ಎಲ್ಲರೂ ನಿವೃತ್ತಿ ಅಂದರೆ ವಿಶ್ರಾಂತಿ ಜೀವನ ಎಂದೇ ಭಾವಿಸುತ್ತಾರೆ. ಆದರೆ ಇಲ್ಲೊಬ್ಬ ಉದ್ಯಮಿಯೊಬ್ಬರು ನಿವೃತ್ತಿ ವಯಸ್ಸಿನಲ್ಲಿ ಉದ್ಯಮಕ್ಕೆ ಗುಡ್ ಬೈ ಹೇಳಿದ ನಂತರ ಪರಿಸರದ ಕರೆಗೆ ಓಗೊಟ್ಟು ಈಗ ಮಾದರಿ ಎನ್ನಬಹುದಾದ ಮಿನಿ ಅರಣ್ಯವನ್ನೇ ನಿರ್ಮಿಸಿ ಮತ್ತೊಂದು ಸಾಧನೆ ಮಾಡಿದ್ದಾರೆ. ಯಶಸ್ವಿ ಉದ್ಯಮಿ ಆಗಿದ್ದ ಅವರಯ ಈಗ ಪರಿಸರ ತಜ್ಞ, ಕೃಷಿ ತಜ್ಞ, ಹವಾಮಾನ ತಜ್ಞ ಮಾತ್ರವಲ್ಲ ಯಶಸ್ವಿ ಕೃಷಿಕ ಕೂಡ ಆಗಿದ್ದು, ಜಾಗತಿಕ ಮಟ್ಟದಲ್ಲಿ ಗಣ್ಯರು ಗುರುತಿಸುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಇದಕ್ಕೆಲ್ಲಾ ಅವರ ಮೂರು ವರ್ಷದ ಮೊಮ್ಮಗನ ಆ ಒಂದು ಮಾತು ಎಂದರೆ ನೀವು ನಂಬಲೇಬೇಕು.
ಹೌದು, ಚೆನ್ನೈನಲ್ಲಿ ದೊಡ್ಡ ಉದ್ಯಮಿ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ವಿಶ್ವಕರ್ಮ ಸಮುದಾಯದ ನಾಯಕ ಎಂದು ಹೆಸರು ಮಾಡಿರುವ ಮುರುಗನ್ ಸೆಲ್ವಂ ಇದೀಗ ಹವಾಮಾನ ತಜ್ಞ, ಪರಿಸರ ತಜ್ಞರಾಗಿ ರೂಪುಗೊಂಡಿದ್ದೇ ಒಂದು ವಿಚಿತ್ರ. ಏಕೆಂದರೆ ಚೆನ್ನೈನಲ್ಲಿ ದೊಡ್ಡ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ಮುರುಗನ್ ಸೆಲ್ವಂ ಮಗನಿಗೆ ಎಲ್ಲವನ್ನೂ ಒಪ್ಪಿಸಿ ನಿವೃತ್ತಿ ಜೀವನ ಆರಂಭಿಸಲು ಬಯಸಿದ್ದರು. ಆದರೆ ಮೂರು ವರ್ಷದ ಮೊಮ್ಮಗುವಿಗೆ ಒಂದು ದಿನ ಅಂಗಡಿಯಿಂದ ತಿಂಡಿ-ತಿನಿಸು ತಂದುಕೊಟ್ಟಾಗ ಆತ ನನಗೆ ರಾಸಾನಿಯಕ ಮಿಶ್ರಿತ ತಿಂಡಿ ಬೇಡ. ಆರ್ಗಾನಿಕ್ ತಿಂಡಿ ಬೇಕು ಎಂದು ಕೇಳಿದ. ಇದನ್ನು ಕೇಳಿ ಅವರೇ ಸ್ವತಃ ಅಚ್ಚರಿಗೊಳಗಾದರು. ರಾಸಾಯನಿಕದಿಂದ ಆಗುವ ದುಷ್ಪರಿಣಾಮ ಸೇರಿದಂತೆ ಹಲವು ವಿಷಯಗಳನ್ನು ಅಧ್ಯಯನ ನಡೆಸಿದ ನಂತರ ಮೊಮ್ಮಗುವಿಗೆ ಸಾವಾಯವ ಆಹಾರವನ್ನೇ ನೀಡಲು ಕೃಷಿಯತ್ತ ಆಸಕ್ತಿ ಬೆಳೆಸಿಕೊಂಡರು.
