Monday, July 20, 2026
Google search engine
Homeವಿಶೇಷಬುಲೆಟ್‌ ಟ್ರೈನ್‌ ಉತ್ತಮವೋ? ಹೈಡ್ರೋಜನ್‌ ರೈಲು ಶ್ರೇಷ್ಠವೋ? ಇಲ್ಲಿದೆ ಪೂರ್ಣ ವಿಮರ್ಶೆ

ಬುಲೆಟ್‌ ಟ್ರೈನ್‌ ಉತ್ತಮವೋ? ಹೈಡ್ರೋಜನ್‌ ರೈಲು ಶ್ರೇಷ್ಠವೋ? ಇಲ್ಲಿದೆ ಪೂರ್ಣ ವಿಮರ್ಶೆ

ವಿಶ್ವದ ಅತೀ ದೊಡ್ಡ ರೈಲು ಸಂಪರ್ಕ ಹೊಂದಿರುವ ದೇಶಗಳಲ್ಲಿ ಒಂದಾಗಿರುವ ಭಾರತದಲ್ಲಿ ರೈಲ್ವೇ ಕ್ರಾಂತಿ ಆರಂಭವಾಗಿದೆ. ಹಳೆಯ ಕಾಲದ ರೈಲುಗಳು ಮೂಲೆ ಸೇರುತ್ತಿದ್ದು, ಅತ್ಯಾಧುನಿಕ ಹಾಗೂ ತಂತ್ರಜ್ಞಾನ ಆಧರಿತ ರೈಲುಗಳು ಓಡಲು ಆರಂಭಿಸಿವೆ. ವಂದೇ ಭಾರತ್‌ ರೈಲುಗಳ ನಂತರ ಇದೀಗ ಭಾರತದಲ್ಲಿ ಮೊದಲ ಹೈಡ್ರೋಜನ್‌ ರೈಲು ಓಡಲು ಕಾಲ ಕೂಡಿ ಬಂದಿದೆ. ಇದರ ಬೆನ್ನಲ್ಲೇ ಹಲವು ವರ್ಷಗಳಿಂದ ಕಾತರದಿಂದ ನಿರೀಕ್ಷಿಸಲಾಗುತ್ತಿದ್ದ ಬುಲೆಟ್‌ ರೈಲು ಟ್ರ್ಯಾಕ್‌ ಗೆ ಇಳಿಯಲು ಸಜ್ಜಾಗಿದೆ.

ಹಾಗಾದರೆ ಬುಲೆಟ್‌ ರೈಲು ಮತ್ತು ಹೈಡ್ರೋಜನ್‌ ರೈಲುಗಳ ನಡುವಿನ ವ್ಯಾತ್ಯಾಸವೇನು? ತಂತ್ರಜ್ಞಾನದಲ್ಲಿ ಎರಡೂ ಹೇಗೆ ಭಿನ್ನವಾಗಿವೆ. ಟಿಕೆಟ್‌ ದರ ಎಷ್ಟಿರುತ್ತದೆ? ಮುಂತಾದ ವಿಷಯಗಳ ಬಗ್ಗೆ ಇಲ್ಲಿ ಚರ್ಚೆ ಮಾಡೋಣ.

1964ರಲ್ಲಿ ಜಪಾನ್‌ ಮೊದಲ ಬಾರಿ ಬುಲೆಟ್‌ ಟ್ರೈನ್‌ ಅನ್ನು ಜಗತ್ತಿಗೆ ಪರಿಚಯಿಸಿತು. ಆದರೆ ಇವತ್ತು ಅತೀ ಹೆಚ್ಚು ಬುಲೆಟ್‌ ರೈಲುಗಳು ಓಡುತ್ತಿರುವುದು ಚೀನಾದಲ್ಲಿ. 62 ವರ್ಷಗಳ ನಂತರ ಅಂದರೆ 2026ರ ಮಧ್ಯಭಾಗದಲ್ಲಿ ಭಾರತದಲ್ಲಿ ಮೊದಲ ಬುಲಟ್‌ ರೈಲು ಓಡಲು ಸಜ್ಜಾಗಿದೆ. ಮತ್ತೊಂದೆಡೆ 2018ರಲ್ಲಿ ಹೈಡ್ರೋಜನ್‌ ರೈಲುಗಳನ್ನು ಜಗತ್ತಿಗೆ ಮೊದಲ ಬಾರಿ ಪರಿಚಯಿಸಿದ ಜರ್ಮನಿ ಹೊಸ ಕ್ರಾಂತಿಗೆ ಮುನ್ನುಡಿ ಬರೆಯಿತು. ಅತ್ಯಂತ ಕಡಿಮೆ ಅವಧಿಯಲ್ಲಿ ಅಂದರೆ 8 ವರ್ಷಗಳಲ್ಲೇ ಭಾರತದಲ್ಲಿ ಅದರಲ್ಲೂ ಸ್ವದೇಶೀ ನಿರ್ಮಿತ ಹೈಡ್ರೋಜನ್‌ ರೈಲು ಓಡಲು ಗ್ರೀನ್‌ ಸಿಗ್ನಲ್‌ ಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿ ಜುಲೈ 17, 2026ರಂದು ಹರಿಯಾಣದ ಜಿಂದ್‌ ಮತ್ತು ಸೋನಿಪೇಟ್‌ ನಡುವಿನ 89 ಕಿ.ಮೀ. ದೂರದವರೆಗೆ ಹೈಡ್ರೋಜನ್‌ ರೈಲು ಸಂಚರಿಸಲು ಹಸಿರು ನಿಶಾನೆ ತೋರಿದ್ದಾರೆ. ಹಲವು ವರ್ಷಗಳ ಪ್ರಯೋಗದ ನಂತರ ಸ್ವದೇಶದಲ್ಲಿ ನಿರ್ಮಾಣವಾದ ಈ ಹೈಡ್ರೋಜನ್‌ ರೈಲು ಪ್ರಾಯೋಗಿಕವಾಗಿ ಸಂಚರಿಸಲಿದ್ದು, ಇದರ ಯಶಸ್ಸನ್ನು ಆಧರಿಸಿ ದೇಶದ ನಾನಾ ಕಡೆ ಹಂತ ಹಂತವಾಗಿ ಚಾಲನೆ ಸಿಗಲಿದೆ.

ಭಾರತದಲ್ಲಿ ಮೊದಲ ಬಾರಿ ಸಂಚರಿಸಲು ಸಜ್ಜಾಗಿರು ಅತ್ಯಾಧುನಿಕ ಹಾಗೂ ತಂತ್ರಜ್ಞಾನ ಆಧರಿತ ಬುಲೆಟ್‌ ರೈಲು ಹಾಗೂ ಹೈಡ್ರೋಜನ್‌ ರೈಲುಗಳ ನಡುವೆ ಇರುವ ವ್ಯತ್ಯಾಸದ ಕುರಿತು ತಿಳಿಯೋಣ ಬನ್ನಿ..

ಮೊದಲ ವ್ಯತ್ಯಾಸ ಏನಪ್ಪಾ ಅಂದರೆ?

ಪಿಸ್ತೂಲ್‌ ನಿಂದ ಸಿಡಿದ ಬುಲೆಟ್‌ ಎಷ್ಟು ವೇಗವಾಗಿ ಹೋಗುತ್ತದೆಯೋ ಅಷ್ಟು ವೇಗವಾಗಿ ರೈಲು ಚಲಿಸುತ್ತದೆ ಎಂಬುದನ್ನು ತೋರಿಸಲು ಬುಲೆಟ್‌ ಟ್ರೈನ್‌ ಎಂದು ಹೆಸರಿಡಲಾಯಿತು. ಹೆಸರಿನಂತೆ ಇದು ಗಂಟೆಗೆ 250ರಿಂದ 500 ಕಿ.ಮೀ. ವೇಗದಲ್ಲಿ ಸಂಚರಿಸುತ್ತದೆ. ಅಂದರೆ ವಿಮಾನಕ್ಕೆ ಸರಿಸಮನಾದ ವೇಗದಲ್ಲಿ ಬುಲೆಟ್‌ ರೈಲು ಸಂಚರಿಸುತ್ತದೆ. ಉದಾಹರಣೆಗೆ ಬೆಂಗಳೂರಿನಿಂದ ಹೈದರಾಬಾದ್‌ ಗೆ ಕೇವಲ 2 ಗಂಟೆಯಲ್ಲಿ ಪ್ರಯಾಣಿಸಬಹುದು. ಈಗಿರುವ ರೈಲು ಮತ್ತು ಬಸ್‌ ಗಳಲ್ಲಿ ಹೋಗಬೇಕಾದರೆ ಕನಿಷ್ಠ 8 ಗಂಟೆ ಬೇಕು. ಇದರಿಂದ ಪ್ರಯಾಣಿಕರು ದೂರದ ಊರುಗಳಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ತಲುಪಬಹುದು.

ಬುಲೆಟ್‌ ಟ್ರೈನ್‌ ಗೆ ಹೋಲಿಸಿದರೆ ಹೈಡ್ರೋಜನ್‌ ರೈಲು ತುಂಬಾ ನಿಧಾನ. ಅಂದರೆ ಗಂಟೆಗೆ 75 ಕಿ.ಮೀ.ನಿಂದ ಗರಿಷ್ಠ 140 ಕಿ.ಮೀ.ವರೆಗೆ ಸಂಚರಿಸಬಲ್ಲದು. ಅಂದರೆ ಈಗ ನಾವು ಪ್ರಯಾಣಿಸುತ್ತಿರುವ ಸಾಮಾನ್ಯ ಎಕ್ಸ್‌ ಪ್ರೆಸ್‌, ಸೂಪರ್‌ ಫಾಸ್ಟ್‌ ರೈಲುಗಳಲ್ಲಿ ಸಂಚರಿಸಿದಷ್ಟೇ ವೇಗವಾಗಿ ಹೈಡ್ರೋಜನ್‌ ರೈಲುಗಳು ಕೂಡ ಸಂಚರಿಸುತ್ತವೆ. ಆದರೆ ಪ್ರಮುಖ ವ್ಯಾತ್ಯಾಸ ಅಂದರೆ ಇದು ಹೊಗೆ ಉಗುಳಲ್ಲ. ಪೆಟ್ರೋಲ್‌, ಡೀಸೆಲ್‌, ಕಲ್ಲಿದ್ದಲ್ಲು ಮುಂತಾದ ಯಾವುದೇ ಜೈವಿಕ ಇಂಧನಗಳ ಅಗತ್ಯ ಇದಕ್ಕೆ ಇರುವುದಿಲ್ಲ.

ಎರಡನೇ ವ್ಯಾತ್ಯಾಸ ಏನೆಂದರೆ?

ಬುಲೆಟ್‌ ರೈಲು ವಿದ್ಯುತ್‌ ಪೂರೈಕೆಯ ಆಧಾರದ ಮೇಲೆ ಸಂಚರಿಸುತ್ತದೆ. ನೀವು ನೋಡಿರುತ್ತಿರಾ? ರೈಲ್ವೆ ಟ್ರ್ಯಾಕ್‌ ಅಕ್ಕಪಕ್ಕದಲ್ಲಿ ದೊಡ್ಡ ದೊಡ್ಡ ಇಂಟರ್ನೆಟ್‌ ಅಥವಾ ಕರೆಂಟ್‌ ತಂತಿಗಳು ಇರುತ್ತವೆ. ಬುಲೆಟ್‌ ರೈಲಿನ ಮೇಲ್ಭಾಗದಲ್ಲಿ ಕೋಡು ಇರುವ ರೀತಿಯಲ್ಲಿ ಕಂಬಿಗಳು ಇರುತ್ತವೆ. ಇದರನ್ನು ಓವರ್‌ ಹೆಡ್‌ ಕೇಬಲ್‌ ಎಂದು ಕರೆಯಲಾಗುತ್ತದೆ. ಈ ಕರೆಂಟ್‌ ತಂತಿಗಳನ್ನು ನಿರಂತರವಾಗಿ ಸಂಪರ್ಕಿಸುತ್ತಾ ಅದರಿಂದ ವಿದ್ಯುತ್‌ ಪಡೆಯುತ್ತಾ ಸಂಚರಿಸುತ್ತಿರುತ್ತದೆ.

ಆದರೆ ಹೈಡ್ರೋಜನ್ ಟ್ರೈನ್‌ಗೆ ಇಂತಹ ಯಾವುದೇ ವೈರ್‌ಗಳ ಅಗತ್ಯ ಇಲ್ಲ! ಇದರ ಒಳಗೆ ಹೈಡ್ರೋಜನ್ ಫ್ಯುಯೆಲ್ ಸೆಲ್ ಇರುತ್ತೆ. ಈ ರೈಲಿನಲ್ಲಿ ಹೈಡ್ರೋಜನ್ ಮತ್ತು ಗಾಳಿಯಲ್ಲಿರೋ ಆಮ್ಲಜನಕ ಅಂದರೆ ಆಕ್ಸಿಜನ್‌ ಒಟ್ಟಿಗೆ ಸೇರಿ ಕೆಮಿಕಲ್ ರಿಯಾಕ್ಷನ್ ಆಗಿ, ರೈಲಿನ ಒಳಗಡೆಯೇ ಕರೆಂಟ್ ಉತ್ಪಾದನೆ ಆಗುತ್ತೆ! ಈ ಕರೆಂಟ್ ನಿಂದಲೇ ರೈಲು ಓಡುತ್ತದೆ. ಒಂಥರಾ ಪವರ್ ಬ್ಯಾಂಕ್ ನಿಂದ ಚಾರ್ಜ್‌ ಮಾಡಿಕೊಂಡು ಓಡಾಡುತ್ತಿರುವಂತೆ. ಆದರೆ ಗಾಳಿಯಲ್ಲಿರುವ ಈ ಆಮ್ಲಜನಕ ಸಹಾಯದಿಂದ ಓಡುವ ಹೈಡ್ರೋಜನ್‌ ರೈಲುಗಳು ಶಬ್ಧ ಮಾಡುವುದಿಲ್ಲ. ಹೊಗೆ ಉಗುಳುವುದಿಲ್ಲ. ಬದಲಿಗೆ ನೀರು ಹೊರಗೆ ಹಾಕುತ್ತಾ ಓಡುತ್ತಿರುತ್ತದೆ.

ಮೂರನೇ ವ್ಯಾತ್ಯಾಸ ಅಂದರೆ

ಬುಲೆಟ್‌ ರೈಲಿಗೆ ನಿರಂತರವಾಗಿ ವಿದ್ಯುತ್‌ ಸಂಪರ್ಕ ಇರಬೇಕಾಗುತ್ತದೆ. ಇದಕ್ಕಾಗಿ ಕಲ್ಲಿದ್ದಲ್ಲು ಅಥವ ಡೀಸೆಲ್‌ ಬಳಸಿ ಸಂಗ್ರಹಿಸಲಾದ ವಿದ್ಯುತ್‌ ಬಳಸಲಾಗುತ್ತದೆ. ಸೋಲಾರ್‌ ಅಂತಹ ಪರಿಸರ ಸ್ನೇಹಿ ವಿದ್ಯುತ್‌ ಬಳಸುವುದಿಲ್ಲ. ಹಾಗಾಗಿ ಪರೋಕ್ಷವಾಗಿ ಮಾಲಿನ್ಯಕ್ಕೆ ಕಾರಣ ಎಂದೇ ಹೇಳಬಹುದು.

ಆದರೆ ಹೈಡ್ರೋಜನ್ ಟ್ರೈನ್ ಶೇ.೧೦೦ರಷ್ಟು ಪರಿಸರ ಸ್ನೇಹಿ. ಈ ರೈಲು ಚಲಿಸುವಾಗ ಸೈಲೆನ್ಸರ್‌ನಿಂದ ಕರಗಿದ ವಿಷಕಾರಿ ಹೊಗೆ ಹೊರಗೆ ಹಾಕುವುದಿಲ್ಲ. ಬದಲಿಗೆ ಕೇವಲ ಶುದ್ಧ ನೀರಿನ ಹಬೆ ಮತ್ತು ಬಿಸಿ ಗಾಳಿ ಮಾತ್ರ ಹೊರ ಹಾಕುತ್ತೆ. ಹೈಡ್ರೋಜನ್‌ ರೈಲಿನಿಂದ ಪರಿಸರಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಅಲ್ಲದೇ ಇದರ ನಿರ್ವಹಣೆ ವೆಚ್ಚವೂ ಕಡಿಮೆ.

4ನೇ ವ್ಯಾತ್ಯಾಸ ಅಂದರೆ ತಗಲುವ ವೆಚ್ಚ ಹಾಗೂ ಹಳಿಗಳ ವ್ಯತ್ಯಾಸ

ಬುಲೆಟ್ ಟ್ರೈನ್ ಓಡಿಸೋಕೆ ಸಾಮಾನ್ಯ ಹಳಿಗಳು ಸಾಲಲ್ಲ. ಅದಕ್ಕೆ ಅಂತಾನೇ ಕಂಪ್ಲೀಟ್ ಸ್ಟ್ರೇಟ್ ಆಗಿರೋ, ಅತ್ಯಾಧುನಿಕ ವಿಶೇಷ ಟ್ರ್ಯಾಕ್‌ಗಳನ್ನು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಹೊಸದಾಗಿ ನಿರ್ಮಿಸಬೇಕು. ದೇಶದಲ್ಲಿರುವ ರೈಲುಗಳ ಹಳಿಗಳು ಬುಲೆಟ್‌ ರೈಲುಗಳಿಗೆ ಸೂಕ್ತವಲ್ಲ. ಹಾಗಾಗಿ ಪ್ರತ್ಯೇಕ ಟ್ರ್ಯಾಕ್‌ ನಿರ್ಮಿಸಲಾಗುತ್ತದೆ. ಇದರಿಂದ ಕೋಟ್ಯಾಂತರ ರೂಪಾಯಿ ವೆಚ್ಚವಾಗುತ್ತದೆ. ಅಲ್ಲದೇ ನಿರಂತರ ವಿದ್ಯುತ್‌ ಪೂರೈಕೆ ಮಾಡಬೇಕಾಗಿರುವುದರಿಂದ ಇದು ಕೂಡ ದುಬಾರಿ ಆಗಲಿದೆ.

ಆದರೆ ಹೈಡ್ರೋಜನ್ ಟ್ರೈನ್‌ನ ದೊಡ್ಡ ಇಂತಹ ಯಾವುದೇ ಸಮಸ್ಯೆ ಇರುವುದಿಲ್ಲ. ಆದ್ದರಿಂದ ಬುಲೆಟ್‌ ರೈಲಿಗೆ ಹೋಲಿಸಿದರೆ ಹೈಡ್ರೋಜನ್‌ ಟ್ರೈನ್‌ ಉತ್ತಮ ಎಂದು ಹೇಳಬಹುದು.
ಹೈಡ್ರೋಜನ್‌ ರೈಲುಗಳು ಓಡಲು ಹೊಸ ಹಳಿಗಳ ಅಗತ್ಯವಿಲ್ಲ. ಈಗ ನಮ್ಮ ದೇಶದಲ್ಲಿರೋ ಸಾಮಾನ್ಯ ಹಳಿಗಳ ಮೇಲೆಯೇ ಈ ರೈಲು ಓಡಿಸಬಹುದು. ಅಲ್ಲದೇ ಇದರ ನಿರ್ವಹಣೆ

ಎಲ್ಲೆಲ್ಲಿ ಇನ್ನು ಕರೆಂಟ್ ಲೈನ್‌ಗಳು ಇಲ್ಲವೋ, ಅಂತಹ ಹಳ್ಳಿ ಅಥವಾ ಕಾಡಿನ ಪ್ರದೇಶದ ಹಳಿಗಳಲ್ಲಿ ಡೀಸೆಲ್ ಇಂಜಿನ್ ತೆಗೆದು ಈ ಹೈಡ್ರೋಜನ್ ಇಂಜಿನ್ ಸುಲಭವಾಗಿ ಬಳಸಬಹುದು.

5ನೇ ಹಾಗೂ ಪ್ರಮುಖ ವ್ಯತ್ಯಾಸ ಅಂದರೆ

ಬುಲೆಟ್‌ ರೈಲು‌ ಹಾಗೂ ಟ್ರ್ಯಾಕ್ ನಿರ್ಮಾಣ ಹಾಗೂ ನಿರ್ವಹಣಾ ವೆಚ್ಚ ದುಬಾರಿ ಆಗಿರುವುದರಿಂದ ಪ್ರಯಾಣಿಕರ ಮೇಲೆ ಹೊರೆ ಬೀಳಲಿದೆ. ಬುಲೆಟ್‌ ರೈಲಿನ ದರ ಸಾಮಾನ್ಯವಾಗಿ ಅತ್ಯಂತ ದುಬಾರಿ ಎನ್ನಲಾಗುವ ವಿಮಾನ ದರದಷ್ಟೇ ಇರುತ್ತದೆ. ಇದರಿಂದ ಉದ್ಯಮಿಗಳು, ತುರ್ತು ಪ್ರಯಾಣದ ಅಗತ್ಯ ಇರುವವರು ಮತ್ತು ಶ್ರೀಮಂತರು ಮಾತ್ರ ಈ ರೈಲಿನಲ್ಲಿ ಪ್ರಯಾಣಿಸಬಹುದು.

ಆದರೆ ಹೈಡ್ರೋಜನ್ ಟ್ರೈನ್ ಗೆ ಮೂಲಸೌಕರ್ಯಕ್ಕೆ ಹೆಚ್ಚು ಖರ್ಚಾಗಲ್ಲ. ಆರಂಭದಲ್ಲಿ ಹೈಡ್ರೋಜನ್ ಇಂಧನ ತುಟ್ಟಿಯಾದರೂ, ಮುಂದಿನ ದಿನಗಳಲ್ಲಿ ಡೀಸೆಲ್‌ಗಿಂತಲೂ ಇದು ಅಗ್ಗವಾಗಲಿದೆ. ಸಾಮಾನ್ಯ ಜನರಿಗೂ ಇದು ಕೈಗೆಟುಕುವ ದರದಲ್ಲಿ ಪ್ರಯಾಣಿಸಬಹುದಾಗಿದೆ. ಬಡ ಹಾಗೂ ಮಧ್ಯಮ ವರ್ಗದ ಜನರು ಈ ರೈಲಿಗೆ ಆದ್ಯತೆ ನೀಡಬಹುದು.

ಒಟ್ಟಾರೆ ಹೇಳುವುದಾದರೆ ತಡವಾಗಿಯಾದರೂ ಭಾರತದ ರೈಲ್ವೇಯಲ್ಲಿ ಬದಲಾವಣೆ ಆಗುತ್ತಿವೆ. ಕಡಿಮೆ ಸಮಯದಲ್ಲಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಹೋಗುವುದು ಅಗತ್ಯವಾದರೆ ದುಬಾರಿ ದರ ಭಾರತೀಯರಿಗೆ ಕೈಗೆಟಕುವುದೇ ಎಂಬುದು ಪ್ರಶ್ನೆಯಾಗಿದೆ. ಮತ್ತೊಂದೆಡೆ ಹೆಚ್ಚಾಗುತ್ತಿರುವ ಮಾಲಿನ್ಯ ನಿಯಂತ್ರಣಕ್ಕೆ ಹೈಡ್ರೋಜನ್‌ ರೈಲುಗಳ ಅಗತ್ಯ ಭಾರತಕ್ಕೆ ಹೆಚ್ಚಿದೆ.

ಪರಿಸರ ಸ್ನೇಹಿ ಹಾಗೂ ಪ್ರಯಾಣಿಕರಿಗೆ ಹೊರೆ ಆಗುವುದಿಲ್ಲ ಎಂಬುದು ಬಿಟ್ಟರೆ ಈಗಿರುವ ರೈಲುಗಳಿಗೆ ಹೋಲಿಸಿದರೆ ಹೆಚ್ಚಿನ ವ್ಯಾತ್ಯಾಸವಿಲ್ಲ. ದೇಶಕ್ಕೆ ಎರಡೂ ಭಿನ್ನ ಮಾದರಿಯ ರೈಲುಗಳು ಅಗತ್ಯವಿದೆ. ವೇಗದ ರೈಲು ಬೇಕೋ ಅಥವಾ ಪರಿಸರ ಸ್ನೇಹಿ ರೈಲುಗಳು ಬೇಕೋ ಎಂಬುದನ್ನು ಜನರು ಮುಂದಿನ ದಿನಗಳಲ್ಲಿ ನಿರ್ಧರಿಸಲಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ತಿಳಿಸಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments