ಬೆಂಗಳೂರು: ಮೃತ ವ್ಯಕ್ತಿಯ ಬೆರಳಚ್ಚಿನ ಮೂಲಕ ಆಕೆಯ ಗುರುತನ್ನು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ)ದ ಬಳಿ ಇರುವ ದತ್ತಾಂಶದ ಮೂಲಕ ಪತ್ತೆ ಹಚ್ಚಲು ನಿರ್ದೇಶನ ನೀಡಲು ಕೋರಿ ಬ್ಯಾಟರಾಯನಪುರ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಬ್ಯಾಟರಾಯನಪುರ ಪೊಲೀಸರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠವು ಅರ್ಜಿ ವಜಾಗೊಳಿಸಿದ್ದು, ವ್ಯಕ್ತಿಗಳ ದೃಢೀಕರಣಕ್ಕೆ ಜೀವಂತ ಬೆರಳಚ್ಚು ಅಗತ್ಯವಾಗಿದೆ. ಹೀಗಾಗಿ, ಯುಐಡಿಎಐ ದತ್ತಾಂಶದಲ್ಲಿ ಮೃತ ವ್ಯಕ್ತಿಯ ಬೆರಳಚ್ಚು ಶೋಧಿಸಲು ನಿರ್ದೇಶನ ನೀಡುವುದಕ್ಕೆ ಅವಕಾಶವಿಲ್ಲ ಎಂದು ಹೇಳಿದೆ.
ವ್ಯಕ್ತಿಗತ ಖಾಸಗಿತನವನ್ನು ಕಾಪಾಡಬೇಕಿದ್ದು, ದೃಢೀಕರಿಸಲು ಜೀವಂತ ಬೆರಳಚ್ಚು ಅಗತ್ಯ. ಹೀಗಾಗಿ, ಯುಐಡಿಎಐ ದತ್ತಾಂಶದಲ್ಲಿ ಮೃತ ವ್ಯಕ್ತಿಯ ಬೆರಳಚ್ಚು ಶೋಧಿಸಲು ನಿರ್ದೇಶಿಸಲಾಗದು. ಮೃತ ವ್ಯಕ್ತಿಯ ಬೆರಳಚ್ಚು ಹೊಂದಿಸಲು ತಾಂತ್ರಿಕ ನಿರ್ಬಂಧಗಳಿರಲಿವೆ ಎಂದು ತಿಳಿಸಿದೆ.
ಈ ಪ್ರಕರಣದಲ್ಲಿ ಯುಐಡಿಎಐ ಮಾಹಿತಿ ಹಂಚಿಕೊಳ್ಳುವುದಿಲ್ಲ ಎಂಬುದು ವಿಚಾರವಲ್ಲ. ಮೃತ ವ್ಯಕ್ತಿಯ ಗುರುತನ್ನು ಬಹಿರಂಗಪಡಿಸಲು ಆಧಾರ್ ಸಂಖ್ಯೆಯೊಂದಿಗೆ ಬೆರಳಚ್ಚು ಹೊಂದಾಣಿಕೆ ಮಾಡಲು ಸಾಧ್ಯವಾಗುವುದಿಲ್ಲ. ಅರ್ಜಿದಾರರು ಕೋರಿದ ಮಾಹಿತಿಯನ್ನು ಆಧಾರ್ ಪ್ರಾಧಿಕಾರವು ಹಂಚಿಕೊಳ್ಳುವುದಕ್ಕೆ ಅವಕಾಶವಿಲ್ಲ. ಆದ್ದರಿಂದ ಈ ರೀತಿಯ ನಿರ್ದೇಶನ ನೀಡುವುದರಲ್ಲಿ ಅರ್ಥ ಇರುವುದಿಲ್ಲ ಎಂದು ಪೀಠ ಹೇಳಿದೆ.
ಜೊತೆಗೆ, ಅರ್ಜಿದಾರರು ಮೃತ ವ್ಯಕ್ತಿಯ ಗುರುತು ಪತ್ತೆ ಮಾಡಲು ಬೇರೆ ಪ್ರಯತ್ನ ಮಾಡಬಹುದು. ಒಂದೊಮ್ಮೆ ಆಧಾರ್ ಕಾರ್ಡ್ ಲಭ್ಯವಾಗಿಸಿದರೆ, ಅದರ ಬಳಕೆಯ ವಿವರಗಳನ್ನು ಯುಐಡಿಎಐ ಲಭ್ಯವಾಗಿಸಬೇಕು ಎಂದು ಎಂದು ಇದೇ ವೇಳೆ ಪೀಠ ತಿಳಿಸಿದೆ.
ವಿಚಾರಣೆ ವೇಳೆ, ಕೇಂದ್ರ ಸರ್ಕಾರದ ಪರ ವಕೀಲರು, ಯುಐಡಿಎಐ ಅಡಿ ಬಯೋಮೆಟ್ರಿಕ್ ಗುರುತಿನ ವ್ಯವಸ್ಥೆ ಬಳಸಲು ಮೊದಲಿಗೆ ಜೀವಂತ ಬಯೋಮೆಟ್ರಿಕ್ ಮಾಹಿತಿ ವ್ಯವಸ್ಥೆ ಇರಬೇಕು. ಅದರರ್ಥ ಗುರುತು ಪತ್ತೆ ಹಚ್ಚಲು ಬೆರಳಚ್ಚು ಬಳಕೆ ಮಾಡಬೇಕಾದರೆ ವ್ಯಕ್ತಿ ಜೀವಂತವಾಗಿರಬೇಕು. ಯುಐಡಿಎಐ ದತ್ತಾಂಶದಲ್ಲಿ ಮೃತ ವ್ಯಕ್ತಿಯ ಗುರುತು ಪತ್ತೆ ಮಾಡಲು ಆತನ ಬೆರಳಚ್ಚನ್ನು ಬಳಕೆ ಮಾಡಲಾಗದು. ಭದ್ರತೆಯ ವಿಚಾರದ ಭಾಗವಾಗಿ ಗುರುತು ಪತ್ತೆ ಮಾಡಲು ಬೆರಳಚ್ಚು ಮಾತ್ರವಲ್ಲ ಅದನ್ನು ಪತ್ತೆ ಮಾಡಲು ಆ ವ್ಯಕ್ತಿ ಜೀವಂತವಾಗಿರಬೇಕಾಗುತ್ತದೆ ಎಂದು ಪೀಠಕ್ಕೆ ತಿಳಿಸಿದ್ದರು.
ಅಲ್ಲದೇ, ಇಡೀ ದತ್ತಾಂಶದಲ್ಲಿ ಬೆರಳಚ್ಚಿಗೆ ಸಂಬಂಧಿಸಿದಂತೆ ಶೋಧ ಮಾಡಲಾಗದ ರೀತಿಯಲ್ಲಿ ಡೇಟಾಬೇಸ್ ಅನ್ನು ರೂಪಿಸಲಾಗಿದೆ. ಖುದ್ದು ಹಾಜರಾತಿಯ ಮೂಲಕ ಅವರ ಗುರುತು ಪತ್ತೆ ಮಾಡಬಹುದಾಗಿದೆ. ಆಧಾರ್ ಸಂಖ್ಯೆ, ಬೆರಳಚ್ಚು ಅಥವಾ ಬಯೋಮೆಟ್ರಿಕ್ ಮಾಹಿತಿಯ ಮೂಲಕ ಹಾಗೆ ಮಾಡಲಾಗುತ್ತದೆ. ಆದರೆ, ಡೇಟಾಬೇಸ್ ಶೋಧಿಸಲು ಆಧಾರ್ ಸಂಖ್ಯೆ ಅಥವಾ ಬಯೋಮೆಟ್ರಿಕ್ ಮಾಹಿತಿ ಬಳಕೆ ಮಾಡುವುದಕ್ಕೆ ಅವಕಾಶವಿಲ್ಲ ಎಂದು ವಾದ ಮಂಡಿಸಿದ್ದರು.
ಗುರುತಿನ ಮಾಹಿತಿ ನೀಡಬೇಕಿಲ್ಲವಾದ್ದರಿಂದ ಆಧಾರ್ ಕಾರ್ಡ್ ಬಳಕೆಯ ಮಾಹಿತಿಯನ್ನು ನೀಡಬಹುದಾಗಿದೆ. ಹೀಗಾಗಿ, ಭದ್ರತೆ ಮತ್ತು ಗೌಪ್ಯತೆಯ ಕಾರಣದಿಂದಾಗಿ ಮತ್ತು ಆಧಾರ್ ಸಂಖ್ಯೆಯೊಂದಿಗೆ ಬೆರಳಚ್ಚು ಹೊಂದಿಸಲು ಯುಐಡಿಎಐ ನೋಂದಣಿ ಪುಸ್ತಕದಲ್ಲಿ ಹುಡುಕಾಟ ಮಾನದಂಡಗಳು ಲಭ್ಯವಿಲ್ಲ. ಆದ ಕಾರಣ, ಆಧಾರ್ ಸಂಖ್ಯೆ ಲಭ್ಯವಿಲ್ಲದೆ, ಪ್ರತಿವಾದಿಗಳು ಅರ್ಜಿದಾರರ ಕೋರಿಕೆಯನ್ನು ಪ್ರಕ್ರಿಯೆಗೊಳಿಸಲು ಸಾಧ್ಯವಾಗುವುದಿಲ್ಲ ಮತ್ತು ಬೆರಳಚ್ಚು ಆಧರಿಸಿ ಮೃತರನ್ನು ಗುರುತಿಸಲು ಸಾಧ್ಯವಾಗುವುದಿಲ್ಲ ಎಂದು ಪೀಠಕ್ಕೆ ತಿಳಿಸಿದ್ದರು.
ಪ್ರಕರಣದ ಹಿನ್ನೆಲೆ: ನಗರದ ಬ್ಯಾಟರಾಯನಪುರ ಪೊಲೀಸ್ ಠಾಣೆಯ ವ್ಯಾಪ್ತಿಯ ಕಾಲುವೆಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಕೊಲೆ ಪ್ರಕರಣ ದಾಖಲಾಗಿತ್ತು. ಆಕೆಯ ಗುರುತನ್ನು ಪತ್ತೆ ಹಚ್ಚದ ವಿನಾಃ ತನಿಖೆ ಮುಂದುವರೆಸಲು ಕಷ್ಟವಾಗಿತ್ತು. ಹೀಗಾಗಿ, ಠಾಣಾಧಿಕಾರಿಯು ಆಧಾರ್ ದತ್ತಾಂಶದ ಜೊತೆ ಮೃತ ಮಹಿಳೆಯ ಬೆರಳಚ್ಚು ಹೊಂದಿಸುವಂತೆ ಮನವಿ ಸಲ್ಲಿಸಿದ್ದರು. ಹೈಕೋರ್ಟ್ ಆದೇಶ ಮಾಡದ ಹೊರತು ಆಧಾರ್ ಕಾಯಿದೆ ಅಡಿ ಯಾವುದೇ ವಿಚಾರ ಬಹಿರಂಗಪಡಿಸಲಾಗದು ಎಂದು ಯುಐಡಿಎಐ ಮನವಿಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಟರಾಯನಪುರ ಠಾಣಾಧಿಕಾರಿಯು ಹೈಕೋರ್ಟ್ ಮೆಟ್ಟಿಲೇರಿದ್ದರು.



