ಬೆಂಗಳೂರು: ರಾಮನಗರದ ದೊಡ್ಡೇರಿ ಫಾರ್ಮ್ಹೌಸ್ನಲ್ಲಿ ಪತ್ತೆಯಾಗಿದ್ದ ನಕಲಿ ಔಷಧ ಜಾಲ ಪ್ರಕರಣದ ಕಿಂಗ್ಪಿನ್ ಪ್ರಶಾಂತ್ ರಂಜನ್ ಬಾಬುನನ್ನು ವಿಶೇಷ ತನಿಖಾ ತಂಡ (ಎಸ್ ಐಟಿ) ಅಧಿಕಾರಿಗಳು ಸೋಮವಾರ ಬೆಳಿಗ್ಗೆ ಬಂಧಿಸಿದ್ದಾರೆ.
ಅಜರ್ಬೈಜಾನ್ನಿಂದ ಬೆಳಿಗ್ಗೆ ವಾಪಸಾದ ಕಿಂಗ್ಪಿನ್ ಪ್ರಶಾಂತ್ ರಂಜನ್ ನನ್ನು ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ಕೈಗೊಂಡ ಎಸ್ ಐಟಿ ಅಧಿಕಾರಿಗಳು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.
ಅಜರ್ಬೈಜಾನ್ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪ್ರಶಾಂತ್ ರಂಜನ್ ಬಾಬುನನ್ನು ಲುಕ್ಔಟ್ ನೋಟಿಸ್ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಿಂದ ಪ್ರಯಾಣಿಕರು ಹೊರಬರುವ ದ್ವಾರ(ಅರೈವಲ್ ಗೇಟ್) ಬಳಿ ಎಸ್ ಐಟಿ ಎಸಿಪಿ ಅಂಜನ್ ಕುಮಾರ್ ನೇತೃತ್ವದ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿದೆ.
ಆರೋಪಿ ಪ್ರಶಾಂತ್ನನ್ನು ಎಸ್ಐಟಿ ಅಧಿಕಾರಿಗಳು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಬಳಿಕ ಸುದೀರ್ಘ ವಿಚಾರಣೆ ನಡೆಸುತ್ತಿದ್ದಾರೆ. ನಕಲಿ ಔಷಧಿಗಳನ್ನು ಎಲ್ಲೆಲ್ಲಿ ತಯಾರಿಸಲಾಗುತ್ತಿತ್ತು, ಯಾವ್ಯಾವ ಔಷಧ ಅಂಗಡಿಗಳಿಗೆ ಹಾಗೂ ಆಸ್ಪತ್ರೆಗಳಿಗೆ ಪೂರೈಸಲಾಗಿತ್ತು, ಜಾಲದಲ್ಲಿ ಇನ್ನು ಯಾರ್ಯಾರು ಭಾಗಿಯಾಗಿದ್ದಾರೆ ಎಂಬ ಬಗ್ಗೆ ಪ್ರಾಥಮಿಕ ಮಾಹಿತಿ ಸಂಗ್ರಹಿಸಲಾಗಿದೆ.
ಪ್ರಾಥಮಿಕ ವಿಚಾರಣೆ ಪೂರ್ಣಗೊಂಡ ನಂತರ ಆರೋಪಿಯನ್ನು ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಹೆಚ್ಚಿನ ತನಿಖೆಗಾಗಿ ಎಸ್ಐಟಿ ವಶಕ್ಕೆ ಪಡೆಯಲು ಸಿದ್ಧತೆ ನಡೆಸಲಾಗಿದೆ.
ಪತ್ತೆಯಾಗಿದ್ದ ಆರೋಪಿ:
ದೊಡ್ಡೇರಿ ಫಾರ್ಮ್ಹೌಸ್ನಲ್ಲಿ ನಡೆಯುತ್ತಿದ್ದ ನಕಲಿ ಔಷಧ ಜಾಲದ ಕಿಂಗ್ಪಿನ್ ಪ್ರಶಾಂತ್ ರಂಜನ್ ಬಾಬು ಎನ್ನುವುದು ಎಸ್ಐಟಿ ತನಿಖೆ ವೇಳೆ ಪತ್ತೆಯಾಗಿ ಆತ ಅಜರ್ಬೈಜಾನ್ನಲ್ಲಿರುವುದು ಕಂಡುಬಂದಿತ್ತು.
ಸೆಪ್ಟೆಂಬರ್ 9ರಂದು ವೀಸಾ ಅವಧಿ ಮುಗಿದ ಹಿನ್ನೆಲೆಯಲ್ಲಿ ಅಜರ್ಬೈಜಾನ್ನ ಕಸ್ಟಮ್ಸ್ ಅಧಿಕಾರಿಗಳ ವಶದಲ್ಲಿದ್ದ ಪ್ರಶಾಂತ್, ಭಾರತಕ್ಕೆ ಮರಳಿದ ಬಳಿಕ ಲುಕ್ಔಟ್ ನೋಟಿಸ್ ಆಧರಿಸಿ ಬಂಧಿಸಲು ತನಿಖಾ ತಂಡ ಸಿದ್ಧತೆ ನಡೆಸಿತ್ತು.
15 ಕೋಟಿ ವಹಿವಾಟು:
ನಕಲಿ ಔಷಧ ಜಾಲದ ಮತ್ತೊಬ್ಬ ಪ್ರಮುಖ ಆರೋಪಿ ವೀರೇಶ್ ಜೈನ್, ನಕಲಿ ಔಷಧಗಳ ಉತ್ಪಾದನೆ ಮತ್ತು ಪೂರೈಕೆ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎನ್ನಲಾಗಿದೆ. ಬೆಂಗಳೂರಿನ ಆಸ್ಪತ್ರೆಗಳು ಹಾಗೂ ಮೆಡಿಕಲ್ಗಳಿಗೆ ನಕಲಿ ಔಷಧಗಳನ್ನು ಪೂರೈಸಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಜಾಲದ ವಾರ್ಷಿಕ ವಹಿವಾಟು ಸುಮಾರು 15 ಕೋಟಿಯಷ್ಟಿದ್ದು, ಪ್ರಕರಣದ ತನಿಖೆಯನ್ನು ಮುಂದುವರೆಸಲಾಗಿದೆ.
ನಕಲಿ ಲೇಬಲ್ಗಳ ಪೂರೈಕೆ:
ಆರೋಗ್ಯ ಇಲಾಖೆ ಅಧಿಕಾರಿಗಳು ರಾಮನಗರದ ದೊಡ್ಡೇರಿ ಗ್ರಾಮದ ಬಳಿಯ ಫಾರ್ಮ್ಹೌಸ್ ಮೇಲೆ ನಡೆಸಿದ ದಾಳಿ ವೇಳೆ ನಕಲಿ ಔಷಧ ದಂಧೆ ಬೆಳಕಿಗೆ ಬಂದಿತ್ತು. ತನಿಖೆ ವಿಸ್ತರಿಸಿದಂತೆ ನಕಲಿ ಔಷಧಗಳ ಉತ್ಪಾದನೆ, ಪೂರೈಕೆ ಹಾಗೂ ಆಸ್ಪತ್ರೆ ಮತ್ತು ಮೆಡಿಕಲ್ಗಳಿಗೆ ವಿತರಿಸುವ ದೊಡ್ಡ ಜಾಲದ ಮಾಹಿತಿ ಹೊರಬಂದಿದೆ.
ತನಿಖೆ ರಾಜ್ಯದ ಗಡಿ ದಾಟಿದ್ದು, ಹಲವು ರಾಜ್ಯಗಳಲ್ಲಿ ದಾಳಿ ನಡೆಸಲಾಗಿದೆ. ನಕಲಿ ಔಷಧ ಜಾಲಕ್ಕೆ ಅಂತರರಾಜ್ಯ ಹಾಗೂ ಅಂತಾರಾಷ್ಟ್ರೀಯ ಸಂಪರ್ಕಗಳಿರುವ ಬಗ್ಗೆಯೂ ತನಿಖಾಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ. ಟರ್ಕಿಯಿಂದ ನಕಲಿ ಲೇಬಲ್ಗಳನ್ನು ತರಿಸಿ ಔಷಧ ಪೂರೈಕೆಗೆ ಬಳಸಲಾಗುತ್ತಿತ್ತು ಎಂಬ ಮಾಹಿತಿಯೂ ತನಿಖೆಯಲ್ಲಿ ಬಯಲಾಗಿದೆ.
ತೀವ್ರಗೊಂಡ ತನಿಖೆ
ಪ್ರಶಾಂತ್ ರಂಜನ್ ಬಾಬು ಬಂಧನದ ಬೆನ್ನಲ್ಲೇ ಜಾಲದ ಕಾರ್ಯವೈಖರಿ, ಹಣಕಾಸು ವ್ಯವಹಾರ, ಔಷಧಗಳ ಉತ್ಪಾದನೆ ಮತ್ತು ಇತರ ಆರೋಪಿಗಳೊಂದಿಗಿನ ಸಂಪರ್ಕದ ಕುರಿತು ತನಿಖೆ ಮತ್ತಷ್ಟು ಚುರುಕುಗೊಳ್ಳುವ ನಿರೀಕ್ಷೆಯಿದೆ.
ಫಾರ್ಮ್ಹೌಸ್ ದಾಳಿ
ದೊಡ್ಡರಿ ಫಾರ್ಮ್ಹೌಸ್ನಲ್ಲಿ ಕಳೆದ ಆ.18ರಂದು ತಾವರೆಕೆರೆ ಠಾಣೆ ಪೊಲೀಸರು ಹಾಗೂ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದಾಗ ಸುಮಾರು 5 ಕೋಟಿ ಮೌಲ್ಯದ ನಕಲಿ ಮತ್ತು ಅವಧಿ ಮೀರಿದ ಔಷಧಿಗಳ ಸಂಗ್ರಹ ಪತ್ತೆಯಾಗಿತ್ತು.
ಪ್ರಕರಣದ ವ್ಯಾಪ್ತಿ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರದೆ ಹಲವು ರಾಜ್ಯಗಳಿಗೆ ವಿಸ್ತರಿಸಿರುವ ಶಂಕೆ ವ್ಯಕ್ತವಾಗಿತ್ತು.ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರವು ಪೊಲೀಸ್ ಅಧಿಕಾರಿಗಳು ಮತ್ತು ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ಜಂಟಿ ಪೊಲೀಸ್ ಆಯುಕ್ತ ಸಿ.ವಂಶಿಕೃಷ್ಣ ನೇತೃತ್ವದಲ್ಲಿ ರಚಿಸಿತ್ತು.
12 ಕೋಟಿ ಔಷಧಿ ಪೂರೈಕೆ:
ತನಿಖೆ ಮತ್ತಷ್ಟು ವಿಸ್ತರಿಸಿದಂತೆ, 2025ರ ಫೆಬ್ರವರಿಯಿಂದ ನಗರದ ಆಸ್ಪತ್ರೆಗಳು ಹಾಗೂ ಕರ್ನಾಟಕದ ಇತರ ಭಾಗಗಳಿಗೆ ಸುಮಾರು 12 ಕೋಟಿ ಮೌಲ್ಯದ ಶಂಕಿತ ನಕಲಿ ಔಷಧಿಗಳನ್ನು ಪೂರೈಸಿರುವ ಆರೋಪದ ಬಗ್ಗೆ ಎಸ್ಐಟಿ ತನಿಖೆ ನಡೆಸುತ್ತಿದೆ.
ವಿಶೇಷವಾಗಿ ಪ್ರತಿಷ್ಠಿತ ಔಷಧ ಕಂಪನಿಗಳ ಹೆಸರನ್ನು ಬಳಸಿ ನಕಲಿ ಔಷಧಿಗಳನ್ನು ಮಾರುಕಟ್ಟೆಗೆ ತಳ್ಳಲಾಗಿದೆಯೇ ಎಂಬ ಅಂಶವೂ ತನಿಖೆಯಲ್ಲಿದೆ. ವಶಪಡಿಸಿಕೊಂಡ ಔಷಧಿಗಳ ಮಾದರಿಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಅವುಗಳ ರಾಸಾಯನಿಕ ಸಂಯೋಜನೆ, ಗುಣಮಟ್ಟ ಹಾಗೂ ನಿಜವಾದ ಔಷಧಿಗಳೊಂದಿಗೆ ಇರುವ ವ್ಯತ್ಯಾಸವನ್ನು ಪರಿಶೀಲಿಸಲಾಗುತ್ತಿದೆ.



