ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಶತಕ ವಂಚಿತರಾದರೂ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ ತಂಡ 4 ವಿಕೆಟ್ ಗಳಿಂದ ಪ್ರವಾಸಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದೆ.
ವಡೋದರದಲ್ಲಿ ಭಾನುವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಭಾರತ ತಂಡದ ನಾಯಕ ಶುಭಮನ್ ಗಿಲ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 8 ವಿಕೆಟ್ ಗೆ 300 ರನ್ ಕಲೆಹಾಕಿತು. ಕಠಿಣ ಗುರಿ ಬೆಂಬತ್ತಿದ ಭಾರತ ತಂಡ 1 ಓವರ್ ಬಾಕಿ ಇರುವಂತೆಯೇ 6 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಭಾರತ ತಂಡಕ್ಕೆ ಸ್ಫೋಟಕ ಆರಂಭ ನೀಡುವ ಯತ್ನದಲ್ಲಿ ಮಾಜಿ ನಾಯಕ ರೋಹಿತ್ ಶರ್ಮ (26) ಬೇಗನೇ ನಿರ್ಗಮಿಸಿದರು. ನಂತರ ಬಂದ ವಿರಾಟ್ ಕೊಹ್ಲಿ ಮತ್ತು ನಾಯಕ ಶುಭಮನ್ ಗಿಲ್ ವೈಯಕ್ತಿಕ ಅರ್ಧಶತಕ ಬಾರಿಸಿದ್ದೂ ಅಲ್ಲದೇ ಶತಕದ ಜೊತೆಯಾಟದಿಂದ ತಂಡವನ್ನು ಉತ್ತಮ ಸ್ಥಿತಿಗೆ ತಲುಪಿಸಿತು.
ಕೊಹ್ಲಿ ಮತ್ತು ಗಿಲ್ ಎರಡನೇ ವಿಕೆಟ್ ಗೆ 128 ರನ್ ಜೊತೆಯಾಟದಿಂದ ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟರು. ಗಿಲ್ 71 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 56 ರನ್ ಬಾರಿಸಿ ಔಟಾದರು. ಏಕದಿನ ಕ್ರಿಕೆಟ್ ನಲ್ಲಿ ಭರ್ಜರಿ ಫಾರ್ಮ್ ಮುಂದುವರಿಸಿರುವ ಕೊಹ್ಲಿ 91 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 93 ರನ್ ಬಾರಿಸಿದ್ದಾಗ ಜೆಮಿಸನ್ ಎಸೆತದಲ್ಲಿ ಔಟಾಗುವ ಮೂಲಕ 7 ರನ್ ನಿಂದ ಶತಕ ವಂಚಿತರಾದರು.
ಈ ಹಂತದಲ್ಲಿ ಜೆಮಿಸನ್ ಮಾರಕ ದಾಳಿಗೆ ತತ್ತರಿಸಿದ ಮಧ್ಯಮ ಕ್ರಮಾಂಕದಲ್ಲಿ ಸತತವಾಗಿ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಇದೇ ವೇಳೆ ವಾಷಿಂಗ್ಟನ್ ಸುಂದರ್ ಬೌಲಿಂಗ್ ವೇಳೆ ಗಾಯಗೊಂಡಿದ್ದ ಕಾರಣ ಬಡ್ತಿ ಪಡೆದು ಬಂದ ಹರ್ಷಿತ್ ರಾಣಾ ಜೊತೆ ಕೆಎಲ್ ರಾಹುಲ್ 37 ರನ್ ಜೊತೆಯಾಟದಿಂದ ಕುಸಿತ ತಡೆದರು.
ಕೆಎಲ್ ರಾಹುಲ್ 21 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 29 ರನ್ ಬಾರಿಸಿದರೆ, ರಾಣಾ 23 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 29 ರನ್ ಬಾರಿಸಿದರು. ಸುಂದರ್ 17 ಎಸೆತಗಳಲ್ಲಿ 7 ರನ್ ಬಾರಿಸಿ ಮಹತ್ವದ ಘಟ್ಟದಲ್ಲಿ ಆಡಿ ಅಜೇಯರಾಗಿ ಉಳಿದರು. ನ್ಯೂಜಿಲೆಂಡ್ ಪರ ಕೇಲ್ ಜೇಮಿಸನ್ 4 ವಿಕೆಟ್ ಪಡೆದರೆ, ಆದಿತ್ಯ ಮತ್ತು ಕ್ರಿಸ್ಟನ್ ಕ್ಲಾರ್ಕ್ ತಲಾ 1 ವಿಕೆಟ್ ಗಳಿಸಿದರು.
ಕೀವೀಸ್ ಗೆ ಡ್ರೈಲ್ ನೆರವು
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ ಮೂವರು ಅರ್ಧಶತಕಗಳ ನೆರವಿನಿಂದ ಉತ್ತಮ ಮೊತ್ತ ಕಲೆಹಾಕಿತು. ಡೆವೊನ್ ಕಾನ್ವೆ ಮತ್ತು ಹೆನ್ರಿ ನಿಕೊಲಸ್ ವೈಯಕ್ತಿಕ ಅರ್ಧಶತಕ ಸಿಡಿಸಿದ್ದೂ ಅಲ್ಲದೇ ಶತಕದ ಜೊತೆಯಾಟದಿಂದ ಉತ್ತಮ ಅರಂಭ ನೀಡಿದರು.
ಕಾನ್ವೆ 67 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 56 ರನ್ ಸಿಡಿಸಿದರೆ, ನಿಕೊಲಸ್ 69 ಎಸೆತಗಳಲ್ಲಿ 8 ಬೌಂಡರಿ ಸಹಾಯದಿಂದ 62 ರನ್ ಗಳಿಸಿದರು. ಇವರಿಬ್ಬರ ನಿರ್ಗಮನದ ನಂತರ ಡ್ರೈಲ್ ಮಿಚೆಲ್ 71 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 48 ರನ್ ಬಾರಿಸಿದರು. ಭಾರತದ ಪರ ಮೊಹಮದ್ ಸಿರಾಜ್, ಹರ್ಷಿತ್ ರಾಣಾ ಮತ್ತು ಪ್ರಸಿದ್ಧ ಕೃಷ್ಣ ತಲಾ 2 ವಿಕೆಟ್ ಪಡೆದು ಗಮನ ಸೆಳೆದರು.