ತಮಿಳುನಾಡಿನ ಸೇಲಂ ಬಳಿಯ ನಾಮಕ್ಕಲ್ ಎಂಬಲ್ಲಿ 20 ಎಕರೆ ಜಾಗ ಪಡೆದು ಎಂಡಿ ಸಯ್ಯೋ ಆರ್ಗಾನಿಕ್ ಫಾರ್ಮ್ ಹೌಸ್ ಮಾಡಿ ಪ್ರಾಯೋಗಿಕವಾಗಿ ಕೃಷಿ ಆರಂಭಿಸಿದರು. 5-7 ವರ್ಷ ಕಳೆಯುವಷ್ಟರಲ್ಲಿ ಇದು ಮಿನಿ ಅರಣ್ಯವಾಗಿ ಬದಲಾಗಿದೆ. ಕೇವಲ ಮರಗಳು ಬೆಳೆಸಿದ್ದಾರೆ ಎಂಬುದು ಮುಖ್ಯವಲ್ಲ. ಔಷಧೀಯ ಗಿಡಗಳು, ದುಬಾರಿ ಗಿಡಗಳು, ವಾಣಿಜ್ಯ ಗಿಡಗಳು, ಟಿಂಬರ್ ಮರಗಳು, ರಕ್ತಚಂದನ, ಶ್ರೀಗಂಧ, ಕಪ್ಪು ಶ್ರೀಗಂಧ, ರೋಸ್ ವುಡ್ ಸೇರಿದಂತೆ ಹಲವು ಮರಗಳು ಬೆಳೆದು ನಿಂತಿವೆ.
ಅಷ್ಟೇ ಅಲ್ಲ, ಈ ಸಣ್ಣ ಜಾಗದಲ್ಲಿ 29 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಟ್ಟಿದ್ದು, ಅವರು ಮರಗಳಾಗಿ ಬೆಳೆದು ನಿಂತಿವೆ. ಸಾಮಾನ್ಯವಾಗಿ 25X20 ಅಡಿ ಅಂತರದಲ್ಲಿ ಮರಗಳನ್ನು ಬೆಳೆಸಲಾಗುತ್ತದೆ. ಆದರೆ ಮುರುಗನ್ ಸೆಲ್ವಂ 10X10 ಅಡಿ ಅಂತರದಲ್ಲಿ ಗಿಡಗಳನ್ನು ನೆಟ್ಟು ಅದು ಯಶಸ್ವಿಯಾಗಿ ಬೆಳೆಸುತ್ತಿದ್ದಾರೆ. ಅರಣ್ಯ ಇಲಾಖೆಗಳ ಮಾರ್ಗಸೂಚಿ ಪ್ರಕಾರ 1 ಎಕರೆಯಲ್ಲಿ 250 ಮರಗಳನ್ನು ಬೆಳೆಸಬಹುದು. ಆದರೆ ಇವರು ಅಷ್ಟೇ ಜಾಗದಲ್ಲಿ 1000ಕ್ಕೂ ಅಧಿಕ ಗಿಡಗಳನ್ನು ನೆಟ್ಟು ಹೆಮ್ಮರವಾಗಿ ಬೆಳೆಯುವಂತೆ ನೋಡಿಕೊಳ್ಳುತ್ತಿದ್ದಾರೆ. ಮತ್ತೂ ವಿಶೇಷ ಅಂದರೆ ಉಷ್ಣ ವಲಯ, ಶೀತ ವಲಯ ಹಾಗೂ ಸಮಶೀತೋಷ್ಣ ವಲಯಗಳಲ್ಲಿ ಬೆಳೆಯುವ ವಿಭಿನ್ನ ಗಿಡಗಳನ್ನು ಒಂದೇ ಜಾಗದಲ್ಲಿ ಬೆಳೆದು ಸೈ ಎನಿಸಿಕೊಂಡಿದ್ದಾರೆ. ಇವರ ಫಾರ್ಮ್ ಹೌಸ್ ನಲ್ಲಿ ಆಸ್ಟ್ರೇಲಿಯಾದ ಮೆಕಡೆಮಿಯಾ, ಆಫ್ರಿಕಾದ ಬ್ಲಾಕ್ ವುಡ್, ಇಂಡೋನೇಷ್ಯಾದ ಅಗರ್ ವುಡ್, ಜಪಾನ್ ನ ಮಿಯಾವಾಕಾ ಮ್ಯಾಂಗೋ, ಚೀನಾದ ಎಡಮಾಮಿಯಾ ಕಾಣಬಹುದು.
ಅಷ್ಟೇ ಅಲ್ಲ ಉದ್ಯಮಿ ಆಗಿದ್ದ ಮುರುಗನ್ ಸೆಲ್ವಂ ವಿಶಿಷ್ಟ ರೀತಿಯ ಹಾಗೂ ಯಾರಿಗೂ ಸಾಧ್ಯವಾಗದ ಮಾದರಿಯ ಹಾಗೂ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಮೂಲಕ ಮಾದರಿ ಆಗಿದ್ದಾರೆ. 16 ಔಷಧೀಯ ಗುಣ ಇರುವ ಗಿಡಗಳನ್ನು ಬೆಳೆದು ಜಗತ್ತಿಗೆ ಔಷಧ ತಯಾರಿಸಲು ಬೇಕಾದ ಕಚ್ಛಾವಸ್ತುಗಳನ್ನು ಪೂರೈಸಲು ಮುಂದಾಗಿದ್ದಾರೆ. ಅಲ್ಲದೇ ತಳಿಗಳ ಅಭಿವೃದ್ಧಿ ಮೂಲಕ ಹೊಸ ಪ್ರಯೋಗಗಳನ್ನು ಮಾಡಿ ಯಶಸ್ವಿಯೂ ಆಗಿದ್ದಾರೆ.
ಅಲ್ಲದೇ ಹವಾಮಾನ ವೈಪರಿತ್ಯ ತಡೆಯಲು ದಟ್ಟ ಕಾಡು ರೂಪಿಸುವುದು ಹೇಗೆ? ಅತ್ಯಂತ ಕಡಿಮೆ ಅವಧಿಯಲ್ಲಿ ವಾಣಿಜ್ಯ ಬೆಳೆಗಳ ಮೂಲಕ ಪ್ರತಿಯೊಬ್ಬ ರೈತ ಕೋಟ್ಯಾಧಿಪತಿ ಆಗುವುದು ಹೇಗೆ? ಸಾವಯಾವ ಕೃಷಿ ಮೂಲಕ ಉತ್ತಮ ಗುಣಮಟ್ಟದ ಬೆಳೆ ಬೆಳೆಯುವುದು ಹೇಗೆ? ಎಂಬ ಬಗ್ಗೆ ಪರಿಣಿತರಾಗಿದ್ದು, ಹಲವು ರಾಜ್ಯಗಳ ವಿದ್ಯಾರ್ಥಿಗಳಿಗೆ ಅತಿಥಿ ಉಪನ್ಯಾಸಕರಾಗಿ ಪಾಠ ಮಾಡುವ ಹಂತಕ್ಕೆ ಬೆಳೆದು ನಿಂತಿದ್ದಾರೆ.
ನಾಮಕಲ್ ಎಂಬಲ್ಲಿ ವಾರ್ಷಿಕ ಸರಾಸರಿ 117 ಸೆಂಟಿ ಮೀಟರ್ ಮೀಟರ್ ಮಳೆಯಾಗುತ್ತಿತ್ತು. ಆದರೆ ಮುರುಗನ್ ಸೆಲ್ವಂ ಈ ಪ್ರದೇಶದಲ್ಲಿ ಮಿನಿ ಕಾಡು ಸೃಷ್ಟಿಸಿದ್ದರಿಂದ ಈ ವರ್ಷ ಸಾರ್ವಕಾಲಿಕ ದಾಖಲೆಯ 4000 ಸೆಂಟಿ ಮೀಟರ್ ಮಳೆ ದಾಖಲಾಗಿದೆ. ಅಲ್ಲದೇ ಇಲ್ಲಿನ ಅಂತರ್ಜಲ ಮಟ್ಟ 1600 ಅಡಿಯಿಂದ 1000ಕ್ಕೂ ಕಡಿಮೆ ಅಡಿಗೆ ಇಳಿದಿದೆ. ಇವರ ಪ್ರಕಾರ ಈ ರೀತಿಯ ಕಾಡು ಬೆಳೆಸುವುದರಿಂದ ವಾಯು ಮಾಲಿನ್ಯ ಶೇ.೫೦ರಷ್ಟು ನಿಯಂತ್ರಿಸಬಹುದು. ಮತ್ತು ಮಳೆಯ ಪ್ರಮಾಣ ಹೆಚ್ಚಿಸಬಹುದಾಗಿದೆ. ಅಲ್ಲದೇ ರೈತರು ಕೂಡ ಈ ಪದ್ಧತಿ ಅಳವಡಿಸಿಕೊಂಡರೆ ಉತ್ತಮ ಆದಾಯವನ್ನೂ ಗಳಿಸಬಹುದಾಗಿದೆ.
ನಾನು ಕೃಷಿ ಅಥವಾ ಸಸ್ಯಶಾಸ್ತ್ರದಲ್ಲಿ ಯಾವುದೇ ಪದವಿ ಪಡೆದಿಲ್ಲ. ಆದರೆ ಸ್ವತಃ ಆಸಕ್ತಿ ವಹಿಸಿ ಈ ಮಿನಿ ಕಾಡನ್ನು ಸೃಷ್ಟಿಸಿದ್ದೇನೆ. ಇದರಿಂದ ಈ ಪರಿಸರದಲ್ಲಿ ಸಾಕಷ್ಟು ಸುಧಾರಣೆ ಆಗಿದೆ. ಇಲ್ಲಿ ಜಾಗ ಖರೀದಿಸಿ ಸಾವಯಾವ ಕೃಷಿ ಮಾಡಲು ನೋಡಿದೆ. ಆದರೆ ಬೋರ್ ವೆಲ್ 1600 ಮೀಟರ್ ಆಳ ಹೋದರೂ ನೀರು ಸಿಗುತ್ತಿರಲಿಲ್ಲ. ಈಗ 1000ಕ್ಕಿಂತ ಕಡಿಮೆಗೆ ನೀರು ಬರುತ್ತಿದೆ. ಮಳೆಯ ಪ್ರಮಾಣ ಕೂಡ ಈ ಭಾಗದಲ್ಲಿ ಹೆಚ್ಚಾಗಿದೆ. ರೈತರು ಈ ಪದ್ಧತಿ ಅಳವಡಿಸಿಕೊಂಡರೆ ಅವರು ಕೋಟ್ಯಂತರ ರೂಪಾಯಿ ಗಳಿಸಬಹುದು.
ವಿಶ್ವದಲ್ಲೇ ಮೊದಲ ಕ್ಯೂಎಸ್ ಪ್ರಮಾಣಪತ್ರ ಲಭಿಸಿದೆ. ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯ ಸರ್ಕಾರಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಈಗ ಉತ್ತರ ಪ್ರದೇಶ, ಉತ್ತರಾಖಂಡ್ ಮುಂತಾದ ರಾಜ್ಯಗಳಲ್ಲೂ ಈ ಕೃಷಿ ಪದ್ಧತಿ ಅಳವಡಿಸಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿರುವೆ.
– ಮುರುಗನ್ ಸೆಲ್ವಂ, ಉದ್ಯಮಿ, ಕೃಷಿ ತಜ್ಞ



