ಆರಂಭಿಕ ಅಭಿಷೇಕ್ ಶರ್ಮ ಸಿಡಿಸಿದ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ಭಾರತ ತಂಡ ಮೊದಲ ಟಿ-20 ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡಕ್ಕೆ 239 ರನ್ ಗುರಿ ಒಡ್ಡಿದೆ.
ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 238 ರನ್ ಗಳ ಬೃಹತ್ ಮೊತ್ತ ಸಂಪಾದಿಸಿತು.
ಭಾರತ 27 ರನ್ ಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಸಂಜು ಸ್ಯಾಮ್ಸನ್ (10) ಮತ್ತು ದೀರ್ಘ ಸಮಯದ ನಂತರ ಟಿ-20 ತಂಡಕ್ಕೆ ಮರಳಿದ ಇಶಾನ್ ಕಿಶನ್ (8) ಬೇಗನೇ ನಿರ್ಗಮಿಸಿದರು.
ಅಭಿಷೇಕ್ ಶರ್ಮ ಮತ್ತು ನಾಯಕ ಸೂರ್ಯ ಕುಮಾರ್ ಯಾದವ್ 3ನೇ ವಿಕೆಟ್ ಗೆ 99 ರನ್ ಜೊತೆಯಾಟದಿಂದ ತಂಡವನ್ನು ಕುಸಿತದಿಂದ ಪಾರು ಮಾಡಿದರು. ಅಭಿಷೇಕ್ 35 ಎಸೆತಗಳಲ್ಲಿ 5 ಬೌಂಡರಿ ಮತ್ತು 8 ಸಿಕ್ಸರ್ ಒಳಗೊಂಡ 84 ರನ್ ಸಿಡಿಸಿದರೆ, ಸೂರ್ಯಕುಮಾರ್ ಯಾದವ್ 22 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 32 ರನ್ ಗಳಿಸಿದರು.
ಹಾರ್ದಿಕ್ ಪಾಂಡ್ಯ 16 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 25 ರನ್ ಬಾರಿಸಿ ಔಟಾದರೆ, ಶಿವಂ ದುಬೆ (9) ಮತ್ತು ಅಕ್ಸರ್ ಪಟೇಲ್ (5) ನಿರಾಸೆ ಮೂಡಿಸಿದರು. ಆದರೆ ರಿಂಕು ಸಿಂಗ್ ಕೊನೆಯ ಗಳಿಗೆಯಲ್ಲಿ 20 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.
ನ್ಯೂಜಿಲೆಂಡ್ ಪರ ಜೇಕಬ್ ಡಫಿ ಮತ್ತು ಕೇಲ್ ಜೇಮಿನ್ಸನ್ ತಲಾ 2 ವಿಕೆಟ್ ಗಳಿಸಿದರು.



