Saturday, July 18, 2026
Google search engine
Homeಕ್ರೀಡೆಗಂಭೀರ್‌ ರಾಜೀನಾಮೆ? ಭಾರತ ಕ್ರಿಕೆಟ್‌ ನ ಗಂಭೀರ ಸಮಸ್ಯೆಗೆ ಮುಕ್ತಿ?

ಗಂಭೀರ್‌ ರಾಜೀನಾಮೆ? ಭಾರತ ಕ್ರಿಕೆಟ್‌ ನ ಗಂಭೀರ ಸಮಸ್ಯೆಗೆ ಮುಕ್ತಿ?

ಸುಮಾರು ಒಂದೂವರೆ ವರ್ಷದಿಂದ ಭಾರತ ಕ್ರಿಕೆಟ್‌ ತಂಡಕ್ಕೆ ಹಿಡಿದಿದ್ದ ಶನಿ ಕೊನೆಗೂ ತೊಲಗುವ ಸಮಯ ಬಂದಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಭಾರತ ತಂಡ ಮತ್ತೊಮ್ಮೆ ಗೆಲುವಿನ ಹಾದಿ ಹಿಡಿಯುವ ಭರವಸೆ ಮೂಡಿದೆ. ಇದರಿಂದ ಕ್ರಿಕೆಟ್‌ ನಿಂದ ದೂರ ಸರಿಯುತ್ತಿರುವ ಅಭಿಮಾನಿಗಳು ಮತ್ತೊಮ್ಮೆ ಕ್ರಿಕೆಟ್‌ ಮೈದಾನದತ್ತ ಬರುವಂತಾಗಿದೆ. ಅಲ್ಲದೇ ದೇಶದಲ್ಲಿ ಕ್ರಿಕೆಟ್‌ ಮತ್ತೊಮ್ಮೆ ತನ್ನ ಗತವೈಭವಕ್ಕೆ ಮರಳುವ ಮುನ್ಸೂಚನೆ ಲಭಿಸಿದೆ.

ತವರಿನ ಹುಲಿ ಎಂದೇ ಖ್ಯಾತಿ ಪಡೆದಿದ್ದ ಭಾರತ ಕ್ರಿಕೆಟ್‌ ತಂಡ ಇತ್ತೀಚೆಗೆ ತವರಿನಲ್ಲೂ ಸತತ ಸೋಲು ಅನುಭವಿಸುತ್ತಿದೆ. ಬಂದ ತಂಡಗಳೆಲ್ಲಾ ನಮ್ಮನ್ನು ಹೀನಾಯವಾಗಿ ಸೋಲಿಸುವಂತಾಗಿದೆ ಗೆಲುವಿನ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದ ಭಾರತ ತಂಡ ಹೀಗೂ ಸೋಲುತ್ತದೆಯೇ ಎಂಬಷ್ಟು ಸೋಲುಗಳನ್ನು ಕಾಣುತ್ತಲೇ ಸಾಗಿದೆ. ಭಾರತ ತಂಡ ಸೋಲುವ ತಂಡವೇ ಅಥವಾ ಎದುರಾಳಿ ತಂಡಗಳು ದಿಢೀರನೆ ಇಷ್ಟು ಪ್ರಬಲವಾಗಿದ್ದು ಹೇಗೆ? ಎಂಬೆಲ್ಲಾ ಪ್ರಶ್ನೆಗಳು ಕಾಡಲಾರಂಭಿಸಿದೆ.

ಆದರೆ ಭಾರತ ತಂಡದ ಸಾಮರ್ಥ್ಯದಲ್ಲಿ ಅಥವಾ ಆಟಗಾರರ ಪ್ರತಿಭೆ ಬಗ್ಗೆ ಎರಡು ಮಾತಿಲ್ಲ. ಪ್ರಶ್ನಿಸುವಂತಿಲ್ಲ. ಏಕೆಂದರೆ ಅವರೆಲ್ಲಾ ಗೆಲ್ಲಿಸುವ ಕುದುರೆಗಳೇ ಆದರೆ ಅದ್ಯಾಗ ಭಾರತ ತಂಡದ ಮುಖ್ಯ ಕೋಚ್‌ ಆಗಿ ಗೌತಮ್‌ ಗಂಭೀರ್‌ ಕಾಲಿಟ್ಟರೋ ಗೊತ್ತಿಲ್ಲ. ಭಾರತ ತಂಡವನ್ನು ಶನಿ ಆವರಿಸಿಕೊಂಡಂತೆ ಸೋಲುಗಳು ಆವರಿಸಿಕೊಂಡಿತು. ಗೆಲ್ಲಬೇಕಾದ ಪಂದ್ಯಗಳನ್ನೆಲ್ಲಾ ಸೋಲುವಂತಾಯಿತು. ವಿದೇಶದಲ್ಲಿ ಹೋಗಲಿ, ತವರಿನಲ್ಲೂ ಸರಣಿ ಸೋಲುಂಡಿತು. ತವರಿನಲ್ಲಿ ಬಾಂಗ್ಲಾದೇಶ, ನ್ಯೂಜಿಲೆಂಡ್‌ ಹೀಗೆ ಬಂದ ತಂಡಗಳ ಎದುರಲ್ಲಿ ಭಾರತ ತಂಡ ಮಂಡಿಯೂರತೊಡಗಿತು. ಇತ್ತೀಚೆಗಂತೂ ಐರ್ಲೆಂಡ್‌ ಅಂತಹ ಕ್ರಿಕೆಟ್‌ ಶಿಶುಗಳ ವಿರುದ್ಧ ಸೋಲು ನಿಜಕ್ಕೂ ಅಭಿಮಾನಿಗಳಿಗೆ ಮಾತ್ರವಲ್ಲ, ಕ್ರಿಕೆಟ್‌ ಪಂಡಿತರ ಹಾಗೂ ಭಾರತ ತಂಡದ ದಿಗ್ಗಜರ ತಲೆಕೆಡಿಸುವಂತೆ ಮಾಡಿತು.

ಹೌದು ಹಾಗಂತ ಗೌತಮ್‌ ಗಂಭೀರ್‌ ಏನೂ ಕೈ ಕಾಲು ಹಿಡಿದು ಭಾರತ ತಂಡಕ್ಕೆ ಬರಲಿಲ್ಲ. ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಗಂಭೀರ್‌ ಗರಡಿಯಲ್ಲಿ ಐಪಿಎಲ್‌ ಚಾಂಪಿಯನ್‌ ಆಗುತ್ತಿದ್ದಂತೆ ಬಿಸಿಸಿಐನ ಆಗಿನ ಪ್ರಧಾನ ಕಾರ್ಯದರ್ಶಿ ಆಗಿದ್ದ ಜೈ ಶಾ ದುಂಬಾಲು ಬಿದ್ದು ಕರೆದುಕೊಂಡು ಬಂದರು. ಕೆಕೆಆರ್‌ ಬಿಟ್ಟು ಹೋಗಬೇಡಿ ಎಂದು ತಂಡದ ಮಾಲೀಕ ಹಾಗೂ ಬಾಲಿವುಡ್‌ ನಟ ಶಾರೂಖ್‌ ಖಾನ್‌ ಬ್ಲಾಂಕ್‌ ಚೆಕ್‌ ನೀಡಿ ಗೋಗರೆದರು. ಆದರೂ ಅದೆಕ್ಕೆಲ್ಲಾ ಕ್ಯಾರೇ ಅನ್ನದ ಗಂಭೀರ್‌ ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಲು ಸಜ್ಜಾದರು.

ರಾಜಕೀಯ ಅನ್ನೋದು ಕೇವಲ ರಾಜಕಾರಣಕ್ಕೆ ಮಾತ್ರ ಸೀಮಿತವಾಗಿಲ್ಲ. ಕ್ರಿಕೆಟ್‌ ನಲ್ಲೂ ಆವರಿಸಿಕೊಂಡಿದೆ. ಆದರೆ ಇದೆಲ್ಲದರ ನಡುವೆ ತಂಡದ ಗೆಲುವಿಗೆ ಇದ್ಯಾವುದೂ ಅಡ್ಡಿಯಾಗಿರಲಿಲ್ಲ. ಆದರೆ ದೆಹಲಿಯಲ್ಲಿ ಬಿಜೆಪಿ ಶಾಸಕ ಆಗಿದ್ದಾನೆ ಎಂಬ ಕಾರಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪುತ್ರ ಜೈ ಶಾ ಕರೆದುಕೊಂಡು ಬಂದು ಭಾರತ ಕ್ರಿಕೆಟ್‌ ತಂಡದ ಪೂರ್ಣ ಜವಾಬ್ದಾರಿಯನ್ನು ವಹಿಸಲು ಸಜ್ಜಾದರು. ನಮ್ಮದೇ ಪಕ್ಷ, ನಮ್ಮವರೇ ನಮ್ಮ ಹಿಂದೆ ಇದ್ದಾರೆ ಎಂಬ ಕಾರಣಕ್ಕೆ ಹಲವಾರು ಷರತ್ತುಗಳನ್ನು ಹಾಕಿ ಕೊನೆಗೂ ಮುಖ್ಯ ಕೋಚ್‌ ಸ್ಥಾನಕ್ಕೆ ಒಪ್ಪಿಕೊಂಡಿದ್ದ ಗಂಭೀರ್‌ ಒಂದೊಂದಾಗಿ ವರಸೆಗಳನ್ನು ತೆಗೆಯಲು ಆರಂಭಿಸಿದರು.

ಆಗಷ್ಟೇ ಟಿ-೨೦ ವಿಶ್ವಕಪ್‌ ಗೆದ್ದು ಹುಮ್ಮಸ್ಸಿನಲ್ಲಿದ್ದ ಭಾರತ ತಂಡ ಗಂಭೀರ್‌ ಕಾಲಿಟ್ಟ ಕೆಲವೇ ಸಮಯದಲ್ಲಿ ಛಿದ್ರವಾಯಿತು. ಸತತ ಗೆಲುವುಗಳನ್ನು ದಾಖಲಿಸುತ್ತ ಜಾಗತಿಕ ಕ್ರಿಕೆಟ್‌ ನಲ್ಲಿ ಪ್ರಬಲ ತಂಡವಾಗಿದ್ದ ಭಾರತ ತಂಡ ಚಿಕ್ಕಪುಟ್ಟ ತಂಡಗಳ ಎದುರು ಕೂಡ ಸೋಲುವಂತಾಯಿತು.

ತವರಿನ ಹುಲಿಯಾಗಿದ್ದ ಭಾರತ ತಂಡವನ್ನು ಬಾಂಗ್ಲಾ ಹುಲಿಗಳು ಸೋಲಿಸಿ ಇತಿಹಾಸ ಬರೆದರು. ಮೊನ್ನೆ ಮೊನ್ನೆಯಂತೂ ಐರ್ಲೆಂಡ್‌ ಅಂತಹ ನಿನ್ನೆ ಮೊನ್ನೆ ಬಂದ ತಂಡದ ಎದುರು ಟಿ-೨೦ ಸರಣಿಯನ್ನೇ ಸೋತಿದ್ದು ಅಭಿಮಾನಿಗಳಿಗೆ ಜೀರ್ಣಿಸಿಕೊಳ್ಳಲು ಆಗಲೇ ಇಲ್ಲ. ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮ ಸೇರಿದಂತೆ ಹಿರಿಯ ಆಟಗಾರರನ್ನೆಲ್ಲಾ ಬೆಂಚು ಕೂರಿಸಿದ. ಅನುಭವವೇ ಇಲ್ಲದ ಆಟಗಾರರಿಗೆ ಮಣೆ ಹಾಕಿದ. ಹೊಸ ಹಾಗೂ ಯುವ ತಂಡ ಕಟ್ಟುವ ಮುನ್ಸೂಚನೆ ನೀಡುತ್ತಿದ್ದಂತೆ ರೋಹಿತ್‌ ಶರ್ಮ, ವಿರಾಟ್ ಕೊಹ್ಲಿ ಟಿ-೨೦ ಹಾಗೂ ಟೆಸ್ಟ್‌ ಕ್ರಿಕೆಟ್‌ ಗೆ ವಿದಾಯ ಹೇಳಿ ಏಕದಿನ ಕ್ರಿಕೆಟ್‌ ಗೆ ಸೀಮಿತಗೊಳಿಸಿಕೊಂಡರು. ಸ್ಫೋಟಕ ಬ್ಯಾಟಿಂಗ್‌ ಗೆ ಹೆಸರಾಗಿದ್ದ ಸೂರ್ಯ ಕುಮಾರ್‌ ಯಾದವ್‌ ನನ್ನು ನಾಯಕ ಪಟ್ಟ ನೀಡಿ ಅಷ್ಟೇ ಬೇಗ ಕಸಿದುಕೊಂಡರು. ಈಗ ಬಂದಿರುವ ಶ್ರೇಯಸ್‌ ಅಯ್ಯರ್‌ ಅದೆಷ್ಟು ದಿನ ನಾಯಕರಾಗಿರುತ್ತಾರೋ ಗೊತ್ತಿಲ್ಲ. ಶುಭಮನ್‌ ಗಿಲ್‌ ಪರಿಸ್ಥಿತಿ ಇನ್ನೂ ಡೋಲಾಯಮಾನವಾಗಿಯೇ ಮುಂದುವರಿದಿದೆ.

ಇವರೆಲ್ಲರ ಮಧ್ಯೆ ಕನ್ನಡಿಗ ಕೆಎಲ್‌ ರಾಹುಲ್‌ ಯಾವಾಗ ತಂಡದಲ್ಲಿ ಇರುತ್ತಾರೆ? ಯಾವ ಸ್ಥಾನದಲ್ಲಿ ಆಡುತ್ತಾರೆ? ವಿಕೆಟ್‌ ಕೀಪರ್‌ ಆಗಿಯೋ ಬ್ಯಾಟ್ಸ್‌ ಮನ್‌ ಆಗಿಯೋ ಅಗ್ರ ಕ್ರಮಾಂಕದಲ್ಲಿಯೋ ಅಥವಾ ೬-೭ನೇ ಕ್ರಮಾಂಕದಲ್ಲಿ ಆಡಿಸುತ್ತಾರೋ ಎಂಬುದು ಅಭಿಮಾನಿಗಳಿಗೆ ಇರಲಿ ಸ್ವತಃ ಕೆಎಲ್‌ ರಾಹುಲ್‌ ಗೊತ್ತಿರುವುದಿಲ್ಲವೇನೋ ಎಂಬಂತೆ ಆಗಿದೆ. ಮತ್ತೊಬ್ಬ ಕನ್ನಡಿಗ ಮಧ್ಯಮ ವೇಗಿ ಪ್ರಸಿದ್ಧ ಕೃಷ್ಣ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ
ರಾಹುಲ್‌ ದ್ರಾವಿಡ್‌ ಕಟ್ಟಿದ ಪ್ರಬಲ ತಂಡವನ್ನು ಗಂಭೀರ್ ಕಾಲಿಡುತ್ತಿದ್ದಂತೆ ಸರ್ವಾಧಿಕಾರಿ ಧೋರಣೆಯಿಂದ ಛಿದ್ರಗೊಳಿಸಿಬಿಟ್ಟರು. ಡ್ರೆಸ್ಸಿಂಗ್‌ ರೂಮ್‌ ವಾತಾವರಣ ಗಬ್ಬೆದು ಹೋಯಿತು. ಇದರಿಂದ ಪ್ರಬಲ ಆಟಗಾರರೆಲ್ಲಾ ಮೂಲೆಗುಂಪಾದರು. ಭರವಸೆ ಮೂಡಿಸುತ್ತಿದ್ದ ಯುವ ಆಟಗಾರರು ಭರವಸೆ ಕಳೆದುಕೊಂಡರು. ಆಟಗಾರರ ಕ್ರಮಾಂಕಗಳು ಅದಲು ಬದಲಾದವು. ಕೊನೆ ಕೊನೆಗೆ ತಂಡದಲ್ಲಿ ಯಾರಿದ್ದಾರೆ? ಯಾರಿಲ್ಲ ಎಂಬುದೇ ಗೊತ್ತಾಗದಂತ ಪರಿಸ್ಥಿತಿ ನಿರ್ಮಾಣವಾಯಿತು. ಅದರ ಪರಿಣಾಮವೇ ಸತತ ಸೋಲು.

ಹೌದು, ಗಂಭೀರ್‌ ಭಾರತ ತಂಡದ ಕೋಚ್‌ ಆದ ನಂತರ ವಿವಾದಗಳೇ ಹೆಚ್ಚಾಗಿ ಕ್ರಿಕೆಟ್‌ ಅನ್ನು ಆವರಿಸಿಕೊಂಡಿತು. ಪಂದ್ಯ ಸೋತರೆ ಮುಖ ತಿರುಗಿಸಿಕೊಂಡು ಹೋಗುವುದು, ಗೆದ್ದರೆ ಎಲ್ಲರನ್ನೂ ಬೆನ್ನು ತಟ್ಟಿ ಪ್ರೋತ್ಸಾಹಿಸುವುದು, ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮ ಜೊತೆಗಿನ ಜಗಳ, ರೋಹಿತ್‌ ಶರ್ಮ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ್ದು, ಡ್ರೆಸ್ಸಿಂಗ್‌ ರೂಮ್‌ ನಲ್ಲಿ ಕೊಹ್ಲಿ ಜೊತೆ ಜಗಳ.. ಹೀಗೆ ಒಂದರ ಹಿಂದೆ ಒಂದು ವಿವಾದಗಳು ಕ್ರಿಕೆಟ್‌ ತಂಡದ ಬೆನ್ನು ಹತ್ತಿತು. ಇದರಿಂದ ಗೆಲುವು ಮರೀಚಿಕೆ ಆಗಿ ಸೋಲು ಆವರಿಸಿಕೊಂಡಿತು.

ಮುಂಬರುವ ವಿಶ್ವಕಪ್‌ ನಲ್ಲಿ ಕೊಹ್ಲಿ ಮತ್ತು ರೋಹಿತ್‌ ಶರ್ಮ ಅವರನ್ನು ಆಡಿಸಬಾರದು ಎಂಬ ಸಾಕಷ್ಟು ತಂತ್ರಗಳನ್ನು ಗಂಭೀರ್‌ ರೂಪಿಸಿದರು. ಆದರೆ ಅಭಿಮಾನಿಗಳ ಒತ್ತಡ ಹಾಗೂ ಐಪಿಎಲ್‌ ನಲ್ಲಿ ತೋರಿದ ಭರ್ಜರಿ ಪ್ರದರ್ಶನ ಇಬ್ಬರನ್ನು ಬಲವಂತವಾಗಿ ತಂಡದಲ್ಲಿ ಉಳಿಸಿಕೊಳ್ಳಬೇಕಾಯಿತು. ರನ್‌ ಹೊಳೆ ಹರಿಸುವವರೆಗೂ ಹಾಗೂ ಏಕದಿನದಲ್ಲಿ ತಂಡ ಗೆಲ್ಲುವವರೆಗೂ ಇವರ ಸ್ಥಾನ ಅಭಾದಿತ ಎಂಬುದರಲ್ಲಿ ಎರಡು ಮಾತ್ತಿಲ್ಲ.
ಐಪಿಎಲ್‌ ನಲ್ಲಿ ಸ್ಫೋಟಕ ಬ್ಯಾಟಿಂಗ್‌ ನಿಂದ ಮನೆ ಮಾತಾಗಿದ್ದ ವೈಭವ್‌ ಸೂರ್ಯವಂಶಿ ಎಂಬ ಬೇಬಿ ಬಾಸ್ ಹುಡುಗ ಪಾಡು ಇದೇ ಆಗಿದೆ. ಅಭಿಮಾನಿಗಳ ಒತ್ತಾಯದ ಮೇರೆಗೆ ತಂಡದಲ್ಲಿ ಅವಕಾಶ ಕೊಟ್ಟರೆ ಈ ಗಂಭೀರ್‌ ಮೈದಾನಕ್ಕೆ ಇಳಿಸದೇ ಬೆಂಚು ಕಾಯಿಸುವಂತೆ ಮಾಡಿದರು. ನಂತರ ಇಂಗ್ಲೆಂಡ್‌ ವಿರುದ್ಧ ಕಣಕ್ಕಿಳಿಸುವಷ್ಟರಲ್ಲಿ ಮಾನಸಿಕವಾಗಿ ಕುಗ್ಗಿದ್ದ ಸೂರ್ಯವಂಶಿ ವಿಫಲರಾದರು.

ಇನ್ನೂ ಗಂಭೀರ್‌ ಕೋಚ್‌ ಆಗಿ ಅವರ ದಾಖಲೆಗಳನ್ನು ಗಮನಿಸುವುದಾದರೆ, ಗಂಭೀರ್‌ ಬಂದ ನಂತರ ಭಾರತ ತವರಿನಲ್ಲಿ ನಡೆದ ೨೦೨೬ನೇ ಸಾಲಿನ ಟಿ-೨೦ ವಿಶ್ವಕಪ್‌ ಹಾಗೂ ಚಾಂಪಿಯನ್ಸ್‌ ಟ್ರೋಫಿ ಗೆದ್ದ ಸಾಧನೆ ಮಾಡಿದ್ದು ಇವರ ಹೆಗ್ಗಳಿಕೆ.

ಟೆಸ್ಟ್‌ ನಲ್ಲಿ ಭಾರತ ೧೮ ಪಂದ್ಯಗಳನ್ನು ಆಡಿದ್ದು, ೮ರಲ್ಲಿ ಜಯ ಸಾಧಿಸಿದರೆ, ೧೦ರಲ್ಲಿ ಸೋಲು ಹಾಗೂ ೨ ಡ್ರಾ ಮಾಡಿಕೊಂಡಿಡಿದೆ. ಒಟ್ಟಾರೆ ಗೆಲುವಿನ ಸರಾಸರಿ ೩೩.೩೩ ಆಗಿದ್ದು, ತವರಿನಲ್ಲಿ ಎರಡು ಟೆಸ್ಟ್ ಸರಣಿಯಲ್ಲಿ ವೈಟ್‌ ವಾಷ್‌ ಮುಖಭಂಗ ಬಿಸಿಸಿಐ ನಿದ್ದೆಗೆಡಿಸಿತು. ನ್ಯೂಜಿಲೆಂಡ್‌ ವಿರುದ್ಧ ೦-೩ ಸೋತು ೩೬ ವರ್ಷಗಳಲ್ಲಿ ಮೊದಲ ಬಾರಿ ಸೋಲಿನ ದಾಖಲೆ ಬರೆಯಿತು. ನಂತರ ದಕ್ಷಿಣ ಆಫ್ರಿಕಾ ವಿರುದ್ಧ ೦-೨ ಅಂತರದಿಂದ ಸೋತತು ೨೫ ವರ್ಷಗಳಲ್ಲೇ ಮೊದಲ ಬಾರಿ ತವರಿನಲ್ಲಿ ಹೀನಾಯ ಸೋಲಿನ ದಾಖಲೆ ಬರೆಯಿತು. ಇದರ ಜೊತೆಗೆ ಆಸ್ಟ್ರೇಲಿಯಾದಲ್ಲಿ ೧-೩ರಿಂದ ಸರಣಿ ಸೋಲು ಅನುಭವಿಸಿದರೆ , ಇಂಗ್ಲೆಂಡ್‌ ವಿರುದ್ಧ ೨-೨ರಿಂದ ಸಮಬಲ ಸಾಧಿಸಿದ ತೃಪ್ತಿ ಪಡೆಯಿತು.
ಇನ್ನು ಏಕದಿನ ಕ್ರಿಕೆಟ್‌ ಬಗ್ಗೆ ಗಮನಿಸುವುದಾದರೆ, ಭಾರತ ಗಂಭೀರ್‌ ಗರಡಿಯಲ್ಲಿ ೨೩ ಪಂದ್ಯಗಳನ್ನು ಆಡಿದ್ದು, ೧೬ ಜಯ ಹಾಗೂ ೬ರಲ್ಲಿ ಸೋಲುಂಡಿದೆ. ಅಂದರೆ ಗೆಲುವಿನ ಸರಾಸರಿ ೬೯.೫೬ ಆಗಿದೆ. ಇದರಲ್ಲಿ ಚಾಂಪಿಯನ್ಸ್‌ ಟ್ರೋಫಿ ಗೆಲುವು ಸೇರಿದೆ. ಆದರೆ ಶ್ರೀಲಂಕಾ ವಿರುದ್ಧ ಸೋತು ೨೭ ವರ್ಷಗಳಲ್ಲಿ ಮೊದಲ ಬಾರಿ ಸೋಲಿನ ದಾಖಲೆ ಬರೆಯಿತು.
ಟಿ-೨೦ ಸರಣಿಗೆ ಬಂದರೆ ಭಾರತ ೫೩ ಪಂದ್ಯಗಳನ್ನು ಆಡಿದ್ದು, ೩೭ರಲ್ಲಿ ಗೆಲುವು, ೧೨ ಸೋಲು ಅನುಭವಿಸಿದ್ದು, ಗೆಲುವಿನ ಸರಾಸರಿ ಶೇ.೬೯.೮೧ ಹೊಂದಿದೆ. ಟಿ-೨೦ಯಲ್ಲಿ ಸೋಲೇ ಕಾಣದೇ ಇದ್ದ ಗಂಭೀರ್‌ ಸಾರಥ್ಯದ ಭಾರತ ತಂಡ ಟಿ-೨೦ಯಲ್ಲಿ ಸೂರ್ಯ ಕುಮಾರ್‌ ಯಾದವ್‌ ಬದಲು ಶ್ರೇಯಸ್‌ ಅಯ್ಯರ್‌ ನಾಯಕ ಸ್ಥಾನ ಅಲಂಕರಿಸಿದ ಮೊದಲೆರಡು ಸರಣಿ ಅಂದರೆ ಐರ್ಲೆಂಡ್‌ ಮತ್ತು ಇಂಗ್ಲೆಂಡ್‌ ವಿರುದ್ಧ ಸೋಲುಂಡಿತು. ಐರ್ಲೆಂಡ್‌ ವಿರುದ್ಧ ೦-೨ ಹಾಗೂ ಇಂಗ್ಲೆಂಡ್‌ ವಿರುದ್ಧ ೦-೪ರಿಂದ ಸೋತು ಮಣ್ಣು ಮುಕ್ಕಿತು.

ಸೌರವ್‌ ಗಂಗೂಲಿ ಭಾರತ ತಂಡದ ಯಶಸ್ವಿ ಕ್ಯಾಪ್ಟನ್‌ ಆಗಿದ್ದಾಗ ಆಸ್ಟ್ರೇಲಿಯಾದ ದಿಗ್ಗಜ ಗ್ರೇಗ್‌ ಚಾಪೆಲ್‌ ಬಂದು ಬದಲಾವಣೆ ಮಾಡಲು ಹೋಗಿದ್ದರಿಂದ ಭಾರತ ತಂಡ ಹೇಗೆ ಮುಗ್ಗರಿಸಿತೋ ಅದೇ ಮಾದರಿಯಲ್ಲಿ ಇದೀಗ ಗಂಭೀರ್‌ ಕೋಚ್‌ ಆದ ಭಾರತ ತಂಡದ ಸ್ಥಿತಿ ಆಗಿದೆ. ಇಂಗ್ಲೆಂಡ್‌ ವಿರುದ್ಧದ ಸರಣಿ ನಂತರ ಗಂಭೀರ್‌ ಕೋಚ್‌ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಂದು ವೇಳೆ ಬಿಸಿಸಿಐ ಏಕದಿನ ವಿಶ್ವಕಪ್‌ ಟೂರ್ನಿ ವರೆಗೂ ಉಳಿಸಿಕೊಳ್ಳಲು ಬಯಸಿದರೆ ವಿಶ್ವಕಪ್‌ ಕೈ ತಪ್ಪುವುದು ಖಚಿತ. ಹಾಗೆಯೇ ಕೋಚ್‌ ಈತ ಆತುರದಲ್ಲಿ ಬದಲಾವಣೆ ಮಾಡಿದರೂ ಕಷ್ಟ. ಒಂದು ವೇಳೆ ರಾಜೀನಾಮೆ ಅಂಗೀಕರಿಸಿದರೆ ಸದ್ಯದ ಪರಿಸ್ಥಿತಿಯಲ್ಲಿ ಹಂಗಾಮಿಯಾಗಿ ಕೋಚ್‌ ಆಗಿ ಸೇವೆ ಸಲ್ಲಿಸುತ್ತಿರುವ ವಿವಿಎಸ್‌ ಲಕ್ಷ್ಮಣ್‌ ಅವರನ್ನು ತಾತ್ಕಾಲಿಕವಾಗಿಯಾದರೂ ಸರಿ ಮುಖ್ಯ ಕೋಚ್‌ ಆಗಿ ನೇಮಕ ಮಾಡುವುದು ಸೂಕ್ತ. ಅಲ್ಲವೇ?

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments