Sunday, June 28, 2026
Google search engine
Homeರಾಜ್ಯತೊಗರಿಬೇಳೆ, ಕಬ್ಬಿಗೆ ಬೆಂಬಲ ಬೆಲೆ ನಿಗದಿಪಡಿಸಲು ಒತ್ತಾಯಿಸಿ ಕೇಂದ್ರಕ್ಕೆ ಕಾಂಗ್ರೆಸ್ ಸಂಸದರ ನಿಯೋಗ ಪತ್ರ

ತೊಗರಿಬೇಳೆ, ಕಬ್ಬಿಗೆ ಬೆಂಬಲ ಬೆಲೆ ನಿಗದಿಪಡಿಸಲು ಒತ್ತಾಯಿಸಿ ಕೇಂದ್ರಕ್ಕೆ ಕಾಂಗ್ರೆಸ್ ಸಂಸದರ ನಿಯೋಗ ಪತ್ರ

ದಾವಣಗೆರೆ/ನವದೆಹಲಿ; ಕರ್ನಾಟಕ ರಾಜ್ಯದಲ್ಲಿ‌ ಭಾರತದ ರಾಷ್ಟ್ರೀಯ ಕೃಷಿ‌ ಸಹಕಾರಿ ಮಾರುಕಟ್ಟೆ ಒಕ್ಕೂಟ ಹಾಗೂ ಭಾರತದ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟದ ಮೂಲಕ ತೊಗರಿಬೇಳೆ‌ ಹಾಗೂ ಕಬ್ಬು ಬೆಳೆಗೆ ಕನಿಷ್ಠ ಬೆಂಬಲ‌ ಬೆಲೆ ನಿಗದಿಗೆ ಕೂಡಲೇ ಅನುಮೋದನೆ ನೀಡಬೇಕೆಂದು ನವದೆಹಲಿಯಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಸೇರಿದಂತೆ ಕರ್ನಾಟಕದ ಸಂಸದರ ನಿಯೋಗ ತೆರಳಿ ಮನವಿ ಸಲ್ಲಿಸಿದ್ದಾರೆ.

ಈಗಾಗಲೇ ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಪ್ರಧಾನ ಮಂತ್ರಿಗಳಿಗೆ ಮನವಿ ಮಾಡಿದ್ದಾರೆ ಅವರ ಮನವಿಯನ್ನು ಪರಿಗಣಿಸುವಂತೆ ಈ‌ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದರು ಉಲ್ಲೇಖಿಸಿದ್ದಾರೆ.

ಕೇಂದ್ರ ಸರ್ಕಾರದ ವಿಳಂಬದ ಪರಿಣಾಮವಾಗಿ ಕರ್ನಾಟಕದ ತೊಗರಿ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಪ್ರಸ್ತುತ ಖಾರೀಫ್‌ ಹಂಗಾಮು 2025–26 ರಲ್ಲಿ, ಕರ್ನಾಟಕದಲ್ಲಿ ಸುಮಾರು 16.80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆ ಬಿತ್ತನೆಗೊಂಡಿದ್ದು, 12.60 ಲಕ್ಷ ಮೆಟ್ರಿಕ್ ಟನ್‌ಗಳಿಗಿಂತ ಹೆಚ್ಚಿನ ಉತ್ಪಾದನೆಯ ನಿರೀಕ್ಷೆಯಿದೆ. ಈ ಬೆಳೆ ಕಲಬುರಗಿ, ಯಾದಗಿರಿ, ಬೀದರ, ರಾಯಚೂರು, ವಿಜಯಪುರ, ಕೊಪ್ಪಳ, ಬೆಳಗಾವಿ, ಬಳ್ಳಾರಿ, ವಿಜಯನಗರ, ಬಾಗಲಕೋಟೆ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗ ಸೇರಿ ರಾಜ್ಯದ ಪ್ರಮುಖ ಜಿಲ್ಲೆಗಳ ಲಕ್ಷಾಂತರ ರೈತರಿಗೆ ಆರ್ಥಿಕ ಬೆನ್ನೆಲುಬಾಗಿದೆ ಎಂದು ಕೇಂದ್ರ ಸಚಿವರ ಗಮನಸೆಳೆದರು.

ಪ್ರಸ್ತುತ ಮಾರುಕಟ್ಟೆಯ ಬೆಲೆ ಕ್ವಿಂಟಾಲ್‌ಗೆ ₹5,830ರಿಂದ ₹6,700ರ ನಡುವೆ ಇದೆ. ಆದರೆ 2025–26ರ ತೊಗರಿಬೆಳೆಗೆ ಕೇಂದ್ರ ಸರ್ಕಾರ ಪ್ರಕಟಿಸಿರುವ ಕನಿಷ್ಠ ಬೆಂಬಲ ಬೆಲೆ (MSP) ಕ್ವಿಂಟಾಲ್‌ಗೆ ಸುಮಾರು ₹8,000. ಬೆಳೆಯ ಆಗಮನದ ಗರಿಷ್ಠ ಅವಧಿ ಡಿಸೆಂಬರ್ 2025–ಜನವರಿ 2026ರೊಳಗೆ ಶುರುವಾಗಲಿದ್ದು, ಖರೀದಿ ಕೇಂದ್ರಗಳನ್ನು ಕೇಂದ್ರ ಸರ್ಕಾರ ಫೆಬ್ರವರಿ,ಮಾರ್ಚ್ ತಿಂಗಳಲ್ಲಿ ಮಾತ್ರ ಆರಂಭಿಸಲು ನಿರ್ಧರಿಸಿದೆ.

ಇದರಿಂದಾಗಿ ರೈತರು ತೀವ್ರ ಆದಾಯ ನಷ್ಟದ ಅಪಾಯವನ್ನು ಎದುರಿಸುತ್ತಿದ್ದಾರೆ.

ಮಾರುಕಟ್ಟೆ ಬೆಲೆ ಎಂಎಸ್ ಪಿ ಗಿಂತ ಕಡಿಮೆಯಾಗುವಾಗ, ಅದು ಕೇವಲ ಆರ್ಥಿಕತೆಯ ಪ್ರಶ್ನೆಯಲ್ಲ, ಅದು ರೈತ ಮತ್ತು ಸರ್ಕಾರದ ನಡುವಿನ ನಂಬಿಕೆಯ ಪ್ರಶ್ನೆಯಾಗಿದೆ. ಸರ್ಕಾರ ನೀಡಿದ ಎಂಎಸ್ ಪಿ ಭರವಸೆಯನ್ನು ನಂಬಿ ರೈತರು ಬಿತ್ತಿರುತ್ತಾರೆ. ಪ್ರತಿಯೊಂದು ವಿಳಂಬದ ದಿನವೂ ಕರ್ನಾಟಕದ ರೈತರನ್ನು ಬಲವಂತದ ನಷ್ಟದಲ್ಲಿ ಮಾರಾಟಕ್ಕೆ, ಸಾಲದ ಬಲೆಗೆ ಮತ್ತು ಶಾಶ್ವತ ಆರ್ಥಿಕ ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ, 2025ರ ನವೆಂಬರ್‌ 6ರಂದು ಕರ್ನಾಟಕ ಸರ್ಕಾರವು ತೊಗರಿಬೇಳೆಗೆ ತಕ್ಷಣದ MSP ಖರೀದಿಗೆ ಸಂಬಂಧಿಸಿದಂತೆ NAFED ಮತ್ತು NCCF ಮುಖಾಂತರ ಖರೀದಿ ಪ್ರಕ್ರಿಯೆ ಆರಂಭಿಸಲು ಅಧಿಕೃತ ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ ಮಾರುಕಟ್ಟೆಗೆ ಬೆಳೆ ಬರುವ ಹಂತಕ್ಕೆ ತಲುಪುತ್ತಿರುವುದರೂ, ಈವರೆಗೆ ಕೇಂದ್ರದಿಂದ ಯಾವುದೇ ಅನುಮೋದನೆ ಲಭಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರೈತರಿಗೆ ಖರೀದಿ ವಿಳಂಬದಿಂದ ಉಂಟಾಗುವ ಹಾನಿ ಒಂದು ಹಂಗಾಮಿನಷ್ಟಕ್ಕೆ ಸೀಮಿತವಲ್ಲ. ಇದು ಸಾರ್ವಜನಿಕ ಸಂಸ್ಥೆಗಳ ಮೇಲಿನ ಅವರ ನಂಬಿಕೆಯ ಪ್ರಶ್ನೆಯಾಗಿದೆ. ಆದ್ದರಿಂದ ಕರ್ನಾಟಕದ ರೈತರಿಗೆ ನೆರವಾಗುವಂತೆ ಕೇಂದ್ರ ಸರ್ಕಾರವೇ ಘೋಷಿಸಿರುವ ಎಂಎಸ್ ಪಿಯನ್ನು ಸಮಯಕ್ಕೆ ಸರಿಯಾಗಿ ಜಾರಿಗೆ ತರಬೇಕು ಎಂದು ಮನವಿ ಮಾಡಿದ್ದಾರೆ.

ನಿಯೋಗದಲ್ಲಿ ಸಂಸದರುಗಳಾದ ಶ್ರೀ ಜಿ.ಕುಮಾರ್ ನಾಯಕ್, ಶ್ರೀ ಇ.ತುಕಾರಾಂ,ಶ್ರೀ ಶ್ರೇಯಸ್ ಪಟೇಲ್,ಶ್ರೀ ಸುನೀಲ್ ಬೋಸ್,ಶ್ರೀ ಸಾಗರ್ ಖಂಡ್ರೆ ಅವರುಗಳು‌ ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments