ಕೇಂದ್ರ ಸರ್ಕಾರಕ್ಕೆ ಮುಜುಗರವಾಗುವ ಭಾಷಣ ಮಾಡಲಾರೆ. ಜಂಟಿ ಅಧಿವೇಶನಕ್ಕೆ ಬರಲ್ಲ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹೇಳಿದ್ದಾರೆ ಎಂಬ ವಿಷಯ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.
ರಾಜ್ಯಪಾಲರು ಭಾಷಣದ 11 ಪ್ಯಾರಗಳನ್ನು ತೆಗೆದುಹಾಕದೇ ಇದ್ದರೆ ನಾನು ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಲು ಬರುವುದಿಲ್ಲ ಎಂದು ಸರ್ಕಾರಕ್ಕೆ ಮೌಖಿಕವಾಗಿ ಎಚ್ಚರಿಕೆ ನೀಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ರಾಜ್ಯದಲ್ಲಿ ಮೊದಲ ಬಾರಿ ಸಾಂವಿಧಾನ ಬಿಕ್ಕಟ್ಟು ಉಲ್ಬಣಿಸುವ ಸಾಧ್ಯತೆ ಇದ್ದು, ಇದನ್ನು ತಪ್ಪಿಸಲು ರಾಜ್ಯ ಸರ್ಕಾರ ಪ್ರಯತ್ನ ನಡೆಸಿದೆ.
ವಿಧಾನಸಭೆ ಹಾಗೂ ವಿಧಾನಪರಿಷತ್ ಮುಖ್ಯಸ್ಥರಾದ ಯುಟಿ ಖಾದರ್ ಮತ್ತು ಬಸವರಾಜ ಹೊರಟ್ಟಿ ಅಲ್ಲದೇ ಸಚಿವ ಹೆಚ್.ಕೆ. ಪಾಟೀಲ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಮನವೊಲಿಸಲು ಪ್ರಯತ್ನಿಸಿದೆ.
ರಾಜ್ಯಪಾಲರು ಪೂರ್ಣ 11 ಪ್ಯಾರಾ ಭಾಷಣ ಕಡಿತ ಮಾಡಲು ಸೂಚಿಸಿದ್ದಾರೆ. ಆದರೆ ರಾಜ್ಯ ಸರ್ಕಾರ ಆಕ್ಷೇಪಾರ್ಹ ಪದಗಳಿದ್ದರೆ ತೆಗೆಯಲು ಸಿದ್ಧ. ಆದರೆ ಯಾವುದೇ ಕಾರಣಕ್ಕೂ ಸರ್ಕಾರದ ನಿಲುವು ಬದಲಿಸಲು ಸಾಧ್ಯವಿಲ್ಲ. ಇದು ನಿಮ್ಮ ಭಾಷಣ ಅಲ್ಲ. ಸರ್ಕಾರದ ಭಾಷಣ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ ಸಾಂವಿಧಾನಿಕವಾಗಿ ವರ್ಷದ ಮೊದಲ ಅಧಿವೇಶನದಲ್ಲಿ ಜಂಟಿ ಸದನವನ್ನು ರಾಜ್ಯಪಾಲರು ಗೈರು ಹಾಜರಾಗುವಂತಿಲ್ಲ ಎಂಬ ನಿಯಮದ ಬಗ್ಗೆ ಮಾಹಿತಿ ನೀಡಿದೆ.
ರಾಜ್ಯಪಾಲರಿಗೆ ಜಂಟಿ ಅಧಿವೇಶನದಲ್ಲಿ ಭಾಗವಹಿಸದೆ ಗೈರು ಹಾಜರಾಗುವ ಅವಕಾಶ ಸಂವಿಧಾನದಲ್ಲಿ ಉಲ್ಲೇಖವಾಗಿಲ್ಲ.
ಸಂವಿಧಾನದ ಆರ್ಟಿಕಲ್ 163, 176 ಹೇಳುವುದೇನು?
ಸಂವಿಧಾನದ ಆರ್ಟಿಕಲ್ 176 ಮತ್ತು 163ರ ಅನ್ವಯ ರಾಜ್ಯಪಾಲರು ಸರ್ಕಾರ ಕರೆದ ವರ್ಷದ ಮೊದಲ ಅಧಿವೇಶನದಲ್ಲಿ ಕಡ್ಡಾಯವಾಗಿ ಭಾಗವಹಿಸಲೇಬೇಕು. ಇದು ಸಂವಿಧಾನ ವಿಧಿಸಿರುವ ನಿಯಮ. ಸರ್ಕಾರದ ತೀರ್ಮಾನವನ್ನು ನಿರಾಕರಿಸಲು ರಾಜ್ಯಪಾಲರಿಗೆ ಅವಕಾಶವಿಲ್ಲ. ಸಂವಿಧಾನದ ಈ ನಿಯಮಾವಳಿಗಳನ್ನು ಪುಷ್ಟೀಕರಿಸುವ ಸುಪ್ರೀಂಕೋರ್ಟ್‌ನ 2 ಪ್ರಮುಖ ತೀರ್ಪುಗಳು ಇಲ್ಲಿವೆ:
ಸುಪ್ರೀಂಕೋರ್ಟ್ ತೀರ್ಪುಗಳೇನು?
ಸಂಶೇರ್ ಸಿಂಗ್ ವರ್‍ಸ್‌ಸ್ ಪಂಜಾಬ್ : 1974ರಲ್ಲಿ ಪಂಜಾಬ್‌ನಲ್ಲಿ ಅಂದಿನ ಸರ್ಕಾರ ಮತ್ತು ರಾಜ್ಯಪಾಲರ ನಡಾವಳಿ ಕುರಿತು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು, ರಾಜ್ಯ ಸರ್ಕಾರದ ಶಿಫಾರಸುಗಳನ್ನು ರಾಜ್ಯಪಾಲರು ಧಿಕ್ಕರಿಸುವಂತಿಲ್ಲ. ಸಂವಿಧಾನದ ಆರ್ಟಿಕಲ್ 163ರ ಪ್ರಕಾರ ರಾಜ್ಯಪಾಲರು ಅಧಿವೇಶನಕ್ಕೆ ಗೈರಾಗಲು ಅವಕಾಶವಿಲ್ಲ ಮತ್ತು ಇವರು ಈ ದಿಶೆಯಲ್ಲಿ ಸ್ವತಂತ್ರರಲ್ಲ ಶಲ್ ಬೌಂಡ್ ಬೈ ದಿ ರೆಕಮೆಂಡೇಷನ್ ಆಫ್ ದಿ ಕೌನ್ಸಿಲ್ ಆಫ್ ಮಿನಿಷ್ಟ್ರಿ . . ಎಂಬ ವ್ಯಾಖ್ಯಾನವನ್ನು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಅರುಣಾಚಲಪ್ರದೇಶ ವರ್ಸಸ್ ಡೆಪ್ಯುಟಿ ಸ್ಪೀಕರ್ ಪ್ರಕರಣದಲ್ಲಿಯೂ ಸುಪ್ರೀಂಕೋರ್ಟ್ ಸಂವಿಧಾನದ ಆರ್ಟಿಕಲ್ 176 ಅನ್ನು ಉಲ್ಲೇಖಿಸಿ ರಾಜ್ಯಪಾಲರು ಸರ್ಕಾರ ಶಿಫಾರಸುಗಳ ಪ್ರಕಾರ ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ನಿರ್ವಹಿಸಬೇಕಿದೆ ಎಂದು ತೀರ್ಪು ನೀಡಿದೆ.
ರಾಜ್ಯಪಾಲರ ಮುಂದಿರುವ ಆಯ್ಕೆ: ರಾಜ್ಯ ಸರ್ಕಾರವೀಗ ಗುರುವಾರದಂದು ಕರೆದಿರುವ ಜಂಟಿ ಅಧಿವೇಶನದಲ್ಲಿ ಭಾಗವಹಿಸಬಹುದು. ಹೀಗಾದರೆ ಸಂವಿಧಾನದ ನಿಯಮಾವಳಿಗೆ ಭಂಗವಾಗದು ಮತ್ತು ಸರ್ಕಾರ ಸಿದ್ದಪಡಿಸಿರುವ ಭಾಷಣವನ್ನು ರಾಜ್ಯಪಾಲರು ಓದದೆ ಸುಮ್ಮನಾಗಬಹುದು. ರಾಜ್ಯಪಾಲರು ಗೈರಾದರೆ ಸರ್ಕಾರದ ಮುಂದಿರುವ ಆಯ್ಕೆ: ರಾಜ್ಯಪಾಲರ ಗೈರನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಅವಕಾಶವಿದೆ. ಇದಕ್ಕೂ ಮುನ್ನ ಸರ್ಕಾರದ ಈಗಿನ ಅಜೆಂಡಾ ಪ್ರಕಾರ ಜಂಟಿ ಅಧಿವೇಶನ ನಡೆಯಲಿದೆ.
ಒಟ್ಟಿನಲ್ಲಿ ಗುರುವಾರದಂದು ರಾಜ್ಯಪಾಲರು ಶಾಸನಸಭೆಗೆ ಖುದ್ದು ಹಾಜರಾಗುವರೇ ಇಲ್ಲವೇ ಎಂಬುದರ ಮೇಲೆ ಸರ್ಕಾರದ ಮುಂದಿನ ಕೂನೂನು ಕ್ರಮಗಳು ಆರಂಭವಾಗಲಿವೆ. ಏಕಂದರೆ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಕಾರಣ (ಕಾಸ್ ಆಫ್ ಆಕ್ಷನ್) ಇನ್ನೂ ತಲೆದೋರಿಲ್ಲ.



