ಜೂನ್ 30ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಗಳಿಗೆ ಚುನಾವಣೆ ನಡೆಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ ಸೋಮವಾರ 6 ತಿಂಗಳಲ್ಲಿ ಜಿಬಿಎ ವ್ಯಾಪ್ತಿಯ 5 ಪಾಲಿಕೆಗಳಲ್ಲಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಿದೆ.
ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ಈಗಾಗಲೇ ಮೀಸಲಾತಿಯ ಕರಡು ಅಧಿಸೂಚನೆ ಹೊರಡಿಸಲಾಗಿದೆ ಎಂದು ತಿಳಿಸಿದಾಗ ಫೆಬ್ರವರಿ 20ರೊಳಗೆ ಅಂತಿಮ ಮೀಸಲಾತಿ ಅಧಿಸೂಚನೆ ಹೊರಡಿಸುವಂತೆ ಕೋರ್ಟ್ ಸೂಚನೆ ನೀಡಿತು.
ಮಾರ್ಚ್ 16ರೊಳಗೆ ಮತದಾರರ ಪಟ್ಟಿ ಅಂತಿಮಗೊಳ್ಳಲಿದ್ದು, ಮಾರ್ಚ್‌ನಲ್ಲಿ ಎಸ್ಎಸ್ಎಲ್‌ಸಿ ಸೇರಿದಂತೆ ವಿವಿಧ ಪರೀಕ್ಷೆಗಳು ನಡೆಯಲಿವೆ. ಹೀಗಾಗಿ ಮೇ 26ರೊಳಗೆ ಚುನಾವಣಾ ದಿನಾಂಕ ಘೋಷಿಸಿ, ಜೂನ್ ತಿಂಗಳೊಳಗೆ ಚುನಾವಣೆ ಪ್ರಕ್ರಿಯೆ ಮುಗಿಸಲಾಗುವುದು ಎಂದು ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆಎನ್ ಫಣೀಂದ್ರ ಕೋರ್ಟ್‌ಗೆ ತಿಳಿಸಿದ್ದಾರೆ.



