Monday, June 22, 2026
Google search engine
Homeರಾಜಕೀಯಪಕ್ಷದ್ರೋಹಿಗಳನ್ನು ಪತ್ತೆ ಹಚ್ಚಲು ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದ ಬಿಜೆಪಿ

ಪಕ್ಷದ್ರೋಹಿಗಳನ್ನು ಪತ್ತೆ ಹಚ್ಚಲು ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದ ಬಿಜೆಪಿ

ವಿಧಾನಪರಿಷತ್‌ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ ಶಾಸಕರನ್ನು ಪತ್ತೆ ಹಚ್ಚಲು ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಲು ಬಿಜೆಪಿ ಚಿಂತನೆ ನಡೆಸಿದೆ.

ಬೆಂಗಳೂರಿನಲ್ಲಿ ಭಾನುವಾರ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಈ ವಾರದಲ್ಲೇ ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಲು ಆರ್.ಅಶೋಕ್ ಅವರ ಜೊತೆ ಚರ್ಚೆ ಮಾಡುತ್ತೇನೆ.‌ ಅಡ್ಡಮತದಾನ ಯಾರು ಹಾಕಿದ್ದಾರೆ ಅಂತ ಶ್ರೀ ಕ್ಷೇತ್ರದಲ್ಲೇ ಗೊತ್ತಾಗಲಿ ಎಂದರು.

ಈ ವಾರದಲ್ಲೇ ಸಭೆ ಕರೆದು ತಾಯಿಗೆ ದ್ರೋಹ ಮಾಡಿದ ಶಾಸಕರು ಯಾರು ಅಂತ ಪತ್ತೆ ಮಾಡುತ್ತೇವೆ. ಶ್ರೀ ಕ್ಷೇತ್ರದಲ್ಲೇ ಗೊತ್ತಾಗಲಿ. ನಾನು ಸೇರಿ ಎಲ್ಲರ ಮೇಲೆಯೂ ಅನುಮಾನ ಬರುವಂತಾಗಿದೆ. ಇದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ.‌ ಜನರ ಆಶೀರ್ವಾದದಿಂದ ಗೆದ್ದವರು ಅವರು. ಆರ್.ಅಶೋಕ್ ಜೊತೆ ಚರ್ಚೆ ಮಾಡಿದ್ದೇನೆ ಎಂದರು.

ನಮ್ಮಿಂದ ನಾಲ್ಕು ಅಡ್ಡಮತದಾನ ಆಗಿದೆ ಅನ್ನುವ ಚರ್ಚೆ ಮಾಧ್ಯಮಗಳಲ್ಲಿ ನಡೆಯುತ್ತಿದೆ. ನಮ್ಮ ಕಾರ್ಯಕರ್ತರು ಶಾಸಕರ ನಡವಳಿಕೆ ಬಗ್ಗೆ ಬೇಸರಪಟ್ಟಿದ್ದಾರೆ. ಎಲ್ಲ 63 ಶಾಸಕರ ಮೇಲೂ ಅನುಮಾನಪಡುವಂತಾಗಿದೆ. ನಿನ್ನೆ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದೇನೆ. ದೆಹಲಿಗೆ ನಾನು, ಆರ್.ಅಶೋಕ್ ಹೋಗುತ್ತೇವೆ ಎಂದು ವಿಜಯೇಂದ್ರ ತಿಳಿಸಿದರು.

ರಾಷ್ಟ್ರೀಯ ಪಕ್ಷದಿಂದ ಗೆದ್ದಿದ್ದೇವೆ. ಮೋದಿಯವರ ಮುಖ ನೋಡಿ ವೋಟು ಕೊಟ್ಟಿದ್ದಾರೆ. ಕಾರ್ಯಕರ್ತರಿಗೆ ನೋವಾಗಿದೆ.‌ ಕುಮಾರಸ್ವಾಮಿ ಅವರು ಏನು ಹೇಳಿದ್ದಾರೆ ಅಂತ ಗೊತ್ತಿಲ್ಲ. ಯಾರೂ ಪುಕ್ಸಟ್ಟೆ ಅಂತೂ ಅಡ್ಡಮತದಾನ ಹಾಕಿರಲ್ಲ ಎಂದು ಪ್ರತಿಕ್ರಿಯಿಸಿದರು.

ಪಕ್ಷದಲ್ಲಿ ಬದಲಾವಣೆ, ಬಸನಗೌಡ ಪಾಟೀಲ್​​ ಯತ್ನಾಳ್​ಗೆ ವಿಪಕ್ಷ ನಾಯಕನ ಸ್ಥಾನಕ್ಕೆ ಕುಮಾರ್ ಬಂಗಾರಪ್ಪ ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಯಾರಿಗೆ ಏನು ಉತ್ತರ ಕೊಡಬೇಕೋ ಕೊಡುತ್ತೇನೆ. ಯಾರು ಪುಕ್ಸಟ್ಟೆ ಹೇಳಿಕೆ ಕೊಡುತ್ತಿದ್ದಾರೋ, ಅವರು ಅವರವರ ಜಿಲ್ಲಾ ಪಂಚಾಯತಿ ಚುನಾವಣೆಗೆ ಬರಲಿ. ಅದರಲ್ಲಿ ನಿಂತು ಗೆದ್ದು ತೋರಿಸಲಿ. ಆ ಮೇಲೆ ನಾನು ಮಾತನಾಡುತ್ತೇನೆ, ವಿಪಕ್ಷ ನಾಯಕನ ಸ್ಥಾನ ಕೇಳುವುದು ಆಮೇಲಿನ ಮಾತು ಎಂದು ವಿಜಯೇಂದ್ರ ತಿರುಗೇಟು ನೀಡಿದರು.

ಇತ್ತೀಚೆಗೆ ನಡೆದ ಮೇಲ್ಮನೆ ಚುನಾವಣೆ ಫಲಿತಾಂಶದಲ್ಲಿ ದೋಸ್ತಿ ಪಕ್ಷಗಳಿಗೆ ಅಚ್ಚರಿಯ ಆಘಾತ ಎದುರಾಗಿತ್ತು. ಕಾಂಗ್ರೆಸ್ ತನ್ನ ರಾಜಕೀಯ ರಣತಂತ್ರ ಪ್ರದರ್ಶಿಸಿ ಎಲ್ಲ ಐದು ಅಭ್ಯರ್ಥಿಗಳನ್ನೂ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಬಿಜೆಪಿ ಹಾಗೂ ಜೆಡಿಎಸ್​ ಶಾಸಕರ ಅಡ್ಡಮತದಾನದ ಪರಿಣಾಮ ಕಾಂಗ್ರೆಸ್​ ಗೆಲುವು ಸುಲಭವಾಗಿತ್ತು.

ಕಾಂಗ್ರೆಸ್ ಪರ ಒಟ್ಟು 11 ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಅಡ್ಡಮತ ಚಲಾಯಿಸಿದ್ದರು. ಬಿಜೆಪಿಯ ಮೂವರು ಶಾಸಕರು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕಾರ್ತಿಕ್ ಪರ ಮತ ಚಲಾಯಿಸಿದ್ದರು. ಅಲ್ಲದೆ,​ ಅಭ್ಯರ್ಥಿ ಲಿಂಗರಾಜ ಪಾಟೀಲ್​ಗೆ ಪಕ್ಷವು ಸೂಚಿಸಲ್ಪಟ್ಟ ಮತಗಳು ಬಂದಿರಲಿಲ್ಲ. ತನ್ನ ಎರಡೂ ಅಭ್ಯರ್ಥಿಗಳಿಗೆ ತಲಾ 30 ಮತಗಳನ್ನು ಹಾಕುವಂತೆ ಬಿಜೆಪಿ ತನ್ನ ಶಾಸಕರಿಗೆ ಸೂಚನೆ ನೀಡಿತ್ತು. ಆದರೆ ರಘು ಕೌಟಿಲ್ಯಗೆ 29 ಮತಗಳು ಬಿದ್ದಿದ್ದು, ಒಂದು ಮತ ಅಸಿಂಧುವಾಗಿದೆ.‌ ಇತ್ತ ಲಿಂಗರಾಜ ಪಾಟೀಲ್​ಗೆ 27 ಮತಗಳು ಮಾತ್ರ ಲಭಿಸಿವೆ. ಲಿಂಗರಾಜ ಪಾಟೀಲ್​ಗೆ ಮತ ಹಾಕಬೇಕಾದ ಮೂವರು ಬಿಜೆಪಿ ಶಾಸಕರು ಕಾಂಗ್ರೆಸ್ ಅಭ್ಯರ್ಥಿ ಪರ ಅಡ್ಡಮತದಾನ ಮಾಡಿ, ರಾಜ್ಯ ನಾಯಕರಿಗೆ ದೊಡ್ಡ ಆಘಾತ ನೀಡಿದ್ದರು.

ಜೆಡಿಎಸ್ ಅಭ್ಯರ್ಥಿ ಗೋವಿಂದ ರಾಜು ಅವರಿಗೆ ಕೇವಲ 14 ಮತಗಳು ಮಾತ್ರ ಲಭಿಸಿದ್ದು, ಹೀನಾಯ ಸೋಲು ಕಂಡಿದ್ದರು. ಏಳನೇ ಸ್ಥಾನಕ್ಕೆ ಕಾಂಗ್ರೆಸ್​​ಗೆ ಕೌಂಟರ್ ಕೊಟ್ಟು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ 18 ಶಾಸಕರ ಬಲದ ಜೆಡಿಎಸ್​​ಗೆ ಆಘಾತವಾಗಿತ್ತು. ಕಾಂಗ್ರೆಸ್​ ಅಭ್ಯರ್ಥಿಗಳಿಗೆ ಒಟ್ಟು 151 ಮತಗಳು ಲಭಿಸಿದ್ದವು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments