೇಧ

ಸೆಬಿ ಜೂನ್ 3 ರಂದು ಹೊರಡಿಸಿದ ಮಧ್ಯಂತರ ಆದೇಶದಲ್ಲಿ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ರಾಜೇಶ್ ಮೆಹ್ತಾ ಅವರಿಗೆ ಷೇರು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡದಂತೆ ತಾತ್ಕಾಲಿಕ ನಿಷೇಧ ಹೇರಿದೆ. ಮಂಡಳಿಯ ಅಥವಾ ಆಡಿಟ್ ಸಮಿತಿಯ ಒಪ್ಪಿಗೆಯಿಲ್ಲದೆ ರಾಜೇಶ್ ಮೆಹ್ತಾ ಅವರ ವೈಯಕ್ತಿಕ ಖಾತೆಗೆ 339 ಕೋಟಿ ರೂ. ವರ್ಗಾಯಿಸಲಾಗಿದ್ದು, ಅದರಲ್ಲಿ ಕೇವಲ 232 ಕೋಟಿ ರೂ. ಮಾತ್ರ ಮರಳಿ ಬಂದಿದೆ ಎಂದು ಆರೋಪಿಸಲಾಗಿದೆ.

ಕಂಪನಿ ಹೇಳಿದ್ದೇನು?

ರಾಜೇಶ್ ಎಕ್ಸ್‌ಪೋರ್ಟ್ಸ್ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದು ಸೆಬಿಯೊಂದಿಗಿನ ಸಂವಹನದ ಕೊರತೆ ಉಂಟಾಗಿದೆ ಮತ್ತು ಕಂಪನಿಯು ಘೋಷಿಸಿರುವ ಆದಾಯ ನಿಖರವಾಗಿದೆ ಎಂದು ಸ್ಪಷ್ಟೀಕರಣ ನೀಡಿದೆ.

ಸೆಬಿ ವರದಿಯಲ್ಲಿ ಏನಿದೆ?

ಕಂಪನಿಯು 2021 ರಿಂದ 2025 ರ ನಡುವೆ ಒಟ್ಟು 15.15 ಲಕ್ಷ ಕೋಟಿ ರೂ. ಆದಾಯವನ್ನು ಹೆಚ್ಚುವರಿಯಾಗಿ ತೋರಿಸಿದೆ. ಇದು ಅವರ ಒಟ್ಟು ಅಂಗಸಂಸ್ಥೆಗಳ ಆದಾಯದ 99.8% ರಷ್ಟಾಗಿದೆ.

ಕಂಪನಿಯ ಒಟ್ಟು ಆದಾಯದ 97% ರಿಂದ 99% ರಷ್ಟು ವಿದೇಶಿ ಅಂಗಸಂಸ್ಥೆಗಳಿಂದ (ಸ್ವಿಟ್ಜರ್‌ಲ್ಯಾಂಡ್‌ನ Valcambi SA ರಿಫೈನರಿ) ಬರುತ್ತದೆ ಎಂದು ತೋರಿಸಲಾಗಿತ್ತು. ಆದರೆ ಆ ಸಂಸ್ಥೆಗಳ ನಿಜವಾದ ಆಡಿಟ್ ವರದಿಗಳನ್ನು ಪರಿಶೀಲಿಸಿದಾಗ ಅಲ್ಲಿ ಇಷ್ಟು ದೊಡ್ಡ ಮಟ್ಟದ ವಹಿವಾಟೇ ನಡೆದಿಲ್ಲ ಎನ್ನುವುದು ಪತ್ತೆಯಾಗಿದೆ.

ಕಂಪನಿಯು ಹಣಕಾಸು ವರ್ಷ 2022 ಮತ್ತು 2024 ರ ನಡುವೆ ಯಾವುದೇ ನೈಜ ಉತ್ಪನ್ನಗಳ ವಿನಿಮಯವಿಲ್ಲದೆ ಕೇವಲ ಕಾಗದದ ಮೇಲೆ 11,487 ಕೋಟಿ ರೂ. ಮೌಲ್ಯದ ನಕಲಿ ಮಾರಾಟ ಹಾಗೂ 11,488 ಕೋಟಿ ರೂ. ಮೌಲ್ಯದ ನಕಲಿ ಖರೀದಿ ವ್ಯವಹಾರಗಳನ್ನು ಸೃಷ್ಟಿಸಿದೆ.

ಕಂಪನಿಯ ಮುಖ್ಯಸ್ಥರಾದ ರಾಜೇಶ್ ಮೆಹ್ತಾ ಅವರು ಮಂಡಳಿಯ ಅನುಮತಿಯಿಲ್ಲದೆ ಕಂಪನಿಯ ನಿಧಿಯಿಂದ 339 ಕೋಟಿ ರೂ. ಹಣವನ್ನು ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಷೇರು ಈ ಹಣವನ್ನು ಅವರು ‘ಅಫ್ಲುಯೆನ್ಸ್ ಷೇರ್ಸ್ ಆಂಡ್ ಸ್ಟಾಕ್ಸ್’ ಎಂಬ ಬ್ರೋಕರ್ ಮೂಲಕ ತಮ್ಮ ವೈಯಕ್ತಿಕ ಹೆಸರಿನಲ್ಲಿ ಡೆರಿವೇಟಿವ್ಸ್ (F&O) ವ್ಯಾಪಾರ ಮಾಡಲು ಬಳಸಿಕೊಂಡಿದ್ದಾರೆ.

ರಾಜೇಶ್ ಎಕ್ಸ್‌ಪೋರ್ಟ್ಸ್ ತನ್ನ ವಾರ್ಷಿಕ ವರದಿಗಳಲ್ಲಿ ಆಫ್ರಿಕಾದಲ್ಲಿ ದೊಡ್ಡ ಚಿನ್ನದ ಗಣಿಯನ್ನು (Gold Mine) ಹೊಂದಿರುವುದಾಗಿ ಮತ್ತು ಅದರಲ್ಲಿ ಹೂಡಿಕೆ ಮಾಡಿರುವುದಾಗಿ ಹೂಡಿಕೆದಾರರಿಗೆ ತಿಳಿಸಿತ್ತು. ಆದರೆ ಆಡಿಟರ್‌ಗಳು ಕೇಳಿದಾಗ ಈ ಗಣಿಗೆ ಸಂಬಂಧಿಸಿದ ಯಾವುದೇ ಕಾನೂನುಬದ್ಧ ದಾಖಲೆಗಳನ್ನು ಒದಗಿಸಲು ಕಂಪನಿಗೆ ಸಾಧ್ಯವಾಗಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments