ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ದೇಶದಲ್ಲಿ ಅತೀ ಹೆಚ್ಚು ಬಳಸಲ್ಪಡುವ ಹಾಲು ಉತ್ಪನ್ನಗಳಾದ ಹಾಲು ಮತ್ತು ಪನೀರ್ ಕಲಬೆರಕೆ ಮಾಡುತ್ತಿದ್ದ ಜಾಲಗಳನ್ನು ವಿವಿಧ ರಾಜ್ಯಗಳಲ್ಲಿ ಭೇದಿಸಲಾಗಿದೆ.
ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ದಾಳಿ ನಡೆಸಿರುವ ಆಹಾರ ಸುರಕ್ಷತಾ ತಂಡಗಳು ಭಾರೀ ಪ್ರಮಾಣದಲ್ಲಿ ಕಲಬೆರಕೆಯ ಹಾಲು ಮತ್ತು ಪನೀರ್ ಉತ್ಪನ್ನಗಳನ್ನು ಪತ್ತೆ ಹಚ್ಚಿದ್ದಾರೆ.
ದೆಹಲಿ ಸಮೀಪದ ಆಗ್ರಾದಲ್ಲಿ ಆಹಾರ ಸುರಕ್ಷತಾ ತಂಡ ದಾಳಿ ಮಾಡಿ 800 ಕೆಜಿ ತೂಕದ ನಕಲಿ ಪನೀರ್ ವಶಪಡಿಸಿಕೊಂಡಿದ್ದಾರೆ.
ನಕಲಿ ಪನೀರ್ ಮಾರಾಟದ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ವಾಹನ ತಡೆದು ಪರಿಶೀಲಿಸಿದಾಗ 8 ಕ್ವಿಂಟಲ್ ಕಳಪೆ ಪನೀರ್ ವಶಪಡಿಸಿಕೊಂಡಿದ್ದಾರೆ. ಆಹಾರ ಗುಣಮಟ್ಟ ತಿರಸ್ಕೃತಗೊಂಡ ಪನೀರ್ ಇದಾಗಿದೆ ಎಂದು ಚಾಲಕ ಒಪ್ಪಿಕೊಂಡಿದ್ದಾನೆ.
ವಶಪಡಿಸಿಕೊಂಡ ಪನೀರ್ ಪರಿಶೀಲಿಸಿದಾಗ ಕಳಪೆ ಗುಣಮಟ್ಟ ಹಾಗೂ ಅಸುರಕ್ಷಿತ ಎಂದು ದೃಢಪಟ್ಟಿದ್ದು, ಪ್ರಕರಣ ದಾಖಲಿಸಿಕೊಂಡು ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಇದೇ ವೇಳೆ ಉತ್ತರ ಪ್ರದೇಶದ ಆಹಾರ ಸುರಕ್ಷತಾ ಪಡೆ ದಾಳಿ ನಡೆಸಿ ಸಹರನ್ ಪುರದಲ್ಲಿ ಕಳಪೆ ಗುಣಮಟ್ಟದ 700 ಕೆಜಿ ಪನೀರ್ ಹಾಗೂ 450 ಲೀಟರ್ ಹಾಲನ್ನು ವಶಕ್ಕೆ ಪಡೆದಿದ್ದೂ ಅಲ್ಲದೇ ನಾಶಪಡಿಸಿದ್ದಾರೆ.
ಜಾರ್ಖಂಡ್ ನ ಧನ್ ಬಾದ್ ಮತ್ತು ರಾಮ್ ಘಡ್ ದಾಳಿ ಭಾರೀ ಪ್ರಮಾಣದ ಕಳಪೆ ಪನೀರ್ ಮತ್ತು ಹಾಲನ್ನು ವಶಪಡಿಸಿಕೊಳ್ಳಲಾಗಿದೆ.
ಜಾರ್ಖಂಡ್ ನಲ್ಲಿ ಲಾರಿಯಲ್ಲಿ ಸಾಗಿಸುತ್ತಿದ್ದ ಕಲಬೆರಕೆಯ ಹಾಲು ಮಾರಾಟದ ಜಾಲ ಕೂಡ ಭೇದಿಸಲಾಗಿದ್ದು, ಆರೋಪಿಗಳನ್ನು ಬಂಧಿಸಿ, ಹಾಲು ಹಾಗೂ ಪನೀರ್ ನಾಶಪಡಿಸಲಾಗಿದ್ದು, ಇವುಗಳ ಮಾದರಿಯನ್ನು ಲ್ಯಾಬ್ ಗೆ ಕಳುಹಿಸಿಕೊಡಲಾಗಿದೆ.
ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಸಿಹಿತಿನಿಸು ತಯಾರಕರು ಸೇರಿದಂತೆ ವಿವಿಧೆಡೆಯಿಂದ ಪನೀರ್ ಹಾಗೂ ಹಾಲಿಗೆ ಅಪಾರ ಬೇಡಿಕೆ ಇರುತ್ತದೆ. ಬೇಡಿಕೆ ಈಡೇರಿಸುವ ಜೊತೆಗೆ ಖರ್ಚು ಮಾಡಿದ ಲಾಭ ಗಳಿಸುವ ಉದ್ದೇಶದಿಂದ ಕಳಪೆ ಗುಣಮಟ್ಟದ ಹಾಲು ಹಾಗೂ ಪನೀರ್ ಮಾರಾಟ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



