ಕೌಟುಂಬಿಕ ಸಮಸ್ಯೆಗಳಿಗೆ ಜಾತಕದಲ್ಲಿರುವ ದೋಷ ಕಾರಣ ಎಂದು ನಂಬಿಸಿ ಪರಿಹಾರದ ನೆಪದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಿದ್ದ ಖ್ಯಾತ ಜ್ಯೋತಿಷಿಯನ್ನು ಮಹಾರಾಷ್ಟ್ರದ ನಾಸಿಕ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.
35 ವರ್ಷದ ಮಹಿಳೆಯೊಬ್ಬರು ಜಾತಕದಲ್ಲಿ ಇರುವ ದೋಷ ನಿವಾರಣೆ ನೆಪದಲ್ಲಿ ಅತ್ಯಾಚಾರ ಎಸಗಿದ್ದಾಗಿ ನೀಡಿದ ದೂರು ಆಧರಿಸಿ ನಾಸಿಕ್ ನ ಪ್ರಭಾವಿ ಜ್ಯೋತಿಷಿ 67 ವರ್ಷದ ಅಶೋಕ್ ಖಾರಟ್ ನನ್ನು ಬಂಧಿಸಿದ್ದಾರೆ.
ಅಶೋಕ್ ಖಾರಟ್ ನನ್ನು ಬಂಧಿಸಿದ ನಂತರ ವಿಚಾರಣೆ ನಡೆಸಿದ ಪೊಲೀಸರು ಈತ ಒಬ್ಬಾಕೆಯ ಮೇಲೆ ಅಲ್ಲ ಈ ರೀತಿ ಹಲವಾರು ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು ಕಂಡು ಆಘಾತಕ್ಕೆ ಒಳಗಾಗಿದ್ದಾರೆ.
ಪೊಲೀಸರು ಜ್ಯೋತಿಷಿ ಕಚೇರಿ ಹಾಗೂ ಮನೆಯ ಮೇಲೆ ದಾಳಿ ನಡೆಸಿ ಪೆನ್ ಡ್ರೈವ್ ಹಾಗೂ ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದಿದ್ದಾರೆ.
ಪೆನ್ ಡ್ರೈವ್ ಹಾಗೂ ಸಿಸಿಟಿವಿ ಆಧರಿಸಿ 58ಕ್ಕೂ ಅಧಿಕ ಮಹಿಳೆಯರ ಅಶ್ಲೀಲ ವೀಡಿಯೊ ಹಾಗೂ ದೃಶ್ಯಗಳು ಪತ್ತೆಯಾಗಿವೆ. ಇದೀಗ ಪೊಲೀಸರು ಜ್ಯೋತಿಷಿ ವಿರುದ್ಧ ಪೋಕ್ಸೊ ಕಾಯ್ದೆ ಪ್ರಕಾರ ಕೇಸು ದಾಖಲಿಸಲು ಮುಂದಾಗಿದ್ದಾರೆ.
ಈ ಎಲ್ಲಾ ಮಹಿಳೆಯರಿಗೆ ಜಾತಕದಲ್ಲಿ ದೊಷವಿದೆ. ಕೌಟುಂಬಿಕ ಸಮಸ್ಯೆ ಇದೆ. ಪರಿಹಾರ ಮಾಡಿಕೊಳ್ಳದೇ ಇದ್ದರೆ ಗಂಡನಿಗೆ ಸಾವು ಬರುತ್ತದೆ ಎಂದು ಹೆದರಿಸಿ ಅವರ ಜೊತೆ ಅನುಚಿತವಾಗಿ ವರ್ತಿಸಿದ್ದ. ಅಲ್ಲದೇ ಈ ದೃಶ್ಯಗಳನ್ನು ಸೆರೆ ಹಿಡಿದು ನಂತರ ಬೆದರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಶೋಕ್ ಖಾರಟ್ ನಿವೃತ್ತಿ ನೌಕಾಪಡೆ ಪೊಲೀಸ್ ಅಧಿಕಾರಿಯಾಗಿದ್ದು ನಿವೃತ್ತಿ ನಂತರ ಜ್ಯೋತಿಷ್ಯ ಆರಂಭಿಸಿದ್ದ. ಜ್ಯೋತಿಷದ ಹೆಸರಿನಲ್ಲಿ ಮಹಿಳೆಯರನ್ನು ವಂಚಿಸುವುದೇ ಕಾಯಕ ಮಾಡಿಕೊಂಡಿದ್ದ. ಅಲ್ಲದೇ ಆಕೂಸ್ ರಿಯಲ್ ಎಸ್ಟೇಟ್ ಉದ್ಯಮ ಕೂಡ ಆರಂಭಿಸಿದ್ದ.
ಜ್ಯೋತಿಷಿ ಪರಿಣತನಾಗಿದ್ದು, ಅತ್ಯಂತ ಪ್ರಭಾವಿ ಎಂದು ಬಿಂಬಿಸಿಕೊಂಡಿದ್ದ ಈತ ದೇವಸ್ಥಾನ ಕೂಡ ಕಟ್ಟಿಸಿ ಅದರ ಪ್ರಭಾವ ಹೊಂದಿದ್ದ. ಈ ದೇವಸ್ಥಾನಕ್ಕೆ ಗಣ್ಯರನ್ನು ಆಹ್ವಾನಿಸಿ ಪ್ರಚಾರ ಕೂಡ ಪಡೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.



