ಯಾದಗಿರಿ: ಬಾಲಕಿಯೋರ್ವಳ ಮೇಲೆ ಸ್ವಂತ ಅಜ್ಜನೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
65 ವರ್ಷದ ಶರಣಪ್ಪ ಟಣಕೇದಾರ ಎಂಬ ವೃದ್ಧನೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ.
ಬಾಲಕಿಯ ತಂದೆ-ತಾಯಿ ಬೆಂಗಳೂರಿನಲ್ಲಿ ಜೀವನ ಸಾಗಿಸಲು ಕೆಲಸ ಮಾಡುತ್ತಿದ್ದು ಗ್ರಾಮದ ಮನೆಯಲ್ಲಿ ಅಜ್ಜಿ ಮತ್ತು ಅಜ್ಜನ ಜೊತೆ ಬಾಲಕಿ ವಾಸ ಮಾಡುತ್ತಿದ್ದಳು. ಇದನ್ನೆ ಬಂಡವಾಳ ಮಾಡಿಕೊಂಡ ಅಜ್ಜ ಶರಣಪ್ಪ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ ಬಾಯಿಗೆ ಬಟ್ಟೆ ತುರುಕಿ ಕೊಲೆಗೆ ಯತ್ನಿಸಿದನು ಎನ್ನಲಾಗಿದೆ.
ಬಾಲಕಿಯ ಚೀರಾಟ ಕೇಳಿದ ನೆರೆಹೊರೆಯವರು ಓಡಿ ಬಂದು ಬಾಲಕಿಯನ್ನು ರಕ್ಷಣೆ ಮಾಡಿ ಬೆಂಗಳೂರಿನಲ್ಲಿರುವ ತಾಯಿಗೆ ವಿಷಯ ತಿಳಿಸಿದ್ದು ಸಂತ್ರಸ್ತ ಬಾಲಕಿಯ ತಾಯಿ ನೀಡಿದ ದೂರಿನನ್ವಯ ಕೆಂಭಾವಿ ಠಾಣೆಯಲ್ಲಿ ಪೊಕ್ಸೊ ಮತ್ತು ಕೊಲೆಗೆ ಯತ್ನ ಕೇಸ್ ದಾಖಲಾಗಿದೆ ಎಂದು ಪಿಎಸ್ಐ ಅಮೋಜ ಕಾಂಬಳೆ ತಿಳಿಸಿದರು.
ಕೃತ್ಯ ಎಸಗಿದ ಆರೋಪಿ ಶರಣಪ್ಪನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ಬಾಲಕಿಯನ್ನು ಬಾಲ ಮಂದಿರದಲ್ಲಿ ಇರಿಸಿ ಸೂಕ್ತ ಚಿಕಿತ್ಸೆ ನೆರವು ನೀಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.



