ಶಾಲೆ ಚಕ್ಕರ್ ಹೊಡೆಯಬೇಡ ಎಂದು ತಂದೆ ಬುದ್ದಿ ಮಾತು ಹೇಳಿದ್ದಕ್ಕೆ 8ನೇ ತರಗತಿ ವಿದ್ಯಾರ್ಥಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಂಕೆರೆ ಹೋಬಳಿಯಲ್ಲಿ ಗುಡ್ಲು ನಿವಾಸಿ ರಮೇಶ್ ಅವರ ಪುತ್ರ ಹಾಗೂ ಕೆಂಕೆರೆ ಸರ್ಕಾರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಜಗದೀಶ್ (14) ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕ.
ಕೆಲವು ದಿನಗಳಿಂದ ಜಗದೀಶ್ ತನ್ನ ತಾಯಿಯ ತವರು ಮನೆಗೆ ಹೋಗಿದ್ದ. ಶನಿವಾರವಷ್ಟೇ ಊರಿಗೆ ಬಂದಿದ್ದ. ತಂದೆ ರಮೇಶ್, ಇನ್ನು ಮುಂದೆ ಶಾಲೆ ತಪ್ಪಿಸಬೇಡ, ಪ್ರತಿದಿನ ಶಾಲೆಗೆ ಹೋಗು ಎಂದು ಬುದ್ಧಿವಾದ ಹೇಳಿ ಶಾಲೆಗೆ ಕಳುಹಿಸಿದ್ದರು.
ಶಾಲೆಗೆ ತೆರಳಿದ್ದ ಜಗದೀಶ್ ಗೆಳೆಯನೊಂದಿಗೆ ಮನೆಗೆ ಬರುತ್ತಿದ್ದ. ಗೊಲ್ಲರಹಟ್ಟಿ ಸಮೀಪದ ಬಾವಿಯ ಬಳಿ ಬಂದಾಗ, ಜಗದೀಶ್ ತನ್ನ ಗೆಳೆಯನಿಗೆ ನೀನು ಮುಂದೆ ಹೋಗು, ನಾನು ಬರುತ್ತೇನೆ ಎಂದು ಹೇಳಿ ಆತನನ್ನು ಕಳುಹಿಸಿ ಚಪ್ಪಲಿ ಮತ್ತು ಶಾಲಾ ಬ್ಯಾಗ್ ಬಾವಿಯ ಪಕ್ಕದಲ್ಲೇ ಇಟ್ಟು ಬಾವಿಗೆ ಹಾರಿದ್ದಾನೆ. ಶನಿವಾರ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಾಲಕ ಮನೆಗೆ ಬಾರದಿದ್ದಾಗ ಪೋಷಕರು ಹುಡುಕಾಡಿದ್ದು, ಬಾವಿಯ ಪಕ್ಕದಲ್ಲಿ ಬ್ಯಾಗ್ ಮತ್ತು ಚಪ್ಪಲಿ ಕಂಡು ವಿಷಯ ತಿಳಿದುಕೊಂಡಿದ್ದಾರೆ. ಹುಳಿಯಾರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಹೊರತೆಗೆದಿದ್ದಾರೆ.



