ಶೀತಗಾಳಿಗೆ ಉತ್ತರ ಭಾರತದ ಜನತೆ ತಲ್ಲಣಿಸುತ್ತಿದ್ದಾರೆ. ಜನರ ಸಂಕಷ್ಟ ನೋಡಲಾಗದೇ ಭಿಕ್ಷುಕನೊಬ್ಬ ಪ್ರತಿಯೊಬ್ಬರಿಂದ 10 ರೂ.ನಂತೆ ಸಂಗ್ರಹಿಸಿ 500ಕ್ಕೂ ಹೆಚ್ಚು ಬಡವರಿಗೆ ಹೊದಿಕೆ ದಾನ ಮಾಡಿ ಮಾದರಿಯಾಗಿದ್ದಾರೆ.
ಈ ಘಟನೆ ನಡೆದಿರುವುದು ಪಂಜಾಬ್ ನ ಪಠಾಣ್ ಕೋಟ್ ನಲ್ಲಿ. ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ವ್ಯಕ್ತಿ ಬಡವರು ಚಳಿಯಿಂದ ರಕ್ಷಿಸಿಕೊಳ್ಳಲು ನಡೆಸುತ್ತಿರುವ ಪರದಾಟ ನಡೆಸಲಾಗದೇ ಅವರ ನೆರವಿಗೆ ಧಾವಿಸಿದ್ದಾರೆ.
ರಾಜು ಎಂಬಾತ ಭಿಕ್ಷೆ ಬೇಡಿ ಸಣ್ಣ ಜೋಪಡಿಯಲ್ಲಿ ವಾಸವಾಗಿದ್ದಾರೆ. ಆದರೆ ಜೋಪಡಿಯಲ್ಲಿ ಇದ್ದರೂ ಮನೆ ಇಲ್ಲದೇ ಮನೆ ಮಠ ಇಲ್ಲದೇ ರಸ್ತೆ ಬದಿ ಇರುವವರ ಕಷ್ಟ ತಾಳಲಾರದೇ ಅಂತವರಿಗೆ 500 ಜನರಿಗೆ ಹೊದಿಕೆ ಹಂಚಿದ್ದಾರೆ.
ಕಷ್ಟದ ನಡುವೆಯೂ ಬೇರೆಯವರಿಗಾಗಿ ಮಾನವೀಯತೆ ಮೆರೆದ ರಾಜು ಅವರ ನಡೆ ಎಲ್ಲರ ಮನಸ್ಸು ಗೆದ್ದಿದೆ. ಹಾಗಂತ ರಾಜು ಇದೇ ಮೊದಲ ಬಾರಿಯೇನೂ ಜನರ ಕಷ್ಟಕ್ಕೆ ಸ್ಪಂದಿಸಿಲ್ಲ.
ಕೋವಿಡ್ ಸಮಯದಲ್ಲಿ ರಾಜು ಸಾಕಷ್ಟು ಜನರ ನೆರವಿಗೆ ಧಾವಿಸಿದ್ದರು. ರಾಜು ಅವರ ಮಾನವೀಯತೆಯನ್ನು ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ನಲ್ಲಿ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದರು.



