ಪ್ರಸಕ್ತ ವರ್ಷದಿಂದಲೇ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ತೃತೀಯ ಭಾಷೆ ಹಿಂದಿಯನ್ನು ಪರಿಗಣಿಸದಿರಲು ತೀರ್ಮಾನ ಕೈಗೊಂಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣದಲ್ಲಿ ದ್ವಿಭಾಷಾ ನೀತಿ ಜಾರಿ ಮತ್ತು ಖಾಸಗಿ ಶಾಳೆಗಳು ಈ ನಿರ್ಧಾರವನ್ನು ವಿರೋಧಿಸುತ್ತಿರುವ ಬಗ್ಗೆ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದರು.
ಪ್ರಸಕ್ತ ವರ್ಷದಿಂದಲೇ ತೃತೀಯ ಭಾಷೆ ಹಿಂದಿಯನ್ನು ಅಂಕಗಳಿಗೆ ಪರಿಗಣಿಸದೇ, ಎಸ್ಸೆಸ್ಸೆಲ್ಸಿಯಲ್ಲಿ 625 ಅಂಕಗಳನ್ನು 525 ಕ್ಕೆ ನಿಗದಿಪಡಿಸಲು ತೀರ್ಮಾನಿಸಲಾಗಿದೆ . ಸರ್ಕಾರದ ಯಾವುದೇ ತೀರ್ಮಾನಕ್ಕೆ ಬೆಂಬಲ ಇಲ್ಲವೇ ವಿರೋಧವೂ ವ್ಯಕ್ತವಾಗಬಹುದು. ಹಿಂದಿ ಭಾಷೆಯನ್ನು ಕಲಿಯುವುದರಲ್ಲಿ ಸರ್ಕಾರದ ವಿರೋಧವಿಲ್ಲ. ಆದರೆ ಪರೀಕ್ಷೆಯ ಅಂಕಗಳಿಗೆ ಕಡ್ಡಾಯವಾಗಬಾರದು ಎಂದು ಅವರು ಸಮರ್ಥಿಸಿಕೊಂಡರು.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ವಿಶ್ವಾಸ
ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆಯ ಬಗ್ಗೆ ಪ್ರತಿಕ್ರಿಯಿಸಿ, ದಾವಣಗೆರೆ ಹಾಗೂ ಬಾಗಲಕೋಟೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುವ ವಿಶ್ವಾಸವಿದ್ದು, ಸೋಮವಾರದಿಂದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿ, ನಂತರ ಏಪ್ರಿಲ್ 5 ರಂದು ಕೇರಳ ರಾಜ್ಯದ ಚುನಾವಣೆಯ ಪ್ರಚಾರಕ್ಕೂ ತೆರಳುವುದಾಗಿ ತಿಳಿಸಿದರು. ಈ ಹಿಂದೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿತ್ತು. ಇದು ನಮ್ಮ ಮುಂದಿನ ಗೆಲುವಿನ ದಿಕ್ಸೂಚಿಯಾಗಿದೆ. ದಾವಣೆಗೆರೆಯಲ್ಲಿ ಯಾವುದೇ ಗೊಂದಲವಿಲ್ಲ ಎಂದರು.
ಉಪಚುನಾವಣೆಗೂ, ಸಿಎಂ ಸ್ಥಾನ ವಿಚಾರಕ್ಕೂ ಸಂಬಂಧವಿಲ್ಲ
ಈ ಉಪಚುನಾವಣೆಗಳ ಗೆಲುವು, ಸಿಎಂ ಸ್ಥಾನದಲ್ಲಿ ಎದ್ದಿರುವ ಗೊಂದಲಕ್ಕೆ ತೆರೆ ಎಳೆಯಲಿದೆಯೇ ಎಂಬುದಕ್ಕೆ ಪ್ರತಿಕ್ರಯಿಸಿ, ಸಿಎಂ ಸ್ಥಾನ ವಿಚಾರಕ್ಕೂ , ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಪಕ್ಷದ ಹೈಕಮಾಂಡ್ ಅನುಮತಿಸಿದರೆ, ಇನ್ನೆರೆಡು ವರ್ಷವೂ ನಾನೇ ಬಜೆಟ್ ಮಂಡಿಸುತ್ತೇನೆ. ಹೈಕಮಾಂಡ್ ಸೂಚನೆಯ ಮೇರೆಗೆ ನಾವು ನಡೆಯುತ್ತೇವೆ ಎಂದರು.



