ಉಡುಪಿ: ಮಾದಕ ಮುಕ್ತ ಕರ್ನಾಟಕ ಸೈಬರ್ ಅಪರಾಧದ ಕುರಿತು ಜಾಗೃತಿ ಮೂಡಿಸಲು ನಗರದಲ್ಲಿ ಭಾನುವಾರ ನಡೆದ ಪೊಲೀಸ್ ಓಟದಲ್ಲಿ ಪಾಲ್ಗೊಂಡು ಓಡುತ್ತಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್(ಪಿಎಸ್ ಐ) ಕುಸಿದು ಬಿದ್ದು ಅಸುನೀಗಿದ್ದಾರೆ.
ಕುಂದಾಪುರ ಗ್ರಾಮಾಂತರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ನಾಸಿರ್ ಹುಸೇನ್ ಕುಸಿದು ಬಿದ್ದು ಸಾವನ್ನಪ್ಪಿದ್ದು, ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಜಿಲ್ಲಾ ಪೊಲೀಸ್ ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಘೋಷ ವಾಕ್ಯದೊಂದಿಗೆ ಪೊಲೀಸ್ ಓಟ ಆಯೋಜಿಸಲಾಗಿತ್ತು. ಡ್ರಗ್ಸ್ ಮುಕ್ತ ಕರ್ನಾಟಕ ಧ್ಯೇಯದೊಂದಿಗೆ ಓಟ ಆರಂಭಗೊಂಡಿತ್ತು. ನಗರದ ತಾಲೂಕು ಪಂಚಾಯತ್ ಮುಂಭಾಗದ ರಸ್ತೆಯಲ್ಲಿ ಎಸ್‌ಐ ಕುಸಿದುಬಿದ್ದಿದ್ದಾರೆ.
ಕೂಡಲೇ ಅವರನ್ನು ಪಕ್ಕದಲ್ಲೇ ಇದ್ದ ಡಾ.ಟಿಎಂಎ ಪೈ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಸಿರ್ ಹುಸೇನ್ ಸಾವನ್ನು ಆಸ್ಪತ್ರೆ ವೈದ್ಯರು ದೃಢಪಡಿಸಿದರು. ಚಿಕ್ಕಮಗಳೂರು ಜಿಲ್ಲೆಯ ನಾಸಿರ್ 2010 ಬ್ಯಾಚ್‌ನ ಪೊಲೀಸ್ ಅಧಿಕಾರಿಯಾಗಿದ್ದ 58 ವರ್ಷದ ನಾಸಿರ್ ಹುಸೇನ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.



