ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆಯಿಂದ ಉದ್ಭವಿಸಿರುವ ಬರ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರ ಅಧಿಕಾರಿಗಳ ತಂಡ ಕಳುಹಿಸಿಕೊಡುವಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಂಗಳವಾರ ಪತ್ರ ಬರೆದಿರುವ ಸಿಎಂ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಭೀಕರ ಬರಗಾಲ ಪರಿಸ್ಥಿತಿ ಇದೆ. ರಾಜ್ಯ ಸರ್ಕಾರ ಪರಿಸ್ಥಿತಿ ನಿಭಾಯಿಸಲು ಗಂಭೀರವಾಗಿ ಪ್ರಯತ್ನ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಅಧ್ಯಯನಕ್ಕೆ ತಂಡವನ್ನು ಕಳುಹಿಸಿಕೊಡುವಂತೆ ಮನವಿ ಮಾಡಿದ್ದಾರೆ.
ಬರ ಅಧ್ಯಯನ ತಂಡದ ಜೊತೆ ಕೇಂದ್ರ ಬರ ಪರಿಹಾರ ಘೋಷಿಸಬೇಕು ಹಾಗೂ ಬರ ಪರಿಸ್ತಿತಿ ನಿರ್ವಹಣೆಗೆ ಅಗತ್ಯ ನೆರವು ನೀಡುವಂತೆ ಪ್ರಧಾನಿಗೆ ಸಿಎಂ ಡಿಕೆ ಶಿವಕುಮಾರ್ ಪತ್ರದಲ್ಲಿ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಮಳೆಯ ಕೊರತೆ ರೈತ ಸಮುದಾಯವನ್ನು ಆತಂಕಕ್ಕೆ ತಳ್ಳಿದ್ದು, ಬರಗಾಲದ ಭೀತಿ ಎದುರಾಗಿದೆ. ಎಲ್ ನಿನೊ ಪರಿಣಾಮದಿಂದಾಗಿ ಮುಂಗಾರು ಮಂದಗತಿಯಲ್ಲಿ ಸಾಗುತ್ತಿದ್ದು,ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಅಭಾವ ಉಂಟಾಗಿದೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.
ಜುಲೈ 11ರ ಅಂಕಿ-ಅಂಶದ ಪ್ರಕಾರ, ರಾಜ್ಯದಲ್ಲಿ ವಾಡಿಕೆ ಮಳೆ 292 ಮಿ.ಮೀ ಆಗಬೇಕಿತ್ತು. ಆದರೆ, ಇಂದಿನವರೆಗೆ ಕೇವಲ 203 ಮಿ.ಮೀ ಮಳೆ ಸುರಿದಿದೆ. ಹಾಗಾಗಿ ಶೇ. 30ರಷ್ಟು ಮಳೆಯ ಕೊರತೆಯಾಗಿದೆ. ರಾಜ್ಯದ 31 ಜಿಲ್ಲೆಗಳ ಪೈಕಿ 18 ಜಿಲ್ಲೆಗಳು ಮತ್ತು 240 ತಾಲೂಕುಗಳ ಪೈಕಿ 141 ತಾಲೂಕುಗಳಲ್ಲಿ ಮಳೆ ಕೊರತೆ ದಾಖಲಾಗಿದೆ. ವಿಶೇಷವಾಗಿ ಕಾವೇರಿ ಮತ್ತು ತುಂಗಾ-ಭದ್ರಾ ನದಿಗಳ ಜಲಾನಯನ ಪ್ರದೇಶವಾದ ಮಲೆನಾಡು ಭಾಗದಲ್ಲಿ ಅತಿ ಹೆಚ್ಚು ಅಂದರೆ ಶೇ. 34ರಷ್ಟು ಮಳೆ ಕೊರತೆ ಕಂಡುಬಂದಿದೆ ಎಂದು ಹೇಳಿದ್ದಾರೆ.
ಜಲಾಶಯಗಳಲ್ಲಿಯೂ ನೀರಿನ ಮಟ್ಟ ತೀವ್ರ ಕುಸಿತ ಕಂಡಿದೆ. 14 ಪ್ರಮುಖ ಜಲಾಶಯಗಳ ಒಟ್ಟು ಸಾಮರ್ಥ್ಯ 895.65 ಟಿಎಂಸಿ ಇದ್ದರೂ, ಪ್ರಸ್ತುತ ಕೇವಲ 303 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಹೀಗಾಗಿ ರಾಜ್ಯ ಸರ್ಕಾರವು ಲಭ್ಯವಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಆದ್ಯತೆ ನೀಡಲು ನಿರ್ಧರಿಸಿದೆ ಎಂದು ವಿವರಿಸಿದ್ದಾರೆ.
ಕೃಷಿ ಚಟುವಟಿಕೆಗಳ ಮೇಲೂ ಭಾರಿ ಪರಿಣಾಮ ಬೀರಿದ್ದು, ಈವರೆಗೆ ಕೇವಲ ಶೇ. 34ರಷ್ಟು (28.36 ಲಕ್ಷ ಹೆಕ್ಟೇರ್) ಮಾತ್ರ ಖಾರಿಫ್ ಬಿತ್ತನೆ ನಡೆದಿದೆ. ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡಿರುವ ರಾಜ್ಯ ಸರ್ಕಾರ, ಕೇಂದ್ರ ತಂಡವೊಂದನ್ನು ರಾಜ್ಯಕ್ಕೆ ಕಳುಹಿಸಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸುವಂತೆ ಮತ್ತು ತುರ್ತು ನೆರವು ನೀಡುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.



