ಬ್ಲೂ ಫಿಲಂ ನೋಡಿ ಅದರಿಂದ ಪ್ರಭಾವಿತನಾದ 12 ವರ್ಷದ ಬಾಲಕ 9 ತಿಂಗಳ ಹೆಣ್ಣು ಮಗುವನ್ನು ಕಿಡ್ನಾಪ್ ಮಾಡಿ ಅತ್ಯಾಚಾರ ಎಸಗಿದ ನಂಬಲಾಗದ ಘಟನೆ ಉತ್ತಪ್ರದೇಶದ ಗೋರಖ್ ಪುರದಲ್ಲಿ ನಡೆದಿದೆ.
ತಾಯಿಯ ಪಕ್ಕದಲ್ಲಿ ಮಲಗಿದ್ದ 9 ತಿಂಗಳ ಹೆಣ್ಣು ಮಗುವನ್ನು ರಾತ್ರಿ 2 ಗಂಟೆ ಹೊತ್ತಿನಲ್ಲಿ 12 ವರ್ಷದ ಅಪ್ರಾಪ್ತ ಬಾಲಕ ಅಪಹರಿಸಿ ಅತ್ಯಾಚಾರ ಎಸಗಿದ್ದಾನೆ. ಕಾಣೆಯಾದ ಮಗು ಹುಡುಕಿದಾಗ ಶೆಡ್ ನಲ್ಲಿ ರಕ್ತಸಿಕ್ತವಾಗಿದ್ದ ಹಸುಳೆ ಪತ್ತೆಯಾಗಿದೆ.
ಶನಿವಾರ ಮುಂಜಾನೆ 2 ಗಂಟೆ ಸುಮಾರಿಗೆ 9 ತಿಂಗಳ ಹೆಣ್ಣು ಮಗು ಕಾಣೆಯಾಗಿದೆ. ಇದರಿಂದ ಆತಂಕಗೊಂಡ ಕುಟುಂಬದವರು ಇಡೀ ಗ್ರಾಮ ಮತ್ತು ಹತ್ತಿರದ ಜಮೀನುಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಶನಿವಾರ ಬೆಳಿಗ್ಗೆ ಮನೆಯಿಂದ ಸುಮಾರು 500 ಮೀಟರ್ ದೂರದಲ್ಲಿರುವ ಜಮೀನಿನ ಟಿನ್ ಶೆಡ್ ಬಳಿ ಮಗು ತೀವ್ರ ರಕ್ತಸ್ರಾವದಿಂದ ಬಳಲಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ತಕ್ಷಣ ಕುಟುಂಬಸ್ಥರು ಮಗುವನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆದರೆ, ಮಗುವಿನ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಅಲ್ಲಿಂದ ಬಿಆರ್‌ಡಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ವೈದ್ಯಕೀಯ ತಪಾಸಣೆಯಲ್ಲಿ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ. ಮಗುವಿನ ಸ್ಥಿತಿ ಸದ್ಯ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗುವಿನ ಪೋಷಕರು ಮತ್ತು ಅಜ್ಜ-ಅಜ್ಜಿ ಸೇರಿದಂತೆ ಕುಟುಂಬದ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಮೂರು ದಿನಗಳ ಹಿಂದಷ್ಟೇ ಚಂಡೀಗಢದಿಂದ ಬಂದಿದ್ದ 12 ವರ್ಷದ ಬಾಲಕನ ಮೇಲೆ ಪೊಲೀಸರಿಗೆ ಅನುಮಾನ ಬಂದಿದೆ. ಆತನನ್ನು ವಶಕ್ಕೆ ಪಡೆದ ತನಿಖಾಧಿಕಾರಿಗಳು ವಿಚಾರಣೆ ನಡೆಸಿದಾಗ, ಆತ ಮೊದಲು ತಪ್ಪು ತಪ್ಪಾಗಿ ಉತ್ತರಿಸಿದ್ದಾನೆ. ನಂತರ ತಾನೇ ಅಪರಾಧ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮದ್ಯ ಸೇವಿಸಿ, ನೀಲಿಚಿತ್ರ ವೀಕ್ಷಿಸಿದ್ದ ಆರೋಪಿ ಬಾಲಕ
ಅತ್ಯಾಚಾರ ನಡೆಸುವ ರಾತ್ರಿ ತಾನು ಮದ್ಯ ಸೇವಿಸಿದ್ದೆ. ಆ ಬಳಿಕ ಮೊಬೈಲ್‌ನಲ್ಲಿ ನೀಲಿಚಿತ್ರಗಳನ್ನು ವೀಕ್ಷಿಸಿದ್ದೆ. ಇದರಿಂದ ಪ್ರೇರಿತನಾಗಿ ಮಲಗಿದ್ದ ಮಗುವನ್ನು ಅಪಹರಿಸಿ ಅತ್ಯಾಚಾರ ನಡೆಸಿದ್ದಾಗಿ ಬಾಲಕ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
ತನಿಖಾಧಿಕಾರಿಗಳು ಆರೋಪಿಯ ಮೊಬೈಲ್ ಪರಿಶೀಲಿಸಿದಾಗ, ಅದರಲ್ಲಿ 50ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಮತ್ತು 100ಕ್ಕೂ ಹೆಚ್ಚು ನೀಲಿಚಿತ್ರಗಳ ವೆಬ್‌ಸೈಟ್‌ಗಳನ್ನು ಹುಡುಕಾಡಿರುವುದು ಪತ್ತೆಯಾಗಿದೆ. ದೌರ್ಜನ್ಯಕ್ಕೆ ಒಳಗಾದ ಮಗುವಿಗೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
16 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್ ಮಾಡಿದ ಸೀನಿಯರ್ ಸಿಟಿಜನ್ಸ್!: ಇನ್ನೊಂದು ಪ್ರಕರಣದಲ್ಲಿ 16 ವರ್ಷದ ಬಾಲಕಿಯ ಮೇಲೆ 60 ವರ್ಷ ಮೇಲ್ಪಟ್ಟ ಇಬ್ಬರು ಆರೋಪಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ಶನಿವಾರ ರಾತ್ರಿ ನಡೆದಿದೆ.



