ಹೈದರಾಬಾದ್: ತೆಲಂಗಾಣ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಕಾಂಗ್ರೆಸ್ 74 ಪುರಸಭೆಗಳಲ್ಲಿ ಅಧಿಕಾರ ಹಿಡಿದಿದೆ.
ಸಿಎಂ ರೇವಂತ್ ರೆಡ್ಡಿ ನೇತೃತ್ವದ ಆಡಳಿತಾರೂಢ ಕಾಂಗ್ರೆಸ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಅಧಿಪತ್ಯ ಸ್ಥಾಪಿಸಿದರೆ, ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಹಾಗೂ ಬಿಜೆಪಿ ಹೀನಾಯ ಸೋಲು ಕಂಡಿದೆ.
2,996 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 1,537 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿ 116 ಪುರಸಭೆಗಳ ಪೈಕಿ ಸುಮಾರು 74ರಲ್ಲಿ ಸ್ಪಷ್ಟ ಬಹುಮತ ಪಡೆದು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಬಿಆರ್‌ಎಸ್ 781 ವಾರ್ಡ್‌ಗಳಲ್ಲಿ ಜಯ ಗಳಿಸಿ ಎರಡನೇ ಸ್ಥಾನಕ್ಕೆ ಕುಸಿದಿದ್ದು, ಕಳೆದ ಬಾರಿಗೆ ಹೋಲಿಸಿದರೆ ದೊಡ್ಡ ಪ್ರಮಾಣದಲ್ಲಿ ಹಿನ್ನಡೆ ಅನುಭವಿಸಿದೆ.
ಬಿಜೆಪಿ 336 ವಾರ್ಡ್‌ಗಳನ್ನು ಗೆಲ್ಲುವ ಮೂಲಕ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಎಐಎಂಐಎಂ 66 ಮತ್ತು ಸಿಪಿಐ(ಎಂ) 13 ವಾರ್ಡ್‌ಗಳಲ್ಲಿ ಜಯಗಳಿಸಿವೆ.
ಸುಮಾರು 30 ಪುರಸಭೆಗಳಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೆ ಅತಂತ್ರ ಫಲಿತಾಂಶ ಬಂದಿದ್ದು, ಪಕ್ಷೇತರರು ಮತ್ತು ಇತರ ಸಣ್ಣ ಪಕ್ಷಗಳ ಬೆಂಬಲ ನಿರ್ಣಾಯಕವಾಗಲಿದೆ.
ಕರೀಂನಗರ, ನಿಝಾಮಾಬಾದ್ ನಲ್ಲಿ ಬಿಜೆಪಿಗೆ ಗೆಲುವು
ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಅವರ ಸ್ವಕ್ಷೇತ್ರದ ಕರೀಂನಗರ ಮಹಾನಗರ ಪಾಲಿಕೆ ಮತ್ತು ಸಂಸದ ಧರ್ಮಪುರಿ ಅರವಿಂದ್ ಅವರ ಸ್ವಕ್ಷೇತ್ರದ ನಿಝಾಮಾಬಾದ್ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಕರೀಂ ನಗರ ಪಾಲಿಕೆಯ ಒಟ್ಟು 66 ಸ್ಥಾನಗಳಲ್ಲಿ ಸ್ಪಷ್ಟ ಬಹುಮತಕ್ಕೆ 34 ಸ್ಥಾನಗಳ ಅಗತ್ಯವಿದೆ. ಬಿಜೆಪಿ 30 ಸ್ಥಾನಗಳನ್ನು ಗೆದ್ದಿದ್ದು, ಕರೀಂನಗರ ಸಂಸದರ ಬೆಂಬಲ ಮತ್ತು ಪಕ್ಷೇತರರ ಸಹಾಯದೊಂದಿಗೆ ಮೇಯರ್ ಪೀಠ ಅಲಂಕರಿಸುವುದು ಬಹುತೇಕ ಖಚಿತವಾಗಿದೆ.
ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಅವರ ಸ್ವಕ್ಷೇತ್ರ ಖಮ್ಮಂ ಜಿಲ್ಲೆಯ ಮಧಿರ ಪುರಸಭೆಯಲ್ಲಿ ಕಾಂಗ್ರೆಸ್ ಮೈತ್ರಿಕೂಟ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷವಾದ ಟಿಡಿಪಿ ಒಟ್ಟು 21 ವಾರ್ಡ್‌ಗಳಲ್ಲಿ ಜಯಗಳಿಸಿವೆ. ಕಾಂಗ್ರೆಸ್ ಸ್ವತಃ 18 ಸ್ಥಾನಗಳನ್ನು ಗೆದ್ದುಕೊಂಡರೆ, ಟಿಡಿಪಿ 3 ವಾರ್ಡ್‌ಗಳಲ್ಲಿ ಜಯ ದಾಖಲಿಸಿದೆ.
ಪ್ರಬಲ ವಿರೋಧ ಪಕ್ಷಗಳಾದ ಬಿಆರ್‌ಎಸ್ ಮತ್ತು ಸಿಪಿಐ(ಎಂ) ಮೈತ್ರಿಕೂಟವು ಕೇವಲ 1 ವಾರ್ಡ್‌ಗೆ ಸೀಮಿತಗೊಂಡಿದೆ. ಭಟ್ಟಿ ವಿಕ್ರಮಾರ್ಕ ಅವರ ತಳಮಟ್ಟದ ಪ್ರಚಾರ ಮತ್ತು ಅಭಿವೃದ್ಧಿ ಕಾರ್ಯಸೂಚಿ ಈ “ಕ್ಲೀನ್ ಸ್ವೀಪ್”ಗೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗಿದೆ.



