Tuesday, June 23, 2026
Google search engine
Homeರಾಜ್ಯತುಂಗಭದ್ರಾ ಅಣೆಕಟ್ಟಿನ ಗೇಟ್ ಅಳವಡಿಕೆ ಯಶಸ್ವಿ: ಉದ್ಘಾಟನಾ ಕಾರ್ಯಕ್ರಮಕ್ಕೆ ಆಂಧ್ರ ಸಿಎಂಗೆ ಅಧಿಕೃತ ಆಹ್ವಾನ

ತುಂಗಭದ್ರಾ ಅಣೆಕಟ್ಟಿನ ಗೇಟ್ ಅಳವಡಿಕೆ ಯಶಸ್ವಿ: ಉದ್ಘಾಟನಾ ಕಾರ್ಯಕ್ರಮಕ್ಕೆ ಆಂಧ್ರ ಸಿಎಂಗೆ ಅಧಿಕೃತ ಆಹ್ವಾನ

ಬೆಂಗಳೂರು: ದಾಖಲೆಯ ಸಮಯದಲ್ಲಿ ತುಂಗಭದ್ರಾ ಅಣೆಕಟ್ಟಿನ ಎಲ್ಲಾ 33 ಗೇಟ್‌ಗಳನ್ನು ಯಶಸ್ವಿಯಾಗಿ ಬದಲಾಯಿಸಿದ ಹಿನ್ನೆಲೆಯಲ್ಲಿ ಆಯೋಜಿಸಿರುವ ಐತಿಹಾಸಿಕ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹಾಗೂ ಅಲ್ಲಿನ ನೀರಾವರಿ ಸಚಿವ ನಿಮ್ಮಲ ರಾಮ ನಾಯ್ಡು ಅವರನ್ನು ಕರ್ನಾಟಕದ ಉನ್ನತ ಮಟ್ಟದ ನಿಯೋಗವು ಅಧಿಕೃತವಾಗಿ ಆಹ್ವಾನಿಸಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿರ್ದೇಶನದ ಮೇರೆಗೆ, ರಾಜ್ಯದ ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯರಾದ ಎನ್.ಎಸ್. ಬೋಸರಾಜು ನೇತೃತ್ವದ ನಿಯೋಗವು ಆಂಧ್ರಪ್ರದೇಶದ ನಾಯಕರನ್ನು ಖುದ್ದಾಗಿ ಭೇಟಿಯಾಗಿ ಆಹ್ವಾನ ಪತ್ರಿಕೆ ಹಸ್ತಾಂತರಿಸಿತು. ಈ ನಿಯೋಗದಲ್ಲಿ ಹಿರಿಯ ಶಾಸಕರಾದ  ಬಸವರಾಜ ರಾಯರೆಡ್ಡಿ ಮತ್ತು ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಸಹ ಉಪಸ್ಥಿತರಿದ್ದರು. ಈ ಐತಿಹಾಸಿಕ ಆಚರಣೆಯಲ್ಲಿ ಪಾಲ್ಗೊಳ್ಳುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  ಆಂಧ್ರ ಸಿಎಂಗೆ ಪತ್ರದ ಮೂಲಕ ವೈಯಕ್ತಿಕವಾಗಿ ವಿನಂತಿಸಿದ್ದಾರೆ.

ತುಂಗಭದ್ರಾ ಅಣೆಕಟ್ಟಿನ ಸುರಕ್ಷತೆ ಮತ್ತು ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ್ದ ಈ ಗೇಟ್ ಅಳವಡಿಕೆ ಕಾರ್ಯವು ಇಂಜಿನಿಯರಿಂಗ್ ಹಾಗೂ ಆಡಳಿತಾತ್ಮಕ ಸಾಧನೆಯ ಮೈಲುಗಲ್ಲಾಗಿದೆ. ಈ ಯಶಸ್ಸಿನ ಸಂಭ್ರಮಾಚರಣೆಯನ್ನು ಇದೇ ಜೂನ್ 25, 2026 ರಂದು ನೇರವಾಗಿ ತುಂಗಭದ್ರಾ ಅಣೆಕಟ್ಟಿನ ಮೇಲೆಯೇ ಆಯೋಜಿಸಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರವು ಆಯೋಜಿಸುತ್ತಿರುವ ಈ ಬೃಹತ್ ಕಾರ್ಯಕ್ರಮದಲ್ಲಿ ಕೇಂದ್ರ ಜಲಶಕ್ತಿ ಸಚಿವ ಶ್ರೀ ಸಿ.ಆರ್. ಪಾಟೀಲ್ ಹಾಗೂ ಇತರ ಪಾಲುದಾರ ರಾಜ್ಯಗಳ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ದಾಖಲೆಯ ಸಮಯದಲ್ಲಿ 33 ಹೊಸ ಗೇಟ್‌ಗಳ ಉನ್ನತೀಕರಣವು ಮಹತ್ವದ ಕಾರ್ಯವಾಗಿದ್ದು, ಮುಂದಿನ ಹಲವು ದಶಕಗಳ ಕಾಲ ಅಣೆಕಟ್ಟಿನ ಸುರಕ್ಷಿತ ಕಾರ್ಯಾಚರಣೆಗೆ ಅನುವು ಮಾಡಿಕೊಡಲಿದೆ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ನಾವು ಆಂಧ್ರಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರನ್ನು ಈ ಮಹತ್ವದ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಆಹ್ವಾನಿಸಿದ್ದೇವೆ ಎಂದು ಮಾಜಿ ಸಚಿವ  ಎನ್.ಎಸ್. ಬೋಸರಾಜು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments