ವಾಷಿಂಗ್ಟನ್: ಭಾರತ, ಚೀನಾ ಸೇರಿದಂತೆ 16 ಪಾಲುದಾರ ದೇಶಗಳ ಮೇಲೆ ಹೆಚ್ಚುವರಿ ಆಮದು ಸುಂಕ ವಿಧಿಸಲು ಅಮೆರಿಕ ಮುಂದಾಗಿದೆ.
ಅಮೆರಿಕದ ಉತ್ಪಾದನಾ ವಲಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ವ್ಯಾಪಾರ ಪದ್ಧತಿಗಳನ್ನು ಅನುಸರಿಸಲಾಗುತ್ತಿದೆ ಎಂದು ಆರೋಪಿಸಿರುವ ಡೊನಾಲ್ಡ್ ಟ್ರಂಪ್ ಆಡಳಿತ, ಹೆಚ್ಚುವರಿ ಆಮದು ಸುಂಕ ವಿಧಿಸಲು ಸಿದ್ಧಪಡಿಸಿರುವ ಪಟ್ಟಿಯಲ್ಲಿ ಭಾರತವೂ ಸ್ಥಾನ ಪಡೆದಿದೆ.
ಈ ದೇಶಗಳ ಕಾಯಿದೆ, ನೀತಿಗಳು ಮತ್ತು ಸಂಪ್ರದಾಯಗಳು ಅಸಮಂಜಸವೇ ಅಥವಾ ತಾರತಮ್ಯದಿಂದ ಕೂಡಿವೆಯೆ ಮತ್ತು ಅಮೆರಿಕದ ವಾಣಿಜ್ಯಕ್ಕೆ ಹೊರೆಯಾಗಿದೆಯೆ ಅಥವಾ ನಿರ್ಬಂಧ ವಿಧಿಸುತ್ತದೆಯೆ ಎಂಬುದನ್ನು ಪರಿಶೀಲಿಸಲು ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿ (ಯುಎಸ್‌ಆರ್), 1974ರ ವ್ಯಾಪಾರ ಕಾಯ್ದೆಯಡಿ ಕಳೆದ ಮಾರ್ಚ್‌ನಲ್ಲಿ ತನಿಖೆ ಆರಂಭಿಸಿತ್ತು. ಈ ತನಿಖೆಯ ವರದಿ ಇಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.
ತನಿಖೆಯ ಫಲಿತಾಂಶದ ಆಧಾರದ ಮೇಲೆ ಭಾರತ, ಚೀನಾ, ಯುರೋಪಿಯನ್ ಒಕ್ಕೂಟ, ಜಪಾನ್, ದಕ್ಷಿಣ ಕೊರಿಯಾ, ಮೆಕ್ಸಿಕೊ, ವಿಯೆಟ್ನಾಂ, ತೈವಾನ್, ಥಾಯ್ಲೆಂಡ್, ಮಲೇಷ್ಯಾ, ಇಂಡೋನೇಷ್ಯಾ, ಸ್ವಿಟ್ಸರ್ಲೆಂಡ್, ನಾರ್ವೆ, ಸಿಂಗಪುರ, ಬಾಂಗ್ಲಾದೇಶ ಹಾಗೂ ಕಾಂಬೋಡಿಯಾ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ಸಾಧ್ಯತೆಯಿದೆ.
ಫೆಬ್ರುವರಿಯಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್ ಟ್ರಂಪ್ ಆಡಳಿತದ ಪ್ರತಿಸುಂಕ ನೀತಿಯನ್ನು ರದ್ದುಗೊಳಿಸಿತ್ತು. ಇದರಿಂದ ನಿರೀಕ್ಷಿತ 1.6 ಲಕ್ಷ ಕೋಟಿ ಡಾಲರ್ (ಸುಮಾರು ₹148 ಲಕ್ಷ ಕೋಟಿ) ಆದಾಯ ಕೈತಪ್ಪಿದೆ. ಈ ಆದಾಯ ನಷ್ಟವನ್ನು ಸರಿದೂಗಿಸಲು ಈ ಹೆಚ್ಚುವರಿ ಸುಂಕಗಳು ನೆರವಾಗಬಹುದು ಎಂದು ರಾಯಿಟರ್ಸ್ ವರದಿ ತಿಳಿಸಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ ಟ್ರಂಪ್ ಆಡಳಿತವು ಜುಲೈನಲ್ಲಿ 60 ಪಾಲುದಾರ ರಾಷ್ಟ್ರಗಳ ಸರಕುಗಳ ಮೇಲೆ ಶೇ 10 ಅಥವಾ ಶೇ 12.5ರಷ್ಟು ಸುಂಕ ವಿಧಿಸಿತ್ತು. ಇದೀಗ ಪ್ರಸ್ತಾಪಿಸಿರುವ ಹೊಸ ಸುಂಕಗಳು ಈಗಾಗಲೇ ಜಾರಿಯಲ್ಲಿರುವ ಸುಂಕಗಳಿಗೆ ಹೆಚ್ಚುವರಿಯಾಗಿ ಅನ್ವಯವಾಗುವ ಸಾಧ್ಯತೆಯಿದೆ.
