Monday, June 15, 2026
Google search engine
Homeಕ್ರೀಡೆವನಿತೆಯರ‌ ಟಿ-20 ವಿಶ್ವಕಪ್: ದೀಪ್ತಿಗೆ 5 ವಿಕೆಟ್:‌ ಪಾಕಿಸ್ತಾನಕ್ಕೆ 64 ರನ್‌ ಸೋಲುಣಿಸಿದ ಭಾರತ

ವನಿತೆಯರ‌ ಟಿ-20 ವಿಶ್ವಕಪ್: ದೀಪ್ತಿಗೆ 5 ವಿಕೆಟ್:‌ ಪಾಕಿಸ್ತಾನಕ್ಕೆ 64 ರನ್‌ ಸೋಲುಣಿಸಿದ ಭಾರತ

ಆಲ್‌ ರೌಂಡರ್‌ ದೀಪ್ತಿ ಶರ್ಮ ಗಳಿಸಿದ 5 ವಿಕೆಟ್‌ ನೆರವಿನಿಂದ ಭಾರತ ತಂಡ 64 ರನ್‌ ಗಳ ಭಾರೀ ಅಂತರದಿಂದ ಪಾಕಿಸ್ತಾನ ತಂಡವನ್ನು ಮಣಿಸಿ ವನಿತೆಯರ ಟಿ-20 ವಿಶ್ವಕಪ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಬರ್ಮಿಂಗ್‌ ಹ್ಯಾಂನಲ್ಲಿ ಭಾನುವಾರ ನಡೆದ ಗುಂಪು-1ರ ಮೊದಲ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಲು ನಿರ್ಧರಿಸಿದ ಭಾರತ ತಂಡ ಸ್ಮೃತಿ ಮಂದಾನ ಅರ್ಧಶತಕದ ಸಹಾಯದಿಂದ 20 ಓವರ್‌ ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 170 ರನ್‌ ಸಂಪಾದಿಸಿತು. ಕಠಿಣ ಗುರಿ ಬೆಂಬತ್ತಿದ ಪಾಕಿಸ್ತಾನ ತಂಡ 17 ಓವರ್‌ ಗಳಲ್ಲಿ 106 ರನ್‌ ಗೆ ಗಂಟುಮೂಟೆ ಕಟ್ಟಿತು.

ಸ್ಪಿನ್ನರ್‌ ದೀಪ್ತಿ ಶರ್ಮ 4 ಓವರ್‌ ಗಳಲ್ಲಿ ಕೇವಲ 10 ರನ್‌ ನೀಡಿ 5 ವಿಕೆಟ್‌ ಕಬಳಿಸುವ ಮೂಲಕ ಪಂದ್ಯಶ್ರೇಷ್ಠರಾಗಿ ಆಯ್ಕೆಯಾದರು. ದೀಪ್ತಿ ದಾಳಿಗೆ ತತ್ತರಿಸಿದ ಪಾಕಿಸ್ತಾನದ ಆಟಗಾರ್ತಿಯರು ನೆಲೆ ಕಂಡುಕೊಳ್ಳುವ ಹಂತದಲ್ಲೇ ವಿಕೆಟ್‌ ಕೈ ಚೆಲ್ಲಿದರು. ಶ್ರೀಚರಣಿ 3 ವಿಕೆಟ್‌ ಪಡೆದು ಗಮನ ಸೆಳೆದರು.

ಪಾಕಿಸ್ತಾನ ಪರ ಆರಂಭಿಕ ಆಟಗಾರ್ತಿ ಮುನೆಬಾ ಅಲಿ 35 ಎಸೆತಗಳಲ್ಲಿ 5 ಬೌಂಡರಿ ನೆರವಿನಿಂದ 41 ರನ್‌ ಬಾರಿಸಿ ಏಕಾಂಗಿ ಹೋರಾಟ ನಡೆಸಿದರೂ ಮತ್ತೊಂದು ಕಡೆ ಸತತ ವಿಕೆಟ್‌ ಉರುಳುತ್ತಿದ್ದರಿಂದ ಅಸಹಾಯಕರಾಗಿ ನಿರ್ಗಮಿಸಿದರು. ಕೆಳ ಹಂತದಲ್ಲಿ ಆಲಿಯಾ ರಿಯಾಜ್‌ 18 ರನ್‌ ಬಾರಿಸಿ ಸ್ವಲ್ಪ ಹೋರಾಟ ತೋರಿ ತಂಡದ ಮೊತ್ತ 100ರ ಗಡಿ ದಾಟಿಸಿದರು.

ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ ಭಾರತ ತಂಡದ ಪರ ಸ್ಮೃತಿ ಮಂದಾನ ಅರ್ಧಶತಕ ಬಾರಿಸಿ ಮಿಂಚಿದರು. ಭಾರತ 18 ರನ್‌ ಗೆ 2 ವಿಕೆಟ್‌ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದಾಗ ಜೊತೆಯಾದ ಸ್ಮೃತಿ ಮಂದಾನ ಮತ್ತು ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ 91 ರನ್‌ ಜೊತೆಯಾಟ ನಿಭಾಯಿಸಿದರು.

ಸ್ಮೃತಿ ಮಂದಾನ 44 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್‌ ಸಹಾಯದಿಂದ 68 ರನ್‌ ಬಾರಿಸಿ ಅರ್ಧಶತಕ ಬಾರಿಸಿದ ಏಕೈಕ ಆಟಗಾರ್ತಿ ಎನಿಸಿಕೊಂಡರು. ಹರ್ಮನ್‌ ಪ್ರೀತ್‌ ಕೌರ್‌ 35 ಎಸೆತಗಳಲ್ಲಿ 4 ಬೌಂಡರಿ ಒಳಗೊಂಡ 36 ರನ್‌ ಬಾರಿಸಿದರೆ, ರಿಚಾ ಘೋಷ್‌ 17 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್‌ ನೊಂದಿಗೆ 34 ರನ್‌ ಚಚ್ಚಿ ತಂಡದ ಮೊತ್ತ ಉಬ್ಬಿಸಿದರು.

ಪಾಕಿಸ್ತಾನ ಪರ ಸಾದಿಯಾ ಇಕ್ಬಾಲ್‌, ಫತಿಮಾ ಸಾನಾ ತಲಾ 2 ವಿಕೆಟ್‌ ಪಡೆದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments