Monday, July 13, 2026
Google search engine
Homeರಾಜ್ಯವೀರಶೈವ-ಲಿಂಗಾಯತರು ಒಂದೇ ನಾಣ್ಯದ ಎರಡು ಮುಖ: ಈಶ್ವರ ಖಂಡ್ರೆ

ವೀರಶೈವ-ಲಿಂಗಾಯತರು ಒಂದೇ ನಾಣ್ಯದ ಎರಡು ಮುಖ: ಈಶ್ವರ ಖಂಡ್ರೆ

ಬೆಂಗಳೂರು, ಜು.12: ಲಿಂಗಾಯತ-ವೀರಶೈವರನ್ನು ಯಾವುದೇ ಶಕ್ತಿಯಿಂದ ಬೇರೆ ಮಾಡಲು ಸಾಧ್ಯವೇ ಇಲ್ಲ, ನಾವು ಎಂದೆಂದೂ ಒಂದೇ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹಾಗೂ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಬಿ ಖಂಡ್ರೆ ಗಂಟಾಘೋಷವಾಗಿ ಹೇಳಿದ್ದಾರೆ.

ಬೆಂಗಳೂರು ವಿಜಯನಗರದ ಸುಜ್ಞಾನಮಂದಿರದಲ್ಲಿಂದು ನಡೆದ ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿದ ಅವರು, ಕೆಲವರು ಪದೇ ಪದೇ ವೀರಶೈವರೇ ಬೇರೆ, ಲಿಂಗಾಯತರೇ ಬೇರೆ ಎಂದು ಒಡಕು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಸಂಘಟನೆಯಲ್ಲಿ ಬಲವಿದೆ, ವಿಘಟನೆಯಲ್ಲಿ ದೌರ್ಬಲ್ಯವಿದೆ ಎಂಬುದನ್ನು ನಾವು ಅರಿಯಬೇಕು. ಒಡಕು ಮೂಡಿಸುವವರ ವಿರುದ್ಧ ಎಚ್ಚರದಿಂದ ಇರಬೇಕು ಎಂದರು.

ಕೆಲವರು ಸ್ವಾರ್ಥಕ್ಕಾಗಿ ಧರ್ಮ, ಧರ್ಮಗಳ ನಡುವೆ ಒಡಕು ಉಂಟು ಮಾಡುತ್ತಿದ್ದರೆ, ಮತ್ತೆ ಕೆಲವರು ಜಾತಿ ಜಾತಿಗಳ ನಡುವೆ ವೈಮನಸ್ಯ ಹುಟ್ಟು ಹಾಕುವ ಕೆಲಸ ಮಾಡುತ್ತಿದ್ದಾರೆ. ವೀರಶೈವ ಮತ್ತು ಲಿಂಗಾಯತರು ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ನಾವೆಂದೆಂದೂ ಒಂದೇ ಎಂದರು.

ವೀರಶೈವ ಮತ್ತು ಲಿಂಗಾಯತರು ಬೇರೆ ಬೇರೆ ಅಲ್ಲ, ಒಂದೇ ಎಂದು ತುಮಕೂರು ಸಿದ್ದಗಂಗಾಮಠದ ಪರಮಪೂಜ್ಯ ನಡೆದಾಡುವ ದೇವರು ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರೇ ಹೇಳಿದ್ದಾರೆ. ನಮ್ಮ ಸಮಾಜ ಅದನ್ನು ಪಾಲಿಸಬೇಕು ಎಂದರು.

ನಾವು ಉದ್ಯೋಗ ನೀಡುವವರಾಗಬೇಕು-ಈಶ್ವರ ಖಂಡ್ರೆ:

ಈ ಸ್ಪರ್ಧಾತ್ಮಕ ಯುಗದಲ್ಲಿ, ಜ್ಞಾನಾಧಾರಿತ ಸಮಾಜದಲ್ಲಿ ವಿದ್ಯಾವಂತ ಮತ್ತು ಬುದ್ಧಿವಂತರಷ್ಟೇ ಗೆಲ್ಲಲು ಸಾಧ್ಯ. ನಮ್ಮ ಸಮಾಜದ ಯುವಜನರು ಬಾಹ್ಯ ಮೋಹಗಳಿಗೆ ಒಳಗಾಗದೆ ಶ್ರದ್ಧೆಯಿಂದ ಓದಿ, ಉನ್ನತ ಗುರಿ ಇಟ್ಟುಕೊಂಡು ಉದ್ಯಮಪತಿಗಳಾಗಿ ಉದ್ಯೋಗ ನೀಡುವವರಾಗಬೇಕೇ ಹೊರತು, ಉದ್ಯೋಗ ಬೇಡುವವರಾಗಬಾರದು ಎಂದರು.

ಇಂದು ಆಧುನಿಕ ತಂತ್ರಜ್ಞಾನ ಅಗಾಧವಾಗಿ ಬೆಳೆಯುತ್ತಿದೆ. ಕೃತಕ ಬುದ್ಧಿಮತ್ತೆ, ಮಿಷನ್ ಲರ್ನಿಂಗ್ ನಂತಹ ಆವಿಷ್ಕಾರಗಳಿಂದ ಸಾವಿರಾರು ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಹೊಸತನಕ್ಕೆ ಒಗ್ಗಿಕೊಳ್ಳುವ ಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಈಶ್ವರ ಖಂಡ್ರೆ ಸಲಹೆ ನೀಡಿದರು.

ವೀರಶೈವ ಮಠಗಳ ಕೊಡುಗೆ ಅಪಾರ: ಈಶ್ವರ ಖಂಡ್ರೆ

ವೀರಶೈವ-ಲಿಂಗಾಯತ ಮಠಗಳು ಈ ನಾಡಿಗೆ ದೊಡ್ಡ ಕೊಡುಗೆ ಕೊಟ್ಟಿವೆ. ಅನ್ನ, ಅಕ್ಷರ, ಆಶ್ರಯ ಎಂಬ ತ್ರಿವಿಧ ದಾಸೋಹದಿಂದ ಎಲ್ಲ ಜಾತಿ ಧರ್ಮ, ಮತ ಪಂಥದವರಿಗೂ ಗುಣಮಟ್ಟದ ಶಿಕ್ಷಣ ನೀಡಿ ಸಮಾಜದ ಮುಖ್ಯ ವಾಹಿನಿಗೆ ತಂದಿದೆ. ವೀರಶೈವರಾಗಲೀ, ಲಿಂಗಯತರಾಗಲೀ ಎಂದಿಗೂ ಬೇಡಿದವರಲ್ಲ. ಅವರೆಲ್ಲರೂ ನೀಡಿದವರು. ಬಸವಣ್ಣನವರು ಹೇಳಿದ ಕಾಯಕವೇ ಕೈಲಾಸ ಎಂಬ ತತ್ವ ಅನುಷ್ಠಾನದೊಂದಿಗೆ ದುಡಿಯುತ್ತಿದ್ದರು, ದುಡಿದು ಗಳಿಸುತ್ತಿದ್ದರು, ಗಳಿಸಿದ್ದನ್ನು ಉಳಿಸುತ್ತಿದ್ದರು, ಉಳಿಸಿದ್ದನ್ನು ದಾಸೋಹದ ಮೂಲಕ ಸಮಾಜಕ್ಕೆ ನೀಡುತ್ತಿದ್ದರು. ನೀವೆಲ್ಲರೂ ಈ ಸಮಾಜಕ್ಕೆ ಕೊಡುಗೆ ನೀಡುವವರಾಗಬೇಕು ಎಂದರು.

ಶಿವಶರಣರು, ಬಸವಾದಿ ಪ್ರಮಥರು 12ನೇ ಶತಮಾನದಲ್ಲಿಯೇ ಸಮ ಸಮಾಜದ ಕನಸು ಕಂಡಿದ್ದರು. ಸರ್ವರಿಗೂ ಲೇಸನ್ನು ಬಯಸುವ ಸಮಾಜ ಯಾವುದಾದರೂ ಇದ್ದರೆ ಅದು ನಮ್ಮ ವೀರಶೈವ ಲಿಂಗಾಯತ ಸಮಾಜ ಮಾತ್ರ. ಹೀಗಾಗಿ ಇಂದಿನ ಪೀಳಿಗೆ ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ನಮ್ಮ ಸಮುದಾಯ ಐ.ಎ.ಎಸ್. ಐ,ಪಿ.ಎಸ್. ಸೇರಿದಂತೆ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಪಾಸಾಗಿ ಉನ್ನತ ಹುದ್ದೆ ಅಲಂಕರಿಸುವುದು ತುಂಬಾ ಕಡಿಮೆ. ಹೀಗಾಗಿ ನಮ್ಮ ವೀರಶೈವ ಲಿಂಗಾಯಿತ ಸಮುದಾಯದ ನಿವೃತ್ತ ಐ.ಎ.ಎಸ್. ಐ.ಪಿ.ಎಸ್. ಅಧಿಕಾರಿಗಳು, ಕೆ.ಎ.ಎಸ್. ಅಧಿಕಾರಿಗಳು ಮತ್ತು ಉದ್ಯಮಿಗಳು ಸೇರಿ ಒಂದು ಟ್ರಸ್ಟ್ ರಚಿಸಿ ಜಿಲ್ಲೆಗೊಂದು ತರಬೇತಿ ಕೇಂದ್ರ ತೆರೆದು ಸಮಾಜದ ಆಕಾಂಕ್ಷಿಗಳಿಗೆ ತರಬೇತಿ ನೀಡಬೇಕು ಎಂದರು.
ಸರ್ವಶ್ರೇಷ್ಠ ಎಂಜಿನಿಯರ್ ಯಾರು ಎಂದರೆ ಸರ್.ಎಂ.ವಿಶ್ವೇಶ್ವರಯ್ಯನವರ ಹೆಸರು ಹೇಳುತ್ತೇವೆ. ನಿಮ್ಮ ತಂದೆ, ತಾಯಿ, ಅಣ್ಣ, ತಮ್ಮ ಎಂಜಿನಿಯರ್ ಆಗಿದ್ದರೂ ನೀವು ಅವರ ಹೆಸರು ಹೇಳಲ್ಲ. ಈ ಜಗತ್ತು ಸಾಧಕರನ್ನು ಮಾತ್ರ ಸ್ಮರಿಸುತ್ತದೆ. ಹೀಗಾಗಿ ನೀವೆಲ್ಲರೂ ಸಾಧಕರಾಗಬೇಕು ಎಂದರು.

ಯುವಶಕ್ತಿ ಅಣುಶಕ್ತಿಗಿಂತಲೂ ಮಿಗಿಲಾದ್ದು, ಯುವಶಕ್ತಿಗೆ ಸೂಕ್ತ ಮಾರ್ಗದರ್ಶನ ನೀಡಿದರೆ ಅಸಾಧ್ಯವಾದ್ದನ್ನೂ ಸಾಧಿಸಿ ತೋರಿಸುತ್ತಾರೆ. ಹೀಗಾಗಿ ಪಾಲಕರು ತಮ್ಮ ಮಕ್ಕಳು ದುಶ್ಚಟ, ದುರ್ಗುಣಗಳ ದಾಸರಾಗುತ್ತಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ವಿದ್ಯೆಯ ಜೊತೆಗೆ ಬುದ್ಧಿ ಕಲಿಸುವ ಕಾರ್ಯವನ್ನು ಗುರುಗಳು ಮಾಡಬೇಕು ಎಂದರು.

ಪ್ರತಿಭಾಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ 800 ವಿದ್ಯಾರ್ಥಿಗಳಿಗೆ 1000ರೂ. ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಡಾ. ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಹಾಗೂ ವಿಭೂತಿಪುರ ಮಠದ ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಸಮಾರಂಭದಲ್ಲಿ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ, ಬೆಂಗಳೂರು ಘಟಕದ ಅಧ್ಯಕ್ಷ ಎಸ್. ಗುರುಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಮುಕ್ತಾಂಬಾ, ಕಲ್ಬುರ್ಗಿ ಮಾಜಿ ಮೇಯರ್ ಶರಣು ಮೋದಿ ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments