Sunday, June 28, 2026
Google search engine
Homeಆರೋಗ್ಯಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ 1000 ಹೃದಯಗಳಿಗೆ ಮರುಜೀವ!

ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ 1000 ಹೃದಯಗಳಿಗೆ ಮರುಜೀವ!

ಮಂಗಳೂರು: ಸರ್ಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ(ಪಿಪಿಪಿ) ಮಾದರಿ ಅತ್ಯಾಧುನಿಕ ಕ್ಯಾಥ್ ಲ್ಯಾಬ್ ಆರಂಭಗೊಂಡಿದ್ದು, ಇಲ್ಲಿನ ವೈದ್ಯರ ತಂಡವು 8 ತಿಂಗಳಲ್ಲಿ 1 ಸಾವಿರ ಹೃದಯಗಳಿಗೆ ಮರು ಜೀವ ನೀಡುವ ಮೂಲಕ ಆರೋಗ್ಯ ಸೇವೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮತ್ತೆ ಮುಂಚೂಣಿ ಸ್ಥಾನದಲ್ಲಿ ಇದೆ.

ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಇಂತಹ ಸೇವೆ ಸಿಕ್ಕಾಗ, ಹೃದಯ ಸಂಬಂಧಿತ ತುರ್ತು ಚಿಕಿತ್ಸೆಗಳಿಗಾಗಿ ಖಾಸಗಿ ಆಸ್ಪತ್ರೆಗಳು ಅಥವಾ ದೂರದ ನಗರಗಳನ್ನು ಅವಲಂಬಿಸುವ ಅನಿವಾರ್ಯತೆ ಬಹುಪಾಲು ಕಡಿಮೆ ಆಗಲಿದೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಸಾಕಷ್ಟು ಆಸ್ಪತ್ರೆಗಳಿಗೆ ರಾಜ್ಯದಲ್ಲಿಯೇ ಮಾದರಿ ಎಂದರೆ ತಪ್ಪಾಗಲಾರದು.

ರಾಜ್ಯದ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾದ ವೆನ್‌ಲಾಕ್ ಆಸ್ಪತ್ರೆಯಲ್ಲಿ ಆರಂಭವಾಗಿರುವ ಈ ಕ್ಯಾಥ್ ಲ್ಯಾಬ್‌ನಲ್ಲಿ ಹೃದಯದ ರಕ್ತನಾಳಗಳ ಸಮಸ್ಯೆಗಳನ್ನು ಪತ್ತೆಹಚ್ಚುವ ಆಂಜಿಯೋಗ್ರಫಿ, ರಕ್ತನಾಳಗಳಲ್ಲಿ ಉಂಟಾಗುವ ತಡೆಗಳನ್ನು ನಿವಾರಿಸುವ ಆಂಜಿಯೋಪ್ಲಾಸ್ಟಿ, ಪೇಸ್‌ಮೇಕರ್ ಅಳವಡಿಕೆ, ಎಲೆಕ್ಟ್ರೋಫಿಸಿಯಾಲಜಿ (ಇಪಿ) ಅಧ್ಯಯನ ಹಾಗೂ ಇತರ ಅತ್ಯಾಧುನಿಕ ಹೃದಯ ಚಿಕಿತ್ಸೆಗಳು ಲಭ್ಯ ಇವೆ.

ಈ ಯೋಜನೆಯಿಂದ ಮಂಗಳೂರು ಮಾತ್ರವಲ್ಲದೆ ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳ ರೋಗಿಗಳು ಪ್ರಯೋಜನ ಪಡೆಯಲಿದ್ದಾರೆ. ವಿಶೇಷವಾಗಿ ಹೃದಯಾಘಾತದಂತಹ ತುರ್ತು ಸಂದರ್ಭಗಳಲ್ಲಿ ಸಕಾಲದಲ್ಲಿ ಚಿಕಿತ್ಸೆ ದೊರಕುವುದರಿಂದ ಜೀವ ಉಳಿಸುವ ಸಾಧ್ಯತೆ ಹೆಚ್ಚಾಗಲಿದೆ.

‘ಗೋಲ್ಡನ್ ಅವರ್’ ಚಿಕಿತ್ಸೆಗೆ ನೆರವು

ಹೃದಯಾಘಾತದಂತಹ ತುರ್ತು ಸಂದರ್ಭಗಳಲ್ಲಿ ಮೊದಲ 90 ನಿಮಿಷಗಳ ಅವಧಿಯನ್ನು ‘ಗೋಲ್ಡನ್ ಅವರ್’ ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ಚಿಕಿತ್ಸೆ ದೊರೆತರೆ ರೋಗಿಯ ಜೀವ ಉಳಿಯುವ ಸಾಧ್ಯತೆ ಬಹಳ ಹೆಚ್ಚಿರುತ್ತದೆ. ಹೊಸ ಕ್ಯಾಥ್ ಲ್ಯಾಬ್ ಮೂಲಕ ಎಸ್ಟಿ-ಎಲಿವೇಷನ್ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ಸ್ಟೆ ರೀತಿಯ ತೀವ್ರ ಹೃದಯಾಘಾತಕ್ಕೆ ತ್ವರಿತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿದ್ದು, ರೋಗಿಗಳ ಚೇತರಿಕೆ ಪ್ರಮಾಣವೂ ಹೆಚ್ಚಾಗಲಿದೆ ಎಂದು ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಶಿವಪ್ರಕಾಶ್ ತಿಳಿಸಿದರು. .

ಬಾಕ್ಸ್

ಬಿಪಿಎಲ್ ಗೆ ಉಚಿತ ಚಿಕಿತ್ಸೆ: ಡಾ. ಶಿವಪ್ರಕಾಶ್

ಪಿಪಿಪಿ ಮಾದರಿಯ ಈ ಯೋಜನೆಯ ಪ್ರಮುಖ ಆಕರ್ಷಣೆ ಎಂದರೆ ಬಡವರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ದೊರಕುವ ವ್ಯವಸ್ಥೆ. ಬಿಪಿಎಲ್ ಕುಟುಂಬಗಳಿಗೆ ಕೊರೊನರಿ ಆಂಜಿಯೋಗ್ರಫಿ ಉಚಿತ ಆಗಿದ್ದು, ಎಪಿಎಲ್ ಕುಟುಂಬಗಳಿಗೆ ಕೇವಲ 7 ಸಾವಿರ ಶುಲ್ಕ ನಿಗದಿಪಡಿಸಲಾಗಿದೆ. ಬಿಪಿಎಲ್ ಕುಟುಂಬಗಳಿಗೆ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ ಉಚಿತ ಆಗಿದ್ದು, ಎಪಿಎಲ್ ಕುಟುಂಬಕ್ಕೆ 1 ಸ್ಟೆಂಟ್ ಅಳವಡಿಕೆಗೆ 42,000 ಮತ್ತು 2 ಸ್ಟೆಂಟ್ ಅಳವಡಿಕೆಗೆ 60,000 ಶುಲ್ಕ ನಿಗದಿ ಮಾಡಿದ್ದು, ಖಾಸಗಿ ಆಸ್ಪತ್ರೆಗಳಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಚಿಕಿತ್ಸೆ ಎಂದು ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಶಿವಪ್ರಕಾಶ್ ತಿಳಿಸಿದರು.

ಕ್ಯಾಥ್ ಲ್ಯಾಬ್ ನಲ್ಲಿವೇ ವೈವಿಧ್ಯ ಚಿಕಿತ್ಸೆ

5 ರಿಂದ 6 ಕೋಟಿ ವೆಚ್ಚದಲ್ಲಿ ಆರಂಭಿಸಿರುವ ಕ್ಯಾಥ್ ಲ್ಯಾಬ್ ಗೆ, ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲಾಗಿದೆ. ಕೊರೊನರಿ ಆಂಜಿಯೋಗ್ರಫಿ (ಸಿಎಜಿ) ಪ್ರೈಮರಿ ಪರ್ಸ್ಯುಟೇನಿಯಸ್ ಕೊರೊನರಿ ಇಂಟರ್‌ವೆನ್ಷನ್ (ಪಿಪಿಸಿಐ), ಆ್ಯಂಜಿಯೋಪ್ಲಾಸ್ಟಿ, ಸೆಂಟ್ರಲ್ ಕೊರೊನರಿ ಇಂಟರ್‌ವೆನ್ಷನ್‌ಗಳು, ಕ್ರಾನಿಕ್ ಟೋಟಲ್ ಒಕ್ಲೂಷನ್ (ಸಿಟಿಒ) ಚಿಕಿತ್ಸೆಗಳು ಸೇರಿದಂತೆ ಹಲವು ಸೌಲಭ್ಯ ಲಭ್ಯ ಇವೆ. ಇದಲ್ಲದೆ ತೀವ್ರ ಹೃದಯಾಘಾತದ ನಿರ್ವಹಣೆ, ತಾತ್ಕಾಲಿಕ ಪೇಸ್‌ಮೇಕರ್ ಅಳವಡಿಕೆ, ಪೆರಿಕಾರ್ಡಿಯೋಸೆಂಟೆಸಿಸ್ ಹಾಗೂ ಇತರೆ ತುರ್ತು ಹೃದಯ ಚಿಕಿತ್ಸೆಗಳನ್ನೂ ಇಲ್ಲಿ ನೀಡಲಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments