ಸೀರೆ ಕೊಡಿಸಲಿಲ್ಲ ಎಂದು ಸಿಟ್ಟಿಗೆದ್ದ ಪತ್ನಿ ಗಂಡನನ್ನು ಕುಕ್ಕರ್ ಮುಚ್ಚಳದಿಂದ ಹೊಡೆದು ಕೊಂದು ನಂತರ ಆಕಸ್ಮಿಕವಾಗಿ ಸತ್ತಿದ್ದಾನೆ ಎಂದು ನಾಟಕವಾಡಿದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಬಿಹಾರದ ರೋಹ್ಟಕ್ ಮೂಲದ ಪತ್ನಿ ಸುನೀತಾ ದೇವಿ ಹರೇರಾಮ್ ಸಿಂಗ್ 35 ವರ್ಷದ ಪತಿ ಹರೇರಾಮ್ ಕಿಶುಂಜಿ ಸಿಂಗ್ ಅವರನ್ನು ಹೊಡೆದು ಕೊಂದಿದ್ದಾಳೆ.
ಜುಲೈ ೧೯ರಂದು ಮನೆಗೆ ಬಂದಿದ್ದ ಹರೇರಾಮ್ ತನಗೆ ಸೀರೆ ತಂದಿಲ್ಲ ಎಂದು ಪತ್ನಿ ಗಲಾಟೆ ಆರಂಭಿಸಿದ್ದಾಳೆ. ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದ್ದು, ಕೋಪದ ಭರದಲ್ಲಿ ಆಕೆ ಕುಕ್ಕರ್ ಮುಚ್ಚಳಿಂದ ಹಲ್ಲೆ ನಡೆಸಿದ್ದಾಳೆ. ನಂತರ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾಳೆ.
ತನಿಖೆಯ ದಿಕ್ಕು ತಪ್ಪಿಸಲು ಆಕೆ ಪತಿ ಆಕಸ್ಮಿಕವಾಗಿ ಮೃತಪಟ್ಟಿದ್ದಾನೆ ಎಂದು ಪೊಲೀಸರಿಗೆ ವಿವರಣೆ ನೀಡಿದ್ದಳು. ಆದರೆ ಪೊಲೀಸರು ಮರಣೋತ್ತರ ವರದಿ ಹಾಗೂ ಸಂಬಂಧಿಕರು ಹಾಗೂ ಅಕ್ಕಪಕ್ಕದ ಮನೆಯವರನ್ನು ವಿಚಾರಣೆಗೊಳಪಡಿಸಿದಾಗ ಅನುಮಾನ ಉಂಟಾಗಿದ್ದು, ಆಕೆಯನ್ನು ವಿಚಾರಣೆ ನಡೆಸಿದಾಗ ಆಕೆ ಸತ್ಯ ಒಪ್ಪಿಕೊಂಡಿದ್ದಾಳೆ.



