ಉದ್ಯಮಿಯನ್ನು ಬೆದರಿಸಿ 2 ಕೋಟಿ ರೂ. ದೋಚಿದ್ದ ದರೋಡೆ ಪ್ರಕರಣವನ್ನು ಭೇದಿಸಿರುವ ಬೆಂಗಳೂರಿನ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಉಳಿದವರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.
ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಮಾಡಿದ್ದ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದ್ದು, 15 ಲಕ್ಷ ರೂ. ಹಣ ವಶಕ್ಕೆ ಪಡೆಯಲಾಗಿದೆ.
ಕ್ರಿಸ್ಪೊಕರೆನ್ಸಿಯಾಗಿ ಹಣ ಬದಲು ಮಾಡಲು ಉದ್ಯಮಿ ಹರ್ಷ ಪ್ರಯತ್ನ ನಡೆಸುತ್ತಿದ್ದಾಗ ಅವರ ಮೇಲೆ ದಾಳಿ ಮಾಡಿದ್ದ ಆರೋಪಿಗಳು 2 ಕೋಟಿ ದರೋಡೆ ಪ್ರಕರಣದ ಹಿಂದೆ ದೊಡ್ಡ ಜಾಲದ ಕೈವಾಡವಿದ್ದು, ಮನಿ ಟ್ರೇಡಿಂಗ್ ಹೆಸರಲ್ಲಿ ಹಣಕಾಸು ವ್ಯವಹಾರ ನಡೆಸುತ್ತಿರುವ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಎರಡು ವಿಶೇಷ ತಂಡ ರಚನೆ ಮಾಡಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಟ್ರೇಡಿಂಗ್ ನಲ್ಲಿ ಹಣ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸುವ ಪ್ಲಾನ್ ಇರುವುದು ಗೊತ್ತಾಗಿದೆ. ಇದರ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಉದ್ಯಮಿ ಹರ್ಷನ ಬಳಿ 2 ಕೋಟಿ ರೂ. ಹೇಗೆ ಯಾರಿಂದ ಬಂದಿದೆ, ದಾಖಲೆಗಳು ಇವೆಯಾ ಎಂಬ ತನಿಖೆ ಕೈಗೊಳ್ಳಲಾಗಿದೆ.
ಬುಧವಾರ ಸಂಜೆ ವಿದ್ಯಾರಣ್ಯಪುರ ಬಳಿಯ ಎಂಎಸ್ ಪಾಳ್ಯದಲ್ಲಿ ಹಣವನ್ನು ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸಲು ಯತ್ನಿಸುತ್ತಿದ್ದ ಉದ್ಯಮಿ ಹರ್ಷ ಅವರ ಮೇಲೆ 7 ಜನರ ಗುಂಪು ದಾಳಿ ಮಾಡಿ 2 ಕೋಟಿ ರೂ. ದೋಚಿದೆ ಎಂದು ವರದಿಯಾಗಿತ್ತು.



