Wednesday, August 12, 2026
Google search engine
Homeದೇಶಕರ್ನಾಟಕಕ್ಕೆ ಅಪ್ಪಳಿಸಲಿದೆ ಶೀತದಾಳಿ: 6 ಡಿಗ್ರಿಗೆ ಕುಸಿಯಲಿದೆ ತಾಪಮಾನ!

ಕರ್ನಾಟಕಕ್ಕೆ ಅಪ್ಪಳಿಸಲಿದೆ ಶೀತದಾಳಿ: 6 ಡಿಗ್ರಿಗೆ ಕುಸಿಯಲಿದೆ ತಾಪಮಾನ!

ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿದ್ದು, ಇದರಿಂದ ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಶೀತಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ರಾಜ್ಯದ ಕೆಲ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ ೩ರಿಂದ ೬ ಸೆಲ್ಸಿಯಸ್‌ನಷ್ಟು ಕುಸಿಯಲಿದೆ, ಹಲವೆಡೆ ಮಂಜು ಮುಸುಕಿದ ವಾತಾವರಣ ಕಂಡು ಬರಲಿದ್ದು, ಸಣ್ಣ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇದರಿಂದ ಜನರು ಮನೆಯಿಂದ ಹೊರಗೆ ಬರಬೇಕಾದರೆ ಸಾಕಷ್ಟು ಬೆಚ್ಚಗೆ ಇರುವಂತೆ ಎಚ್ಚರಿಕೆ ವಹಿಸಬೇಕು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಂಗಾಳಕೊಲ್ಲಿಯ ನೈರುತ್ಯ ಹಾಗೂ ಶ್ರೀಲಂಕಾದ ಈಶಾನ್ಯ ಕರಾವಳಿಯಲ್ಲಿ ಶನಿವಾರ ವಾಯುಭಾರ ಕುಸಿತ ಉಂಟಾಗಿದ್ದು, ಉತ್ತರ ವಾಯವ್ಯ ದಿಕ್ಕಿಗೆ ಮಾರುತಗಳು ಚಲಿಸುತ್ತಿವೆ. ಇದರಿಂದ ಕರ್ನಾಟಕದ ಮಳೆ ಮಾದರಿಯ ಮೇಲೆ ಪರಿಣಾಮವಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ರಾಜ್ಯದ ಬಹುತೇಕ ಕಡೆಗಳಲ್ಲಿ ಶುಷ್ಕ ವಾತಾವರಣವಿರಲಿದೆ ಎಂದೂ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತುಮಕೂರು, ಚಿಕ್ಕಮಗಳೂರು, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಲ್ಲಿ ಅಲ್ಪ ಮಳೆಯಾಗಬಹುದು. ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಶಿವಮೊಗ್ಗ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಶುಷ್ಕ ಹವಾಮಾನ ಕಂಡುಬರಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಲಾಗಿದೆ.

ತಮಿಳುನಾಡಿನಲ್ಲಿ ಮಳೆ ಸಾಧ್ಯತೆ

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ತೀವ್ರ ವಾಯುಭಾರ ಕುಸಿತವು ದುರ್ಬಲಗೊಂಡು ಶನಿವಾರ ಉತ್ತರ ಶ್ರೀಲಂಕಾದ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರ ತಿಳಿಸಿತ್ತು. ಈ ವಾಯುಭಾರ ಕುಸಿತ ಪರಿಸ್ಥಿತಿಯಿಂದಾಗಿ ಚೆನ್ನೈ, ಚೆಂಗಲ್ಪಟ್ಟು, ತಿರುವಳ್ಳೂರು, ಕಾಂಚೀಪುರಂ, ವಿಲ್ಲುಪುರಂ, ಕಲ್ಲಕುರಿಚಿ, ಅರಿಯಲೂರ್, ತಂಜಾವೂರು, ಪುದುಕೊಟ್ಟೈ ಮತ್ತು ರಾಮನಾಥಪುರಂ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ.

ಶ್ರೀಲಂಕಾದ ಬಟ್ಟಿಕಲೋವಾದಿಂದ ಈಶಾನ್ಯಕ್ಕೆ ಸುಮಾರು 100 ಕಿ.ಮೀ., ತ್ರಿಕೋನಮಲಿಯಿಂದ ಪೂರ್ವಕ್ಕೆ 100 ಕಿ.ಮೀ., ಪೊಟ್ಟುವಿಲ್ (ಶ್ರೀಲಂಕಾ) ದಿಂದ ಈಶಾನ್ಯಕ್ಕೆ 180 ಕಿ.ಮೀ., ಕಾರೈಕಲ್ ನಿಂದ ಆಗ್ನೇಯಕ್ಕೆ 370 ಕಿ.ಮೀ ಮತ್ತು ಚೆನ್ನೈನಿಂದ 550 ಕಿ.ಮೀ. ಆಗ್ನೇಯಕ್ಕೆ ಇದೆ ಆಳವಾಡ ವಾಯುಭಾರ ಕುಸಿತ ಉಂಟಾಗಲಿದೆ ಎಂದು ಇಲಾಖೆ ವಿವರಿಸಿದೆ.

ವಾಯುಭಾರ ಕುಸಿತದ ಹಿನ್ನೆಲೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಆಳ ಸಮುದ್ರದಲ್ಲಿರುವವರು ಆಗ್ನೇಯ ಮತ್ತು ನೈಋತ್ಯ ಬಂಗಾಳ ಕೊಲ್ಲಿ, ತಮಿಳುನಾಡು – ಪುದುಚೇರಿ ಕರಾವಳಿ, ಮನ್ನಾರ್ ಕೊಲ್ಲಿ ಮತ್ತು ಕೊಮೊರಿನ್ ಪ್ರದೇಶ ತಪ್ಪಿಸುವಂತೆ ಸೂಚಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments