57 ವರ್ಷದ ಮಹಿಳೆಯನ್ನು ಮೊಸಳೆ ನೀರಿನೊಳಗೆ ಎಳೆದೊಯ್ದ ಘಟನೆ ಓಡಿಶಾದ ಜಾಜ್ ಪುರದ ಖಾರಾಸ್ರೊಟಾ ನದಿಯಲ್ಲಿ ನಡೆದಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಂಜಾಹರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕನಿಟಾ ಗ್ರಾಮದ ನಿವಾಸಿ ಸೌಂಟಾಮಿನಿ ಮಹಾಲ ಎಂಬ ಮಹಿಳೆ ಮೊಸಳೆ ಹೊತ್ತೊಯ್ದ ನಂತರ ನಾಪತ್ತೆಯಾಗಿದ್ದು, ರಕ್ಷಣಾ ಸಿಬ್ಬಂದಿ ಹುಡುಕಾಟ ನಡೆಸಿದೆ.
ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ನದಿಯಲ್ಲಿ ಸ್ನಾನ ಮಾಡಲು ಇಳಿದಿದ್ದ ಮಹಿಳೆಯನ್ನು ಮೊಸಳೆ ಎಳೆದೊಯ್ದಿದೆ. ನದಿಯ ದಂಡೆಯ ಮೇಲಿದ್ದ ಸ್ಥಳೀಯರು ಕೂಡಲೇ ನದಿಗೆ ಇಳಿದು ಮಹಿಳೆಯನ್ನು ರಕ್ಷಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ರಕ್ಷಣಾ ಪಡೆ ಹಾಗೂ ಪೊಲೀಸರು ಮಹಿಳೆಗಾಗಿ ಶೋಧ ಕಾರ್ಯ ನಡೆಸಿದ್ದು, ಒಂದು ದಿನ ಕಳೆದರೂ ಮಹಿಳೆ ಪತ್ತೆಯಾಗಿಲ್ಲ.



